Advertisement

ಅರ್ಹರಿಗೆ ಸೂಕ್ತ ಪರಿಹಾರ ನೀಡಿ

03:53 PM Sep 04, 2019 | Team Udayavani |

ಮುದ್ದೇಬಿಹಾಳ: ಪ್ರವಾಹದಿಂದ ಹಾನಿಗೀಡಾದ ಮನೆಗಳ ಸಮೀಕ್ಷೆ ಅಸಮರ್ಪಕವಾಗಿದ್ದು ಮತ್ತೂಮ್ಮೆ ಸಮೀಕ್ಷೆ ನಡೆಸಿ ನಿಜವಾದ ಸಂತ್ರಸ್ತರನ್ನು ಗುರ್ತಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕೃಷ್ಣಾ ನದಿ ದಂಡೆಯ ಪ್ರವಾಹಪೀಡಿತ ದೇವೂರು ಗ್ರಾಮದ ಸಂತ್ರಸ್ತರು ಮಂಗಳವಾರ ಇಲ್ಲಿನ ತಹಶೀಲ್ದಾರ್‌ ವಿನಯ್‌ಕುಮಾರ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ ಮಾತನಾಡಿ, ಆ. 1ರಿಂದ ಪ್ರಾರಂಭಗೊಂಡಿದ್ದ ಪ್ರವಾಹ ಆ. 20ರ ನಂತರ ಕಡಿಮೆಯಾಗಿತ್ತು. ಪ್ರವಾಹದ ನೀರು ಇಳಿದ ಮೇಲೆ ನೋಡಲ್ ಅಧಿಕಾರಿ ನೇತೃತ್ವದಲ್ಲಿ 5 ಅಧಿಕಾರಿಗಳ ತಂಡ ಮನೆಹಾನಿ ಸಮೀಕ್ಷೆ ನಡೆಸಿತ್ತು. ಆದರೆ ಆ ಸಮೀಕ್ಷೆಯಲ್ಲಿ ತಾರತಮ್ಯ ಮಾಡಲಾಗಿತ್ತು.

ನಿಜವಾದ ಸಂತ್ರಸ್ತರನ್ನು ವರದಿಯಲ್ಲಿ ಸೇರಿಸದೆ ಅನ್ಯಾಯ ಮಾಡಲಾಗಿತ್ತು. ಈ ಬಗ್ಗೆ ಮೊದಲಿನ ಸಮೀಕ್ಷೆ ರದ್ದುಪಡಿಸಿ ಇನ್ನೊಮ್ಮೆ ಬೇರೆ ತಂಡದಿಂದ ಸಮೀಕ್ಷೆ ನಡೆಸುವಂತೆ ಒತ್ತಾಯಿಸಿ ಆ. 24ರಂದು ಕೊಟ್ಟಿದ್ದ ಮನವಿಗೆ ಇದುವರೆಗೂ ಸ್ಪಂದನೆ ದೊರಕಿಲ್ಲ. ಮರು ಸಮೀಕ್ಷೆಯನ್ನು ಮಾಡಲಾಗಿಲ್ಲ ಎಂದು ದೂರಿದರು.

ಮರು ಸಮೀಕ್ಷೆ ನಡೆಸದೆ ಪರಿಹಾರದ ಚೆಕ್‌ ವಿತರಿಸಬಾರದು ಎನ್ನುವ ನಮ್ಮ ಬೇಡಿಕೆಯನ್ನು ತಾಲೂಕಾಡಳಿತ ಗಂಭೀರವಾಗಿ ಪರಿಗಣಿಸದೆ ಸಂತ್ರಸ್ತರಿಗೆ ಚೆಕ್‌ ವಿತರಣೆ ಮಾಡಿದೆ. ಕೆಲವು ಸಂತ್ರಸ್ತರ ಮನೆ ಸುತ್ತ ನೀರು ನಿಂತು ಮನೆಯ ಅಡಿಪಾಯದಲ್ಲಿ ನೀರು ಹೋಗಿ ಅಭದ್ರ ಸ್ಥಿತಿಯಲ್ಲಿ ಇವೆ. ಇಂಥ ಮನೆಗಳನ್ನು ಸಮೀಕ್ಷೆಯಲ್ಲಿ ಪರಿಗಣಿಸದೆ ಅನ್ಯಾಯ ಮಾಡಲಾಗಿದೆ. ಈ ಅನ್ಯಾಯ ಸರಿಪಡಿಸಲು ಇನ್ನೊಮ್ಮೆ ಸಮೀಕ್ಷೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಂತ್ರಸ್ತರಿಗೆ ಮೊದಲ ಹಂತದಲ್ಲಿ ಪರಿಹಾರವಾಗಿ ಕೊಟ್ಟಿರುವ 10,000 ರೂ. ಮೊತ್ತದ ಚೆಕ್‌ ಜಮಾ ಆಗುತ್ತಿಲ್ಲ. ಇದನ್ನು ಬ್ಯಾಂಕ್‌ನವರು ಸ್ವೀಕರಿಸದೆ ತಿರಸ್ಕರಿಸುತ್ತಿದ್ದಾರೆ. ಈ ಸಮಸ್ಯೆಯನ್ನೂ ಬಗೆಹರಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

Advertisement

ತಹಶೀಲ್ದಾರ್‌ ಭರವಸೆ: ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಅವರು ಈಗಾಗಲೇ ದೇವೂರ ಗ್ರಾಮದಲ್ಲಿ ನಡೆದಿರುವ ಸರ್ವೇ ಕಾರ್ಯದಲ್ಲಿ ಯಾವುದೇ ಲೋಪ ಜರುಗಿಲ್ಲ. ಸರಿಯಾಗಿ ಸರ್ಕಾರದ ನಿಯಮಗಳಿಗೆ ಅನುಗುಣವಾಗಿಯೇ ಸಮೀಕ್ಷೆ ನಡೆಸಲಾಗಿದೆ ಎಂದು ಸಮೀಕ್ಷೆ ನಡೆಸಿದ ತಂಡ ವರದಿ ಸಲ್ಲಿಸಿದೆ. ಯಾವುದೇ ತಾರತಮ್ಯ ಮಾಡಿಲ್ಲ. ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ತಂಡದ ಮುಖ್ಯಸ್ಥರಾಗಿದ್ದ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಆದರೂ ಕೂಡ ಸಂತ್ರಸ್ತರು ಸಲ್ಲಿಸಿರುವ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ರೈತ ಸಂಘ ಬೆಂಬಲ: ಮನವಿ ಸಲ್ಲಿಸುವಾಗ ದೇವೂರು ಗ್ರಾಮದ ಸಂತ್ರಸ್ತರ ಜೊತೆ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸಂತ್ರಸ್ತರ ಮರು ಸಮೀಕ್ಷೆ ಬೇಡಿಕೆ ನ್ಯಾಯಯುತವಾಗಿದ್ದು ಕೂಡಲೇ ಈಡೇರಿಸಬೇಕು ಎಂದು ತಹಶೀಲ್ದಾರ್‌ ಅವರಿಗೆ ಒತ್ತಾಯಿಸಿದರು. ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ, ಪದಾಧಿಕಾರಿಗಳಾಗ ಸಂಗಣ್ಣ ಬಾಗೇವಾಡಿ, ವೈ.ಎಲ್. ಬಿರಾದಾರ, ರಮೇಶ ಗೊಳಸಂಗಿ ಸೇರಿದಂತೆ ಸಂತ್ರಸ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next