Advertisement

ಸುಗಮ ಸಂಚಾರಕ್ಕೆ ಬಂತು ಸಂಚಕಾರ

11:57 AM Nov 27, 2019 | Naveen |

„ಶಿವಕುಮಾರ ಶಾರದಳ್ಳಿ
ಮುದ್ದೇಬಿಹಾಳ:
ಪಟ್ಟಣದಲ್ಲಿ ಕಳೆದ ಒಂದೂವರೆ ವರ್ಷದಿಂದ ಪ್ರಗತಿಯಲ್ಲಿರುವ ರಾಜ್ಯ ಹೆದ್ದಾರಿ ಕಾಮಗಾರಿ ಕುಂಟುತ್ತ ಸಾಗಿದ್ದರ ಪರಿಣಾಮ ವಿವಿಧ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್‌ ಆಗಿ ಜನರು ಸಂಚಾರಕ್ಕೆ ಪರದಾಡುವಂತಾಗಿದೆ.

Advertisement

ತಂಗಡಗಿ ರಸ್ತೆಯನ್ನು ಪಿಲೇಕೆಮ್ಮನಗರದಿಂದ ಬಸವೇಶ್ವರ ವೃತ್ತದವರೆಗೆ, ವಿಜಯಪುರ ರಸ್ತೆಯನ್ನು ಬಸವೇಶ್ವರ ವೃತ್ತದಿಂದ ಅಂಬೇಡ್ಕರ್‌ ವೃತ್ತದವರೆಗೆ, ತಾಳಿಕೋಟೆ ಬೈಪಾಸ್‌ ರಸ್ತೆಯನ್ನು ಅಂಬೇಡ್ಕರ್‌ ವೃತ್ತದಿಂದ ಬನಶಂಕರಿ ವೃತ್ತ ಮಾರ್ಗವಾಗಿ ಆಶ್ರಯ ಬಡಾವಣೆಯ ಈದ್ಗಾವರೆಗೆ ಕೆಆರ್‌ಡಿಸಿಎಲ್‌ ವತಿಯಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಶೋಕಾ ಕನ್‌ಸ್ಟ್ರಕ್ಷನ್ಸನವರು ಕಾಮಗಾರಿ ನಿರ್ವಹಿಸುತ್ತಿದ್ದಾರೆ.

ಬಹುತೇಕ ರಸ್ತೆ ಕಾಮಗಾರಿ ಮುಕ್ತಾಯಗೊಂಡಿದೆ. ಆದರೆ ಇತರೆ ಸೌಲಭ್ಯಗಳಾದ ಡಿವೈಡರ್‌, ವಿದ್ಯುತ್‌ ಕಂಬ ಅಳವಡಿಸುವಿಕೆ, ಪಾದಚಾರಿ ಮಾರ್ಗ, ಚರಂಡಿ ಮುಂತಾದವುಗಳು ಇನ್ನೂ ಅಂತಿಮ ಹಂತಕ್ಕೂ ಬಂದಿಲ್ಲ. ಇದರಿಂದಾಗ ಈ ಮುಖ್ಯ ರಸ್ತೆಯಿಂದ ವಿವಿಧ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳು ಬಂದ್‌ ಆಗಿ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.

ಪುರಸಭೆ ಕಚೇರಿ ಹಿಂಭಾಗದಲ್ಲೇ ಒಂದು ಮುಖ್ಯ ರಸ್ತೆ ಇದು. ಈ ರಸ್ತೆಯಲ್ಲಿ ವಿಜಯ ಪ್ರಿಂಟಿಂಗ್‌ ಪ್ರಸ್‌, ರಾಘವೇಂದ್ರ ಸ್ವಾಮಿಗಳ ಬೃಂದಾವನ, ಬಜಾರಕ್ಕೆ ಹೋಗುವ ರಸ್ತೆ, ಪಡಿತರ ಆಹಾರ ಧಾನ್ಯ ವಿತರಣಾ ಕೇಂದ್ರ ಮತ್ತು ಕ್ಲಿನಿಕ್‌ಗಳು ಇವೆ. ಈ ರಸ್ತೆಯ ಹೆದ್ದಾರಿ ಸಂಪರ್ಕದ ಭಾಗವನ್ನು ಚರಂಡಿ ನಿರ್ಮಾಣ ನೆಪದಲ್ಲಿ ಕಳೆದ 9 ತಿಂಗಳಿಂದ ಬಂದ್‌ ಮಾಡಲಾಗಿದೆ. ರಸ್ತೆ ಬಂದ್‌ ಮಾಡಿ 4-5 ತಿಂಗಳ ಮೇಲೆ ಚರಂಡಿ ನಿರ್ಮಿಸಿದ್ದಾರೆ. ಚರಂಡಿಯನ್ನು ಅರ್ಧಮರ್ಧ ನಿರ್ಮಿಸಿ ರಸ್ತೆ ಸಂಚಾರಕ್ಕೆ ಬರದಂತೆ ಮಾಡಲಾಗಿದೆ.

ಅಲ್ಲಿನ ನಿವಾಸಿಗಳ ಪ್ರತಿರೋಧದ ನಂತರ ಚರಂಡಿ ಮೇಲೆ ಮಣ್ಣು ಹಾಕಿ ಬೈಕ್‌ ಸಂಚರಿಸುವಂತೆ ವ್ಯವಸ್ಥೆ ಮಾಡಿದ್ದಾರೆ. ಅದೂ ಅತ್ಯಂತ ಜಾಗರೂಕತೆಯಿಂದ ಬೈಕ್‌ನ್ನು ಇಲ್ಲಿ ಚಲಾಯಿಸುವಂಥ ಪರಿಸ್ಥಿತಿ ಇದೆ. ಈ ರಸ್ತೆ ಹೆಚ್ಚು ಕಡಿಮೆ ಬಂದ್‌ ಆಗಿದ್ದರ ಪರಿಣಾಮ ಆ ಭಾಗದಲ್ಲಿ ಸಂಚರಿಸುವವರು ಸುತ್ತುಬಳಸಿ ಬರಬೇಕಿದೆ. ವಾಹನಗಳನ್ನು ಬೇರೆ ಮಾರ್ಗವಾಗಿ ತಂದು ಮನೆಗಳ ಮುಂದೆ ನಿಲ್ಲಿಸುವಂತಾಗಿದೆ.

Advertisement

ಏನಾದರೂ ದೊಡ್ಡ ಸಾಮಾನುಗಳು ಬಂದರೆ ಹೆದ್ದಾರಿ ಮೇಲೆಯೇ ನಿಲ್ಲಿಸಿ ದುಬಾರಿ ಕೂಲಿ ಕೊಟ್ಟು ಕೂಲಿಕಾರರಿಂದ ತರಿಸಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಇದಲ್ಲದೆ ಚರಂಡಿಗೆ ಲಿಂಕ್‌ ಕೊಡದೆ ಇರುವುದು ಮಳೆ ಬಂದಾಗಲೆಲ್ಲ ನೀರು ರಸ್ತೆಯಲ್ಲಿ ಹರಿದು ಜನಜೀವನ ದುಸ್ತರ ಆಗುವಂತಾಗಿದೆ ಎಂದು ಅಲ್ಲಿನ ನಿವಾಸಿಗಳು ದೂರುತ್ತಿದ್ದಾರೆ.

ಹೆದ್ದಾರಿ ಕಾಮಗಾರಿ ನಡೆಸುವವರು ಈಗಲಾದರೂ ಎಚ್ಚೆತ್ತುಕೊಂಡು ಚರಂಡಿಯನ್ನು ತ್ವರಿತವಾಗಿ ದುರಸ್ತಿ ಮಾಡಿ ಪುರಸಭೆ ಹಿಂದಿನ ರಸ್ತೆಯನ್ನು ಮೊದಲಿನಂತೆ ಸಂಚಾರ ಮುಕ್ತಗೊಳಿಸಬೇಕು. ಇದೇ ರೀತಿ ಬಂದ್‌ ಆಗಿರುವ ಎಲ್ಲ ಸಂಪರ್ಕ ರಸ್ತೆಗಳನ್ನೂ ತ್ವರಿತವಾಗಿ ದುರಸ್ತಿಗೊಳಿಸಿ ಸಾರ್ವಜನಿಕರ ಸಂಚಾರ ಮೊದಲಿನಂತೆ ನಡೆಯಲು ಅವಕಾಶ ಕಲ್ಪಿಸಿಕೊಡಬೇಕು.

ಇಲ್ಲವಾದಲ್ಲಿ ಸಹನೆ ಕಳೆದುಕೊಂಡಿರುವ ಆಯಾ ಬಡಾವಣೆಗಳ ನಿವಾಸಿಗಳು ರಸ್ತೆ ತಡೆದು ಪ್ರತಿಭಟಿಸುವ ಅನಿವಾರ್ಯ ಪರಿಸ್ಥಿತಿ ಬಂದೊದಗಲಿದೆ ಎಂದು ಆಯಾ ಬಡಾವಣೆಯ ನಿವಾಸಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next