Advertisement

ಮುದ್ದಿನಕೊಪ್ಪ ಟ್ರೀ ಪಾರ್ಕ್‌ಗೆ ಹೊಸ ರೂಪ

06:59 PM Dec 29, 2020 | Suhan S |

ಶಿವಮೊಗ್ಗ: ಮಲೆನಾಡಿನ ಹೆಬ್ಟಾಗಿಲು ಎಂದು ಖ್ಯಾತಿ ಪಡೆದ ಶಿವಮೊಗ್ಗ ನಗರ ಅಭಿವೃದ್ಧಿ ಹೆಸರಲ್ಲಿ ಮರಗಿಡಗಳನ್ನು ಕಳೆದುಕೊಂಡು ಬಿಸಿಲು ನಾಡಾಗಿತ್ತು. ಹೆಸರಿಗೆ ಮಲೆನಾಡದರೂ ಬೇಸಿಗೆಯಲ್ಲಿ 42 ಡಿಗ್ರಿವರೆಗೂ ತಾಪಮಾನ ಏರಿಕೆಯಾಗುವ ಹಂತ ತಲುಪಿದೆ. ಹೀಗಾಗಿ ಬಯಲು ಸೀಮೆಯಂತಾಗಿರುವ ಶಿವಮೊಗ್ಗವನ್ನು ಮತ್ತೆ ಹಸಿರಿನ ತಾಣವಾಗಿಸಲು ಜಿಲ್ಲೆಯ ಪರಿಸರಾಸಕ್ತರು ಮುಂದಾಗಿದ್ದು ಶಿವಮೊಗ್ಗಕ್ಕೆ ಹೊಂದಿಕೊಂಡಿರುವ ಬೆಟ್ಟ -ಗುಡ್ಡಗಳನ್ನು ಹಸಿರೀಕರಣಗೊಳಿಸುವ ಕೆಲಸಮಾಡುತ್ತಿದ್ದು, ಇದರಲ್ಲಿ ಮುದ್ದಿನಕೊಪ್ಪ ಟ್ರೀ ಪಾರ್ಕ್‌ ಕೂಡಾ ಒಂದಾಗಿದೆ.

Advertisement

ಪರಿಸರ ಪ್ರಿಯರು ಸಾಗರ ರಸ್ತೆಯಲ್ಲಿರುವ ಮುದ್ದಿನಕೊಪ್ಪ ಟ್ರೀ ಪಾರ್ಕ್‌ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಸುಂದರ ಪ್ರವಾಸಿತಾಣವಾಗಿಸಲು ಮುಂದಡಿ ಇಟ್ಟಿದ್ದು, ಸರಕಾರಕ್ಕೆ ಮನವಿ ಕೂಡ ಮಾಡಿದ್ದಾರೆ.ಅಂದುಕೊಂಡಂತೆ ಆದರೆ ಕೆಲವೇವರ್ಷಗಳಲ್ಲಿ ಹಚ್ಚ ಹಸಿರಿನ ಸುಂದರ ತಾಣಜನರ ಭೇಟಿಗೆ ಲಭ್ಯವಾಗಲಿದೆ.

28 ಎಕರೆಯಲ್ಲಿ ಸಾವಿರಾರು ಗಿಡ: ಶಿವಮೊಗ್ಗದಿಂದ 13 ಕಿ.ಮೀ ದೂರದಲ್ಲಿರುವ ಮುದ್ದಿನಕೊಪ್ಪ ಬರ ಪ್ರದೇಶವಾಗಿತ್ತು. ಅರಣ್ಯ ಇಲಾಖೆಗೆ ಸೇರಿದ್ದ ಈ ಜಾಗದಲ್ಲಿ ಯಾವುದೇ ಮರಗಿಡಗಳೂ ಸಹ ಇರಲಿಲ್ಲ. ಪಕ್ಕಾ ಬಯಲಾಗಿದ್ದ ಈ ಜಾಗ ಈಗ ಮರಗಿಡಗಳಿಂದ ಕೂಡಿದೆ. ಪ್ರಸ್ತುತ 28 ಎಕರೆ ವಿಸ್ತೀರ್ಣದಲ್ಲಿ ಸಾವಿರಾರು ಮರಗಿಡಗಳನ್ನು ಬೆಳೆಸಲಾಗಿದೆ. 16 ಜಾತಿಯ ಬಿದಿರಿನ ತಳಿ ಬೆಳೆಸಲಾಗಿದೆ. ಪಶ್ಚಿಮ ಘಟ್ಟದಲ್ಲಿ ಸಿಗುವ ಮರಗಳನ್ನು ಬೆಳೆಸಲಾಗಿದೆ. ಮಕ್ಕಳ ಆಟದ ಉಪಕರಣಗಳನ್ನು ಅಳವಡಿಸಲಾಗಿದೆ. ಸಣ್ಣ ವಾಟರ್‌ ಟ್ಯಾಂಕ್‌, ಪ್ರವಾಸಿಗರಿಗೆ ನೆರಳು ಒದಗಿಸುವ ಪರ್ಗೋಳ, ವೀಕ್ಷಣಾ ಮಂದಿರ ಇದೆ. ಈ ಟ್ರೀ ಪಾರ್ಕ್‌ಸಮೀಪವೇ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಇದೆ. ಜೋಗ ಜಲಪಾತ, ಹೊಸನಗರ ಹೋಗುವವರೂ ಇದೇ ರಸ್ತೆಯಲ್ಲಿ ಹೋಗಬೇಕು. ಶನಿವಾರ ಮತ್ತು ಭಾನುವಾರ ಸಾವಿರಾರು ಜನ ಈ ರಸ್ತೆಯಲ್ಲಿ ಓಡಾಡುತ್ತಾರೆ. ಮುಖ್ಯ ರಸ್ತೆಗೆಹೊಂದಿಕೊಂಡಿರುವುದರಿಂದ ಪಾರ್ಕ್‌ ಜನರನ್ನು ಬೇಗ ಆಕರ್ಷಿಸುತ್ತಿದೆ. ಮಾಸ್ಟರ್‌ಪ್ಲ್ಯಾನ್‌ ಪ್ರಕಾರ ಅಭಿವೃದ್ಧಿಗೊಂಡರೆ ಅತ್ಯುತ್ತಮ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ.

12 ಕೋಟಿ ವೆಚ್ಚ: ಪ್ರಸ್ತುತ 28 ಎಕರೆ ಇರುವ ಟ್ರೀ ಪಾರ್ಕ್‌ ಅನ್ನು 300 ಎಕರೆಗೆ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಒಟ್ಟು 375 ಎಕರೆ ಅರಣ್ಯ ಭೂಮಿ ಇದ್ದು ಸುಮಾರು 100 ಎಕರೆ ಒತ್ತುವರಿಯಾಗಿರುವ ಆತಂಕ ಇದ್ದು ಕನಿಷ್ಠ 275ರಿಂದ 300 ಎಕರೆಯಲ್ಲಿ ಪಾರ್ಕ್‌ ಮಾಡಲು ಯೋಚಿಸಲಾಗಿದೆ. ಪಾರ್ಕ್ ನಲ್ಲಿ ಮರಗಿಡ ಬೆಳೆಸುವುದಷ್ಟೇ ಅಲ್ಲದೆ ಸುಂದರ ಪ್ರವಾಸಿ ತಾಣ, ಅಧ್ಯಯನತಾಣವಾಗಿಯೂ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.

ಅರಣ್ಯ ಸಚಿವರಿಗೆ ಮನವಿ :

Advertisement

ಮುದ್ದಿನಕೊಪ್ಪ ಟ್ರೀ ಪಾರ್ಕ್‌ನ್ನು ಹಲವು ಪ್ರಮುಖ ವಿವಿಧೋದ್ದೇಶ ಹೊಂದಿದ ಯೋಜನೆಗಳ ಮೂಲಕ ಅಭಿವೃದ್ಧಿಪಡಿಸಿ, ರಾಜ್ಯಕ್ಕೆ ಮಾದರಿ ಹಸಿರು ತಾಣವನ್ನಾಗಿಸುವಪ್ರಸ್ತಾವನೆ ಬಗ್ಗೆ ಸೋಮವಾರ ವಿಧಾನಸೌಧದಲ್ಲಿ ಚರ್ಚಿಸಲಾಯಿತು. ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಅರಣ್ಯ ಮತ್ತು ಪರಿಸರ ಜೀವಿಶಾಸ್ತ್ರ ಖಾತೆ ಸಚಿವ ಆನಂದಸಿಂಗ್‌ ನೇತೃತ್ವದಲ್ಲಿ ಅಧಿ ಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಮುದ್ದಿನಕೊಪ್ಪ ಟ್ರೀ ಪಾರ್ಕ್‌ ಅನ್ನು ವಿಶೇಷವಾಗಿ ಅಭಿವೃದ್ಧಿಪಡಿಸುವ

ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಂತೆ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳಿಗೆ, ರೈತರಿಗೆ, ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗುವುದಲ್ಲದೆ, ಪ್ರವಾಸೋದ್ಯಮ ಹೆಚ್ಚಿಸುವ, ಪಶ್ಚಿಮ ಘಟ್ಟ ಅರಿಯುವ, ಔಷ ಧ ಸಸ್ಯಗಳ ಬಗ್ಗೆ ಮಾಹಿತಿ ದೊರಕುವ, ಅರಣ್ಯೋತ್ಪನ್ನಗಳ ಬಗ್ಗೆ ಮಾಹಿತಿ ಒದಗಿಸುವ ಹಲವು ಆಯಾಮಗಳಲ್ಲಿ ಈ ಪಾರ್ಕ್‌ ರೂಪಿಸಲು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ಈ ವೇಳೆ ಉತ್ತಿಷ್ಠ ಭಾರತ, ಮಲೆನಾಡು ಸಿಹಿಮೊಗೆ ಕ್ರಿಕೆಟ್‌ ಅಕಾಡೆಮಿ, ಪರೋಪಕಾರಮ್‌, ಜೆಸಿಐ, ರೋಟರಿ ಪೂರ್ವ, ಪಿ.ವಿ. ಸಿಂಧು ಷಟಲ್‌ ಸ್ನೇಹಿತರ ಬಳಗ, ಗೋಪಾಳಗೌಡ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಚೈತನ್ಯ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ, ಗ್ರೀನ್‌ ಲೈವ್ಸ್‌, ಗ್ರೋ ಗ್ರೀನ್‌, ಸೈಕಲ್‌ ಕ್ಲಬ್‌, ಶಬ್ದ ಇತರ ಪರಿಸರ ಪ್ರೇಮಿಸಂಘಟನೆಗಳ ಪದಾಧಿಕಾರಿಗಳಿದ್ದರು.

ಟ್ರೀ ಪಾರ್ಕ್‌ನ ವಿಶೇಷ :

  • ಜೇನು ನೋಣ ಪಾರ್ಕ್‌
  • ಬಣ್ಣ ಬಣ್ಣದ ಚಿಟ್ಟೆಗಳ ಗಾರ್ಡನ್‌
  • ಮರಭೂಮಿಯಲ್ಲಿ ಸಿಗುವ ಕಳ್ಳಿಗಿಡಗಳ ಪಾರ್ಕ್‌
  • ಪಶ್ಚಿಮಘಟ್ಟ ಮರಗಳ ಪಾರ್ಕ್‌ ಬಿದಿರಿನ ವಿಶೇಷ ತಳಿಗಳು ಕಡಿಮೆ ಎತ್ತರ ಬೆಳೆಯುವ ಫಿಕಸ್‌ ಟ್ರೀ ಪಾರ್ಕ್‌
  • ಔಷಧ ಸಸ್ಯ ವನ
  • ರಾಶಿ, ನಕ್ಷತ್ರ ವನ
  • ನವಗ್ರಹ ವನ
  • ಶಿವಪಂಚಾಯತ ವನ (ಶಿವನಿಗೆ ಇಷ್ಟವಾದ ಮರ, ಗಿಡಗಳು)
  • ಬೊಟಾನಿಕಲ್‌ ಗಾರ್ಡನ್‌

ಥೀಮ್‌ ಹೀಗಿದೆ :

  • ಮಳೆ ನೀರು ಕೊಯ್ಲು ಹೊಂಡಗಳು
  • ಗಿಡಗಳಿಗೆ ಹನಿ ನೀರಾವರಿ ಪದ್ಧತಿ
  • ಫಿಜಿಯೋಥೆರಪಿ ವಾಕಿಂಗ್‌ ಪಾಥ್‌
  • ಮಲ್ನಾಡ್‌ ರಾಕ್‌ ಗಾರ್ಡನ್‌
  • ಗಾಳಿ ಆಸ್ವಾದಿಸಲು ವಾಚ್‌ ಟವರ್‌
  • ಸ್ಪರ್ಧಾತ್ಮಕ, ಹೈಟೆಕ್‌ ಸಂವಹನ ಕೇಂದ್ರ
  • ಮ್ಯೂಸಿಯಂ
  • ಬಿದಿರು ಗ್ಯಾಲರಿ
  • ರೆಸ್ಟೋರೆಂಟ್‌
  • ಬಯಲು ರಂಗಮಂದಿರ(ಆಂಪಿಥಿಯೇಟರ್‌) ಸಹ ಬರಲಿದೆ.

ಶಿವಮೊಗ್ಗ ಸುತ್ತಮುತ್ತ ಹಸಿರಿನಿಂದ ಕೂಡಿದ ತಾಣಗಳೇ ಇಲ್ಲ. ನಮ್ಮಸುತ್ತಮುತ್ತಲೂ ಅನೇಕ ಸ್ಥಳಗಳಿವೆ. ಅದನ್ನು ಹಸಿರೀಕರಣಗೊಳಿಸಿದರೆಸಾರ್ವಜನಿಕರಿಗೆ ದೊಡ್ಡ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ಮಾಡಿದ್ದೇವೆ.  –ಶಿವಮೊಗ್ಗ ನಂದನ್‌, ಉತ್ತಿಷ್ಠ ಭಾರತ

Advertisement

Udayavani is now on Telegram. Click here to join our channel and stay updated with the latest news.

Next