ಮುಧೋಳ : ನಗರಸಭೆ ಕಚೇರಿಯಲ್ಲಿ ಇಂದು ನಡೆಯಬೇಕಿದ್ದ ಸಾಮಾನ್ಯ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ನಿಗಧಿತ ಸಮಯಕ್ಕಿಂತ ತಡವಾಗಿ ಆಗಮಿಸಿದ ಹಿನ್ನೆಲೆ ಸುಮಾರು ಎರಡು ಗಂಟೆಗಳವರೆಗೆ ಕಾದ ಬಿಜೆಪಿ ಸದಸ್ಯರು ಸಚಿವರ ನಡೆಯನ್ನು ಖಂಡಿಸಿ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ನಗರಸಭೆ ಕಚೇರಿಯಿಂದ ಹೊರನಡೆದರು.
ಈ ಕುರಿತು ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಗುರುಪಾದ ಕುಳಲಿ, ಜಿಲ್ಲಾ ಉಸ್ತುವಾರಿ ಸಚಿವರು ನಿಗಧಿತ ಸಮಯಕ್ಕೆ ಸಭೆಗೆ ಆಗಮಿಸುವುದಿಲ್ಲ. ಈ ಬಗ್ಗೆ ನಾವು ಅಧಿಕಾರಿಗಳನ್ನು ಪ್ರಶ್ನಿಸಿದರೆ, ಉಸ್ತುವಾರಿ ಸಚಿವರು ಆಗಮಿಸುವವರೆಗೆ ಸಾಮಾನ್ಯ ಸಭೆ ನಡೆಸುವುದಿಲ್ಲ ಎಂದು ತಿಳಿಸುತ್ತಾರೆ. ಸಾರ್ವಜನಿಕರ ಸಮಸ್ಯೆ ಕುರಿತು ಚರ್ಚಿಸಬೇಕಾದ ಸಭೆಯ ಗಂಭಿರತೆ ಅರಿಯದ ಸಚಿವರು ತಮಗೆ ಮನಸ್ಸಿಗೆ ಬಂದಾಗ ಸಭೆಗೆ ಆಗಮಿಸುತ್ತಾರೆ. ಸಚಿವರ ನಡೆಯಿಂದ ಸಾಮಾನ್ಯ ಸಭೆಯಲ್ಲಿ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾವು ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದು ತಿಳಿಸಿದರು.
ನಗರಸಭೆ ಸದಸ್ಯರಿಗೆ ಒಂದುವಾರಕ್ಕಿಂತ ಮುಂಚೆಯೇ ಸಾಮಾನ್ಯ ಸಭೆ ನಡೆಯುವ ಬಗ್ಗೆ ಲಿಖಿತವಾಗಿ ಮಾಹಿತಿ ನೀಡಲಾಗಿದೆ ಆದರೂ ಸಚಿವರೇ ಸಭೆಗೆ ತಡವಾಗಿ ಆಗಮಿಸುತ್ತಿರುವುದು ನೋವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಗರಸಭೆ ಸದಸ್ಯರಾದ ಕುಮಾರ ಪಮ್ಮಾರ, ಮಂಜು ಮಾನೆ, ಸ್ವಾತಿ ಕುಲಕರ್ಣಿ, ಲಕ್ಷ್ಮಿ ದಾಸರ, ಸುನೀಲ ನಿಂಬಾಳ್ಕರ ಸೇರಿದಂತೆ ಬಿಜೆಪಿ ಸಧಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ಇದನ್ನೂ ಓದಿ: Udupi: ಸರಕಾರಿ ವಸತಿ ಗ್ರಹಕ್ಕೆ ನುಗ್ಗಿದ ಕಳ್ಳರು… ಲಕ್ಷಾಂತರ ಮೌಲ್ಯದ ನಗನಗದು ದೋಚಿ ಪರಾರಿ