ಮುದಗಲ್ಲ: 2016-17ನೇ ಸಾಲಿನ ಪಿಎಂಜಿಎಸ್‌ವೈ ಯಡಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಛತ್ತರ ರಾಮಜಿನಾಯ್ಕ ತಾಂಡಾದಿಂದ ಹಡಗಲಿ ಗ್ರಾಮದವರೆಗಿನ ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ತನ್ನ ವ್ಯಾಪ್ತಿ ಮೀರಿ ಜಿಪಂಗೆ ಸೇರಿದ ರಸ್ತೆ ಕಾಮಗಾರಿ ನಿರ್ವಹಣೆ ಮಾಡಿದ್ದರಿಂದ ಈಗ ಪಿಎಂಜಿಎಸ್‌ವೈ ಇಲಾಖೆ ಮತ್ತು ಜಿಪಂ ಇಲಾಖೆಯಲ್ಲಿ ಗೊಂದಲ ಸೃಷ್ಟಿಯಾಗಿದೆ.
2016-17ನೇ ಸಾಲಿನ ಪಿಎಂಜಿಎಸ್‌ವೈ ಇಲಾಖೆ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿ ಸುಮಾರು 3,40,20,000 ರೂ.ಗಳಲ್ಲಿ ಛತ್ತರ ರಾಮಜಿ ನಾಯ್ಕ ತಾಂಡಾದಿಂದ ಹಡಗಲಿ ಗ್ರಾಮದವರೆಗಿನ 4.350 ಮೀಟರ್ ಉದ್ದದ ರಸ್ತೆ ಕಾಮಗಾರಿಗೆ ಆಗಿನ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದ್ದರು.
ಗುತ್ತಿಗೆದಾರ ತನ್ನ ವ್ಯಾಪ್ತಿ ಮೀರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಿಪಂಗೆ ಸೇರಿದ ಛತ್ತರ ಗ್ರಾಮದ ರಸ್ತೆಯನ್ನು ನಿರ್ವಹಿಸುತ್ತಿರುವುದರಿಂದ ಎರಡೂ ಇಲಾಖೆ ಅಧಿಕಾರಿಗಳಲ್ಲಿ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜಿಪಂ ಕಿರಿಯ ಅಭಿಯಂತರ ವೆಂಕಟೇಶ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಜಿಪಂಗೆ ಸಂಬಂಧಿಸಿದೆ. ಈ ರಸ್ತೆಗೆ ಲಿಂಗಸುಗೂರ ಶಾಸಕ ಡಿ.ಎಸ್. ಹೂಲಗೇರಿ ಛತ್ತರ-ಛತ್ತರ ರಾಮಜಿನಾಯ್ಕ ತಾಂಡಾದವರೆಗೆ ಲೆಕ್ಕ ಶೀರ್ಷಿಕೆ 30:54 ಲಮ್‌ಸಮ್ ಅಡಿಯಲ್ಲಿ ಸುಮಾರು 44ಲಕ್ಷ ರೂ.ಗಳನ್ನು ಮೀಸಲಿರಿಸಿ ಭೂಮಿ ಪೂಜೆ ಮಾಡಿದ್ದಾರೆ.
ತಾವು ಡಾಂಬರ್ ಮಾಡುತ್ತಿರುವ ರಸ್ತೆಗೆ ನಮ್ಮ ಇಲಾಖೆ ಸಿಸಿ ರಸ್ತೆ ನಿರ್ಮಿಸಲು ಅಂದಾಜು ಪತ್ರಿಕೆ ತಯಾರಿಸಿ ಆಡಳಿತ ಮತ್ತು ತಾಂತ್ರಿಕ ಮಂಜೂರಾತಿ ಪಡೆದಿದೆ. ಗುತ್ತಿಗೆದಾರರು ಕಾಮಗಾರಿ ಆರಂಭಿಸುತ್ತಾರೆ. ತಮ್ಮ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಿಸಿ ಎಂದು ಕೇಳಿಕೊಂಡರೂ ಗುತ್ತಿಗೆದಾರರು ಕಾಮಗಾರಿ ಮಾಡುತ್ತಿದ್ದಾರೆಂದು ಅವರು ಪತ್ರಿಕೆಗೆ ತಿಳಿಸಿದರು.
ಇತ್ತ ಹಡಗಲಿ ಮತ್ತು ರಾಮಪ್ಪನ ತಾಂಡಾ, ಲಿಂಬೆಪ್ಪನ ತಾಂಡಾದ ಜನತೆ ಮಸ್ಕಿ ಕ್ಷೇತ್ರದ ಶಾಸಕರ ಅನುದಾನವನ್ನು ಮಸ್ಕಿ ಕ್ಷೇತ್ರದ ವ್ಯಾಪ್ತಿಯ ಜನರ ಸೌಕರ್ಯಕ್ಕಾಗಿ ಬಳಸಲಿ. ಹಡಗಲಿ ಗ್ರಾಮದಲ್ಲಿ ಉಳಿದ ರಸ್ತೆ ನಿರ್ಮಿಸಿಕೊಡುವಂತೆ ಕೇಳಿಕೊಂಡರೂ ಮನಸ್ಸು ಮಾಡದ ಗುತ್ತಿಗೆದಾರರು ತಮ್ಮ ವ್ಯಾಪ್ತಿ ಮೀರಿ ಲಿಂಗಸುಗೂರ ಕ್ಷೇತ್ರದ ಕಡೆ ರಸ್ತೆ ನಿರ್ಮಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಗ್ರಾಪಂ ಸದಸ್ಯ ಗ್ಯಾನಪ್ಪ ವೇಣ್ಯಪ್ಪನ ತಾಂಡಾ, ದುರುಗಪ್ಪ, ಬಸಪ್ಪ, ಸಂತೋಷ, ರವಿ, ರೆಡ್ಡಪ್ಪ, ಲಿಂಬೆಪ್ಪ, ಪತ್ಯಪ್ಪ, ಶೇಟಪ್ಪ, ಕಾಮಣ್ಣ , ಗುಂಡಪ್ಪ, ಮಾನಪ್ಪ ಆರೋಪಿಸಿದ್ದಾರೆ.
ಸಂಬಂಧಿಸಿದ ಇಲಾಖೆ ಹಿರಿಯ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಪರಿಶೀಲಿಸಬೇಕು. ಇಲ್ಲವಾದಲ್ಲಿ ಕಾಮಗಾರಿ ತಡೆದು ಪ್ರತಿಭಟಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಛತ್ತರ ರಾಮಜಿ ನಾಯ್ಕ ತಾಂಡಾದಿಂದ ಹಡಗಲಿ ಗ್ರಾಮದ ವರೆಗೆ 4,350ಮೀಟರ್ ಉದ್ದದ ರಸ್ತೆ ನಿರ್ಮಿಸಬೇಕು. ನಮ್ಮ ಇಲಾಖೆ ಸರ್ವೇಯಲ್ಲಿ ಇಲ್ಲದ ರಸ್ತೆ ನಿರ್ಮಿಸಿದರೆ ನಮಗೆ ಸಂಬಂಧವಿಲ್ಲ. ಅದಕ್ಕೆ ನಾವು ಎನ್‌ಬಿ ರೆಕಾರ್ಡ್ ಮಾಡಿ ಬಿಲ್ ಪಾವತಿಸುವುದಿಲ್ಲ.
ಶಂಕರ,
ಅಭಿಯಂತರರು ಪಿಎಂಜಿಎಸ್‌ವೈ ರಸ್ತೆ, ಲಿಂಗಸುಗೂರು.