ಸೈದಾಪುರ: ಎರಡು-ಮೂರು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಭಾಗದ ಮಣ್ಣಿನ ರಸ್ತೆಗಳೆಲ್ಲವು ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ.
ಸಮೀಪದ ಮಲ್ಹಾರ ಗ್ರಾಮದ ಶರಣಪ್ಪ ಬಜಾರ ಅವರ ಹೊಲದಿಂದ ಭೀಮಾ ನದಿಗೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆ ಸಂಪೂರ್ಣ ಹದ್ದಗೆಟ್ಟಿದ್ದು ಕೃಷಿ ಚಟುವಟಿಕೆಗಳಿಗೆ ಹೋಗುವ ರೈತರು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ.
ರೈತರು ಸುಮಾರು ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಭೀಮಾ ನದಿ ತಟದಲ್ಲಿರುವ ಹೊಲಗಳಿಗೆ ಹೋಗಬೇಕಾದರೆ ಬೇರೆ ಮಾರ್ಗವಿಲ್ಲ. ಇರುವ ಈ ಮಾರ್ಗವು ಕೆಸರಿನಿಂದ ಕೂಡಿದ್ದರಿಂದ ಕೂಲಿ ಕಾರ್ಮಿಕರು ಈ ಮಾರ್ಗದಲ್ಲಿರುವ ಹೊಲಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಹೊಲಗಳಲ್ಲಿ ಕಳೆ ತುಂಬಿ ಬೆಳೆ ನಾಶವಾಗುತ್ತಿದೆ. ಅದನ್ನು ಸ್ವಚ್ಛಗೊಳಿಸಲು ಜನ ಬರುತ್ತಿಲ್ಲ. ಅಲ್ಲದೇ ಬೆಳೆದ ರಾಶಿ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ.
ನಡೆದುಕೊಂಡು ಹೋದರೆ ಮೊಳಕಾಲು ಮುಳುಗುವಷ್ಟು ಕೆಸರು ಇದೆ. ಹೀಗಾಗಿ ರಸ್ತೆ ಪಕ್ಕದಲ್ಲಿನ ರೈತರ ಹೊಲಗಳಲ್ಲಿ ಬಂಡಿ, ವಾಹನ, ಜನರು ಹೋದರೆ ಅವರು ಬಾಯಿಗೆ ಬಂದಂತೆ ಬೈಯುತ್ತಾರೆ ಎಂದು ರೈತ ಭೀಮರಾಯ ತಳವಾಡಿ ಮತ್ತು ಸಿದ್ದಪ್ಪ ಗಿರಿಣಿ ತಮ್ಮ ಅಳಲು ತೋಡಿಕೊಂಡರು. ಅಲ್ಲದೇ ಮೊಹರಂ ಸೇರಿದಂತೆ ಇನ್ನಿತರ ಹಬ್ಬಗಳಲ್ಲಿ ದೇವರ ಮೂರ್ತಿಗಳು ಹೊತ್ತು ಗಂಗಾ ಸ್ನಾನಕ್ಕೆ ಭೀಮಾ ನದಿಗೆ ಇದೇ ಮಾರ್ಗವಾಗಿ ಹೋಗಿಬರುವಾಗ ಅನುಭವಿಸುವ ಕಷ್ಟ ಸಾಮಾನ್ಯವಾದುದ್ದಲ್ಲ ಎನ್ನುತ್ತಾರೆ ಗ್ರಾಮಸ್ಥ ಮಲ್ಲಿಕಾರ್ಜುನ.
ಈ ಸಮಸ್ಯೆ ಕುರಿತು 2 ವರ್ಷಗಳ ಹಿಂದೆ ಪ್ರವಾಹ ಪರಿಸ್ಥಿತಿ ಉಂಟಾದಾಗ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕರಿಗೆ ಮನವಿ ಸಹ ನೀಡಲಾಗಿದೆ. ಆದರೆ ಇಲ್ಲಿಯವರೆಗೆ ಸಂಬಂಧಪಟ್ಟ ಯಾವುದೇ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕ್ರಮಕೈಗೊಂಡಿಲ್ಲ. ಇದರಿಂದ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ. ಆದ್ದರಿಂದ ಈ ಮಣ್ಣಿನ ರಸ್ತೆಯನ್ನು ಶೀಘ್ರದಲ್ಲಿ ಸಿಸಿ ರಸ್ತೆಯನ್ನಾಗಿ ಪರಿವರ್ತಿಸಿಕೊಡಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.