Advertisement

Mudhola: ನಗರಸಭೆ ಚುನಾವಣೆ; ಒಂದು ಮತದಿಂದ ಅಧಿಕಾರ ಕಳೆದುಕೊಂಡ ಬಿಜೆಪಿ!

07:16 PM Aug 26, 2024 | Team Udayavani |

ಮುಧೋಳ: ಅಧಿಕಾರ ಹಿಡಿಯಲು ಬಿಜೆಪಿ -ಕಾಂಗ್ರೆಸ್‌ ನಡುವಿನ ತೀವ್ರ ಪೈಪೋಟಿಯ ನಡುವೆ ನಡೆದ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸುನಂದಾ ಹನಮಂತ ತೇಲಿ ಅಧ್ಯಕ್ಷ ಹಾಗೂ ಮೆಹಬೂಬಸಾಬ ಮುಕ್ತುಮ್ ಸಾಬ ಬಾಗವಾನ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಬಿಜೆಪಿ ಸ್ವಲ್ಪದರಲ್ಲಿ ಅಧಿಕಾರದಿಂದ ವಂಚಿತವಾಗಿದೆ

Advertisement

ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ  ಸುನಂದಾ ತೇಲಿ ಹಾಗೂ ಬಿಜೆಪಿ ವತಿಯಿಂದ ಗಾಯತ್ರಿ ಸಿಂಗಾಡಿ  ನಾಮಪತ್ರ ಸಲ್ಲಿಸಿದ್ದರು. ಕೈ ಎತ್ತುವ ಮೂಲಕ ನಡೆದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಂದಾ ತೇಲಿ 17ಮತಗಳ  ಪಡೆದರೆ ಪ್ರತಿಸ್ಪರ್ಧಿ ಗಾಯತ್ರಿ ಸಿಂಗಾಡಿ ಅವರು 16ಮತಗಳ ಪಡೆದು ಕೇವಲ‌ ಒಂದು ಮತದ ಅಂತರದಿಂದ ಸುನಂದಾ ತೇಲಿ ಅಧ್ಯಕ್ಷರಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಮೆಹಬೂಬಸಾಬ್ ಮುಕ್ತುಮ್  ಹಾಗೂ ಬಿಜೆಪಿಯಿಂದ ರಾಜೇಸಾಬ ದಸ್ತಗೀರಸಾಬ ರಫುಗಾರ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನದಲ್ಲೂ ಒಂದು ಮತದಿಂದ ಕಾಂಗ್ರೆಸ್ ಅಭ್ಯರ್ಥಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಕುತೂಹಲ ಮೂಡಿಸಿದ್ದ ಸದಸ್ಯರ ನಡೆ :
ಚುನಾವಣೆ ಕೊನೆಯವರೆಗೂ ಮತದಾನದ ಗುಟ್ಟುಬಿಟ್ಟುಕೊಡದ ಸದಸ್ಯರು ಕೊನೆಯಲ್ಲಿ ತಮ್ಮ ತಮ್ಮ ಅಭ್ಯರ್ಥಿ ಪರ‌ ಕೈ ಎತ್ತಿ ಚುನಾವಣೆಯ ಕುತೂಹಲ ಹಂತಕ್ಕೆ ಕೊಂಡೊಯ್ದರು. ಚುನಾವಣೆ ಪೂರ್ವದಲ್ಲೇ  ಬಿಜೆಪಿಯ ನಾಲ್ವರು ಸದಸ್ಯರು‌ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದರು.

ಇದನ್ನರಿತ ಬಿಜೆಪಿ‌ ಮುಖಂಡರು ಕಾಂಗ್ರೆಸ್ ನ ಮೂವರು ಸದಸ್ಯರ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದರೂ ಗೆಲುವಿಗೆ ಬೇಕಾದ ಇನ್ನೊಂದು ಮತ ಪಡೆಯುವಲ್ಲಿ‌ ವಿಫಲಗೊಂಡು ಅಧಿಕಾರದಿಂದ ಬಿಜೆಪಿ  ವಂಚಿತವಾಗುವಂತಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಎರಡು ದಿನಗಳಿಂದ ನಗರದಲ್ಲಿಯೇ ವಾಸ್ತವ್ಯ ಹೂಡಿ ಅಧಿಕಾರವನ್ನುಕಾಂಗ್ರೆಸ್‌  ಪಕ್ಷದ ತೆಕ್ಕೆಗೆ ಪಡೆಯುವಲ್ಲಿ ಯಶಸ್ವಿಯಾದರು.

Advertisement

ಎಲ್ಲರೂ ಒಂದಾಗಿ ಅಭಿವೃದ್ದಿಗೆ ಶ್ರಮಿಸಿ: ಸಚಿವ ತಿಮ್ಮಾಪುರ
ನಗರಸಭೆಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಬೆಂಬಲಿತ  ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಭಿನಂದಿಸಿ‌ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಚುನಾವಣೆಯಲ್ಲಿ‌ ನಮ್ಮ‌‌ ಪಕ್ಷದ‌ ಅಭ್ಯರ್ಥಿಗಳಿಗೆ ಪ್ರತ್ಯಕ್ಷ ಹಾಗೂ‌ ಪರೋಕ್ಷವಾಗಿ ಬೆಂಬಲಿಸಿದ ಸದಸ್ಯರಿಗೆ ಅಭಿನಂದನೆ ತಿಳಿಸಿದರು. ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯ ಬೆರೆಸದೆ ಎಲ್ಲರೂ ಒಟ್ಟಾಗಿ ಶ್ರಮವಹಿಸಬೇಕು ಎಂದರು.

ನಗರಕ್ಕೆ ಮುಖ್ಯವಾಗಿ ಶೌಚಾಲಯ, ಕುಡಿವ ನೀರು, ಬೈಪಾಸ್ ಸೇರಿ ಹಲವಾರು ಸಮಸ್ಯೆಗಳಿದ್ದು ಅವುಗಳ ನಿವಾರಣೆಗೆ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಕೆಲಸ‌ ನಿರ್ವಹಿಸಬೇಕು ಎಂದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ನಗರಸಭೆ ಸದಸ್ಯರಾದ ಡಾ.ಸತೀಶ ಮಲಘಾಣ, ಸಂತೋಷ ಪಾಲೋಜಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸಂಜಯ ತಳೇವಾಡ, ಸದುಗೌಡ ಪಾಟೀಲ ಸೇರಿದಂತೆ ಇತರರಿದ್ದರು.

ಬಿಜೆಪಿಯಿಂದ 7 ಮಂದಿಯ ಉಚ್ಚಾಟನೆ
ನಗರಸಭೆ ಚುನಾವಣೆಯಲ್ಲಿ‌ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ  ಹಿನ್ನೆಲೆ‌ಯಲ್ಲಿ ಬಿಜೆಪಿ‌ಯ 7 ಮಂದಿಯನ್ನು ಪಕ್ಷದ ಪ್ರಾಥಮಿಕ‌ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಸಂಗಣ್ಣ ಕಾತರಕಿ ಹಾಗೂ ನಗರ ಘಟಕ ಅಧ್ಯಕ್ಷ ಕರಬಸಯ್ಯ ಹಿರೇಮಠ ತಿಳಿಸಿದ್ದಾರೆ.

ಬಿಜೆಪಿ ಮುಖಂಡ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ, ಪಕ್ಷದ ಮುಖಂಡರಾದ ಬಸವರಾಜ ಮಾನೆ, ಪುಂಡಲೀಕ ಭೋವಿ ಹಾಗೂ ಬಿಜೆಪಿ ಬೆಂಬಲಿತ ನಗರಸಭೆ ಸದಸ್ಯರಾದ ಪಾರ್ವತೆವ್ವ ಹರಗಿ, ಸುನಿತಾ ಭೋವಿ, ಸದಾಶಿವ ಜೋಶಿ ಹಾಗೂ ಸುರೇಶ್‌ ಕಾಂಬಳೆ‌ ಅವರನ್ನು ಉಚ್ಚಾಟಿಸಲಾಗಿದೆ ಎಂದು ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next