Advertisement
ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ಸಾವಿರಾರು ಹೆಕ್ಟೇರ್ ಬೆಳೆನಾಶವಾಗಿದ್ದು ಕೃಷಿಕರ ಬದುಕು ಹೈರಾಣಾಗಿಸಿದೆ. ಇನ್ನೊಂದೆಡೆ ಕೃಷಿ ಭೂಮಿ ಇಲ್ಲದೆ ಮತ್ತೊಬ್ಬರ ಜಮೀನಿನಲ್ಲಿ ಪಾಲುದಾರಿಕೆಯಲ್ಲಿ ಸಾಗುವಳಿ ಮಾಡುತ್ತಿದ್ದ ಕೃಷಿ ಕಾರ್ಮಿಕರ ಬದುಕು ಮತ್ತಷ್ಟು ಶೋಚನೀಯವಾಗಿದೆ.
Related Articles
Advertisement
ಆದರೆ ಪ್ರವಾಹದ ಬಳಿಕ ಸರ್ಕಾರ ಸಮೀಕ್ಷೆ ನಡೆಸಿ ನಿಗದಿಪಡಿಸಿದ ಪರಿಹಾರ ಮೊತ್ತವನ್ನೆಲ್ಲ ಮಾಲೀಕನ ಖಾತೆಗೆ ಜಮಾ ಮಾಡುತ್ತದೆ. ಇದರಿಂದ ಅಲ್ಪಮೊತ್ತದ ಹೂಡಿಕೆ ಮಾಡಿರುವ ಬಡ ಕೃಷಿ ಕಾರ್ಮಿಕನಿಗೆ ಯಾವ ಹಣವೂ ದೊರೆಯುವುದಿಲ್ಲ.
ಮಾನವೀಯತೆ ಮೆರೆಯಬೇಕು: ಇನ್ನು ಸರ್ಕಾರದ ಮಟ್ಟದಲ್ಲಿ ಇಂತಹ ಪಾಲುದಾರಿಕೆ ಕೃಷಿ ಕಾರ್ಮಿಕರನ್ನು ಗುರುತಿಸುವುದು ಕಷ್ಟಸಾಧ್ಯ. ಜಮೀನು ಮಾಲೀಕರೆ ಮಾನವೀಯತೆಯಿಂದ ಸರ್ಕಾರದ ಪರಿಹಾರ ಹಣದಲ್ಲಿ ಸ್ವಲ್ಪ ಮೊತ್ತವನ್ನಾದರೂ ಕೃಷಿ ಕಾರ್ಮಿಕನಿಗೆ ನೀಡದರೆ ಅವರಿಗೂ ಅಲ್ಪಸ್ವಲ್ಪ ಆಸರೆಯಾಗುತ್ತದೆ. ಬಡತನದ ನಡುವೆ ದಿನದ ಕೂಳಿಗಾಗಿ ಪಾಲಿನಂತೆ ಕೃಷಿ ಕಾರ್ಯದಲ್ಲಿ ತೊಡಗುವ ಕಾರ್ಮಿಕರನ್ನು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಜಮೀನು ಮಾಲೀಕರು ಕೈ ಹಿಡಿಬೇಕು ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಅಧಿಕಾರಿಯೋರ್ವರು.
ಗಾಯದ ಮೇಲೆ ಬರೆ: ಘಟಪ್ರಭಾ ಪ್ರವಾಹಕ್ಕೆ ಮುಧೋಳ ತಾಲೂಕಿನ ಸರಿ ಸುಮಾರು 38 ಗ್ರಾಮಗಳ ಜಮೀನಿನಲ್ಲಿನ ಬೆಳೆಗಳಿಗೆ ನೀರು ನುಗ್ಗುತ್ತದೆ. ಪ್ರವಾಹದ ವಿಕೋಪಕ್ಕೆ ಸಿಲುಕಿ ಮನೆ-ಮಠ ಕಳೆದುಕೊಂಡು ಬದುಕು ಬೀದಿಗೆ ಬಂದಿದೆ. ಇಂದೋ ನಾಳೆ ಉತ್ತಮ ಫಸಲು ಬಂದು ನಮ್ಮ ಆರ್ಥಿಕ ಬದುಕು ಹಸನಾಗುತ್ತದೆ ಎಂಬ ಕನಸು ಕಮರಿ ಹೋಗಿದ್ದು, ಸಾವಿರಾರು ಭೂ ರಹಿತ ಕೃಷಿ ಕಾರ್ಮಿಕರ ಜೀವನ ಅಯೋಮಯವಾಗಿದೆ.
ಬಹುತೇಕ ಕಡೆಗಳಲ್ಲಿ ಪಾಲುದಾರಿಕೆ ಕೃಷಿ ಮೌಖಿಕ ಕರಾರಿನ ಮೇಲೆ ನಡೆಯುತ್ತದೆ. ಒಂದು ವೇಳೆ ದಾಖಲಾತಿ ಒಪ್ಪಂದ ಮಾಡಿಕೊಂಡಿದ್ದರೂ ಭೂ ಒಡೆಯನ ಎದುರು ನಿಂತು ಪರಿಹಾರಕ್ಕಾಗಿ ಪಟ್ಟು ಹಿಡಿಯುವುದು ಸಾಮರಸ್ಯಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ಇದರಿಂದ ಪರಿಹಾರವೂ ಇಲ್ಲ ಹಾಕಿದ ಬಂಡವಾಳವೂ ಇಲ್ಲದಂತಾಗಿ ಬಡ ಕೃಷಿ ಕಾರ್ಮಿಕರಿಗೆ ಗಾಯದ ಮೇಲೆ ಬರೆ ಎಳೆದಂತಹ ಪರಿಸ್ಥಿತಿ ಉಂಟಾಗಿದೆ.
ಮುಧೋಳ ತಾಲೂಕಿನಲ್ಲಿಯೇ ಹೆಚ್ಚು ಹಾನಿ: ಇದುವರೆಗೂ ಇರುವ ಮಾಹಿತಿ ಪ್ರಕಾರ ಘಟಪ್ರಭಾ ನದಿ ಪ್ರವಾಹಕ್ಕೆ ಮುಧೋಳ ತಾಲೂಕಿನಲ್ಲಿಯೇ ಹೆಚ್ಚು ಬೆಳೆ ಜಲಾವೃತವಾಗಿದೆ. ಜಿಲ್ಲೆಗೆ ಹೋಲಿಕೆ ಮಾಡಿದರೆ 2791 ಹೆಕ್ಟೇರ್ ಕೃಷಿ ಬೆಳೆ ಹಾಗೂ 285 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಇದು ಇನ್ನುಳಿದ ಎಂಟು ತಾಲೂಕುಗಳಿಗಿಂತಲೂ ಹೆಚ್ಚಿನ ಜಲಾವೃತ ಬೆಳೆಯಾಗಿದೆ. ಪ್ರವಾಹ ನಿರೀಕ್ಷಿತಮಟ್ಟದಲ್ಲಿ ಇಳಿಮುಖವಾಗದ ಕಾರಣ ಜಲಾವೃತ ಪ್ರಮಾಣ ಹೆಚ್ಚಾಗುವ ಲಕ್ಷಣವೂ ಇದೆ.
ಅದೇನೆ ಇದ್ದರೂ ಮಾನವೀಯತೆ ದೃಷ್ಟಿಯಲ್ಲಿ ಜಮೀನು ಮಾಲೀಕರು ತಮಗೆ ಬರುವ ಪರಿಹಾರ ಮೊತ್ತದಲ್ಲಿ ತಮ್ಮ ಭೂ ರಹಿತ ಕೃಷಿ ಕಾರ್ಮಿಕರಿಗೆ ಅಲ್ಪಮೊತ್ತದ ಆರ್ಥಿಕ ನೆರವು ನೀಡಿದರೆ ಬಡ ಕೃಷಿ ಕಾರ್ಮಿಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದು.
ನಮಗೆ ಸ್ವಂತ ಜಮೀನು ಇಲ್ಲ ನಮ್ಮೂರಿನ ಶ್ರೀಮಂತರ 8 ಎಕರೆ ಜಮೀನಿನಲ್ಲಿ ಪಾಲುದಾರಿಕೆಯಲ್ಲಿ ಕಬ್ಬು, ಹೆಸರು ಮತ್ತು ವಿವಿಧ ಬಗೆಯ ಬೆಳೆ ಬೆಳೆದಿದ್ದೆ. ಇದೀಗ ಬೆಳೆ ಮುಳುಗುವ ಹಂತಕ್ಕೆ ನೀರು ನಿಂತಿದೆ. ಸಾಲ ಮಾಡಿ ಕೃಷಿ ಮಾಡಿದ್ದೆ. ಎಲ್ಲವೂ ನೀರಲ್ಲಿ ಹೋಮ ಮಾಡಿದಂತಾಗಿದೆ. ಸರ್ಕಾರ ನೀಡುವ ಪರಿಹಾರದಲ್ಲಿ ಜಮೀನು ಮಾಲೀಕರನ್ನು ನಮಗೂ ಕೊಡಿ ಎಂದು ಕೇಳುವುದಾದರೂ ಹೇಗೆ ? – ಹೆಸರು ಹೇಳಲಿಚ್ಚಿಸದ ಭೂ ರಹಿತ ಕೃಷಿ ಕಾರ್ಮಿಕ
-ಗೋವಿಂದಪ್ಪ ತಳವಾರ ಮುಧೋಳ