ದಾವಣಗೆರೆ: ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಎಂ. ಮುದೇಗೌಡ್ರ ಗಿರೀಶ್, ಉಪಾಧ್ಯಕ್ಷರಾಗಿ ಎಂ.ಬಿ. ಹಾಲೇಶಪ್ಪ ಆಯ್ಕೆಯಾಗಿದ್ದಾರೆ. ಸೋಮವಾರ ಎಪಿಎಂಸಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ 20 ತಿಂಗಳ ಅವಧಿಗೆ ದಾವಣಗೆರೆ ಕ್ಷೇತ್ರದ ಗಿರೀಶ್ ಬಿಜೆಪಿಯ ಅಭ್ಯರ್ಥಿ ಆರ್. ಸುಧಾ ವಿರುದ್ಧ 10,-6, ಹದಡಿ ಕ್ಷೇತ್ರದ ಎಂ.ಬಿ. ಹಾಲೇಶಪ್ಪ ಬಿಜೆಪಿಯ ಎಚ್.ಎಸ್. ಮಂಜುನಾಥ ವಿರುದ್ಧ ಅಷ್ಟೇ ಆಂತರದ ಗೆಲುವು ಸಾಧಿಸಿದರು.
ಮುದೇಗೌಡ್ರ ಗಿರೀಶ್ 2ನೇ ಬಾರಿಗೆ ಅಧ್ಯಕ್ಷ ಗಾದಿ ಅಲಂಕರಿಸಿದ್ದಾರೆ. ಒಟ್ಟು 14 ಸ್ಥಾನಗಳ ಸಮಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ 10, ಬಿಜೆಪಿ ಬೆಂಬಲಿತ 4 ಸ್ಥಾನಗಳಿದ್ದವು. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇದ್ದ ಹಿನ್ನೆಲೆಯಲ್ಲಿ ಸುಲಭವಾಗಿ ಅಧಿಕಾರ ಹಿಡಿಯಿತು. ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಹಶೀಲ್ದಾರ್ ಸಂತೋಷ್, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಘೋಷಣೆಮಾಡಿದರು.
ಚುನಾವಣೆ ಮುಗಿಯುತ್ತಲೇ ಕಾಂಗ್ರೆಸ್ ಕಾರ್ಯಕರ್ತರು ಹರ್ಷೋದ್ಘಾರ ಮೊಳಗಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗಿರೀಶ್ ಮತ್ತು ಹಾಲೇಶಪ್ಪಗೆ ಹೂಮಾಲೆ ಹಾಕಿ, ಮೈಸೂರು ಪೇಟ ತೊಡಿಸಿ ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿದರು. ಎಪಿಎಂಸಿ ಮಾಜಿ ಸದಸ್ಯ ಎನ್.ಜಿ. ಪುಟ್ಟಸ್ವಾಮಿ, ಕಾರ್ಯದರ್ಶಿ ಆನಂದ್, ಮಾಜಿ ಉಪ ಮೇಯರ್ ಗಳಾದ ಗೌಡ್ರ ರಾಜಶೇಖರ್, ಅಬ್ದುಲ್ ಲತೀಫ್, ಜಿಪಂ ಸದಸ್ಯ ಬಸವಂತಪ್ಪ, ಜಿಪಂ ಮಾಜಿ ಸದಸ್ಯ ಕರಿಬಸಪ್ಪ ಸೇರಿದಂತೆ ವಿವಿಧ ಗಣ್ಯರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಎಪಿಎಂಸಿಯನ್ನು ರಾಜ್ಯಕ್ಕೆ ನಂ.1 ಮಾಡಬೇಕು ಎಂಬ ಗುರಿ ಇದೆ. ಹಾಲಿ ಸಾಕಷ್ಟು ಕೆಲಸ ನಡೆಯುತ್ತಿವೆ. ಅವುಗಳನ್ನು ಪೂರ್ಣಗೊಳಿಸಿ, ಅಭಿವೃದ್ಧಿ ಕೈಗೊಳ್ಳಲಾಗುವುದು. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಎಪಿಎಂಸಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾರ್ಗದರ್ಶನದಲ್ಲಿ ಉತ್ತಮ ಕೆಲಸಮಾಡಲು ಶ್ರಮಿಸಲಾಗುವುದು ಎಂದರು. ಎಪಿಎಂಸಿ ಕರ ವಸೂಲಿ ಪ್ರಮಾಣ ಈ ಬಾರಿ ಕಡಿಮೆ ಆಗಿದೆ.
9.58 ಕೋಟಿ ರೂಪಾಯಿ ಗುರಿ ಹೊಂದಲಾಗಿತ್ತು. ಹಾಲಿ 7.5 ಕೋಟಿ ರೂಪಾಯಿ ವಸೂಲಾಗಿದೆ. ಭದ್ರಾ ಜಲಾಶಯದಲ್ಲಿ ನೀರಿಲ್ಲದಂತಾಗಿದ್ದರಿಂದ ಭತ್ತದ ಬೆಳೆ ಬಂದಿಲ್ಲ. ಹೀಗಾಗಿ ಇನ್ನೊಂದು ಕೋಟಿ ರೂ. ಮಾತ್ರ ವಸೂಲಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಇನ್ನು ಆರ್‌ಐಡಿಎಫ್ ಅಡಿ ಈಗಾಗಲೇ 20 ಕೋಟಿ ರೂ. ಬಂದಿದೆ. ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೂ 30 ಕೋಟಿ ರೂ. ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಅದು ಬಂದ ನಂತರ ಗ್ರಾಮಾಂತರ ಪ್ರದೇಶದ ಮಾರುಕಟ್ಟೆಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು. ಎಲ್ಲಾ ಕಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು. ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕೊಡಿಸಲು ಬೆಲೆ ಆಯೋಗದೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಮಾರುಕಟ್ಟೆ ಉಪ ಯೋಜನೆ, ಅಸೈಡ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅನುದಾನ ತರಬೇಕಿದೆ.
ನಮ್ಮ ಮಾರುಕಟ್ಟೆ ಪ್ರದೇಶ ಸಂಪೂರ್ಣ ಅಭಿವೃದ್ಧಿಗೊಂಡಿದ್ದು, ಎಲ್ಲಾ ವರ್ತಕರು, ದಲ್ಲಾಳಿಗಳು ಎಲೆಕ್ಟಾನಿಕ್ ತೂಕದ ಯಂತ್ರ ಹಾಕುವಂತೆ ಸೂಚಿಸಲಾಗುವುದು. ಈಗಾಗಲೇ ಬಹುತೇಕರು ಎಲೆಕ್ರಾನಿಕ್ ತೂಕದ ಯಂತ್ರ ಹಾಕಿದ್ದರೆ ಹತ್ತಿ, ತೂಗಲು ಮಾತ್ರ ಇ- ತೂಕ ಯಂತ್ರ ಅಳವಡಿಕೆ ಸಾಧ್ಯವಾಗುತ್ತಿಲ್ಲ. ಮುಂದೆ ಅದನ್ನೂ ಸಹ ಸರಿಪಡಿಸಲಾಗುವುದು ಎಂದು ಹೇಳಿದರು. ಉಪಾಧ್ಯಕ್ಷ ಎಂ.ಬಿ. ಹಾಲೇಶಪ್ಪ ಮಾತನಾಡಿ, ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಒತ್ತುನೀಡಲಾಗುವುದು. ಹೊಲಕ್ಕೆ ಹೋಗುವ ರಸ್ತೆ, ಬಂಡಿಜಾಡುಗಳ ಅಭಿವೃದ್ಧಿಗೆ ಒತ್ತುಕೊಡಲಾಗುವುದು ಎಂದರು.