Advertisement
ಈಗಾಗಲೇ ಭಾರತೀಯ ಸೇನೆ, ರಾಜಸ್ತಾನದ ಎಸ್‌ಎಸ್‌ಬಿ ಹಾಗೂ ರಾಜ್ಯದ ಸಿಆರ್‌ಪಿಎಫ್‌ಗೆ ಆಯ್ಕೆಯಾಗಿರುವ ಮುಧೋಳ ಶ್ವಾನಕ್ಕೆ ಎನ್ ಎಸ್‌ಜಿ ಕಮಾಂಡೋ ಪಡೆ ನಾಲ್ಕು ಮರಿಗಳಿಗೆ ಬೇಡಿಕೆ ಸಲ್ಲಿಸಿದೆ. ಇನ್ನೆರಡು ವಾರದಲ್ಲಿ ದೆಹಲಿಯ ಎನ್‌ಎಸ್‌ಜಿ ಪಡೆಯ ಹಿರಿಯ ಅಧಿಕಾರಿಗಳು ತಿಮ್ಮಾಪುರದಲ್ಲಿರುವ ಮುಧೋಳ ಶ್ವಾನ ಸಂಶೋಧನೆ ಮತ್ತು ಸಂರಕ್ಷಣೆ ಕೇಂದ್ರಕ್ಕೆ ಆಗಮಿಸಿ, ಮರಿಗಳನ್ನು ತೆಗೆದುಕೊಂಡು ಹೋಗಲಿದ್ದಾರೆ. ಈ ಕೇಂದ್ರದಲ್ಲಿ ಸದ್ಯ 45 ಮುಧೋಳ ಶ್ವಾನ ಮರಿಗಳಿದ್ದು, ಅದರಲ್ಲಿ ಎನ್ ಎಸ್‌ಜಿ ಅಧಿಕಾರಿಗಳೇ ಮರಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.
Related Articles
ಮುಧೋಳ ಶ್ವಾನ ವಿಶ್ವದ 332 ಶ್ವಾನ ತಳಿಗಳಲ್ಲೇ ಅತಿ ವಿಶೇಷವಾಗಿದೆ. ಭಾರತದಲ್ಲಿ 20 ದೇಶೀಯ ತಳಿಗಳಿದ್ದು, ಅದರಲ್ಲಿ 7 ತಳಿಗಳು ಮಾತ್ರ ಪ್ರಚಲಿತದಲ್ಲಿವೆ. ರಾಜಪಾಳೆ, ಕನ್ನಿ, ಕುಂಷಿ, ಸೋಲಕಿ, ಪಶ್ಮಿ, ಗ್ರೆಯ್ ಹೌಂಡ್, ಅಪಾನ್ ಹೌಂಡ್ ಹಾಗೂ ಮುಧೋಳ ತಳಿ ಈಗ ಹೆಚ್ಚು ಪ್ರಚಲಿತದಲ್ಲಿದೆ. ಈ ಏಳು ತಳಿಗಳಲ್ಲೇ ಮುಧೋಳ ತಳಿ ಅತ್ಯಂತ ಕಡಿಮೆ ದೇಹ ಭಾರ ಹೊಂದಿರುವ ಮತ್ತು ಅತ್ಯಂತ ಬಲಿಷ್ಠವಾದ ಶ್ವಾನ. ಅಲ್ಲದೇ ಕೈ-ಕಾಲು ಅತ್ಯಂತ ಉದ್ದ-ಎತ್ತರವಿದ್ದು, ಗಂಟೆಗೆ 50 ಕಿಮೀ ವೇಗ ಓಡಬಲ್ಲ ಸಾಮರ್ಥ್ಯ ಹೊಂದಿವೆ. ಉಳಿದ ಶ್ವಾನಗಳ ದೇಹ ಭಾರವಾಗಿದ್ದು, ಗಂಟೆಗೆ 25ರಿಂದ 30 ಕಿಮೀ ಮಾತ್ರ ಓಡಬಲ್ಲವು. ಮುಧೋಳ ನಾಯಿಯ ಇನ್ನೊಂದು ವಿಶೇಷವೆಂದರೆ ಮೂರು ಕಿಮೀ ದೂರದಿಂದಲೇ ವಾಸನೆ ಕಂಡು ಹಿಡಿಯಬಲ್ಲ ಸಾಮರ್ಥ್ಯ ಹೊಂದಿವೆ. ಉಳಿದ ನಾಯಿಗಳಿಗೆ 1 ಕಿಮೀ ವ್ಯಾಪ್ತಿಯ ವಾಸನೆ ಅರಿಯುವ ಸಾಮರ್ಥ್ಯವಿದೆ. ಹೀಗಾಗಿ ಭದ್ರತಾ ಪಡೆ ಮಿಲಿಟರಿ ಸೇವೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.
Advertisement