Advertisement

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ

06:32 PM Feb 19, 2020 | Naveen |

ಮುದ್ದೇಬಿಹಾಳ: ಗ್ರಾಮೀಣ ಭಾಗದ ಕಡುಬಡವರಿಗೆ ಸ್ವಯಂ ಉದ್ಯೋಗಕ್ಕೆ ಆಸರೆಯಾಗಿ ನಿಲ್ಲುವ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ)ಯು ಕಡು ಬಡವರನ್ನು ಆರ್ಥಿಕವಾಗಿ ಮೇಲೆತ್ತುವ ಸಾರ್ಥಕ ಕಾರ್ಯ ಮಾಡುತ್ತಿರುವುದು ಇತರೆ ಸಂಘ, ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.

Advertisement

ಇಲ್ಲಿನ ವಿದ್ಯಾನಗರದಲ್ಲಿರುವ ಎಸ್‌ ಕೆಡಿಆರ್‌ಡಿಪಿ ಯೋಜನಾ ಕಚೇರಿಯಲ್ಲಿ ನಡೆದ ತಾಲೂಕುಮಟ್ಟದ ಜನಮಂಗಲ ಕಾರ್ಯಕ್ರಮದಡಿ ವಿಕಲಚೇತನರಿಗೆ ಉಚಿತ ಸಾಮಗ್ರಿ, ಸುಜ್ಞಾನ ನಿಧಿ  ಶಿಷ್ಯವೇತನ ಮಂಜೂರಾತಿ ಪತ್ರ ಹಾಗೂ ಎಲ್‌ಐಸಿ ಮೈಕ್ರೋಬಚತ್‌ ಬಾಂಡ್‌ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯೋಜನೆ ಅಡಿ ಪಡೆದ ಆರ್ಥಿಕ ನೆರವನ್ನು ಸದುಪಯೋಗ ಮಾಡಿಕೊಳ್ಳುವುದು ಮಾತ್ರವಲ್ಲದೆ ಇನ್ನೊಬ್ಬರ ನೆರವಿಗೆ ಅನುಕೂಲ ಆಗಲು ಫಲಾನುಭವಿಗಳು ಪಡೆದ ಪ್ರಗತಿ ನಿಧಿಯನ್ನು ಕಾಲ ಕಾಲಕ್ಕೆ ಮರುಪಾವತಿ ಮಾಡುತ್ತಿರುವುದು ಮೆಚ್ಚುವಂಥ ಕಾರ್ಯವಾಗಿದೆ ಎಂದರು.

ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಹೊನ್ನಪ್ಪ ಅವರು ಯೋಜನೆ ನಡೆದು ಬಂದ ದಾರಿ, ಹಾಕಿಕೊಂಡ ಕಾರ್ಯಕ್ರಮ ಮುಂತಾದವುಗಳ ಕುರಿತು ಮಾತನಾಡುತ್ತ ದುರ್ಬಲರ ಮನೆ ಬಾಗಿಲಿಗೆ ಬ್ಯಾಂಕ್‌ ವ್ಯವಹಾರ ತಲುಪುವಂತೆ ಮಾಡಿದ ಧರ್ಮಾಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು 40 ಲಕ್ಷ ಕುಟುಂಬಗಳು ಸ್ವ ಸಹಾಯ ಸಂಘ ಕಟ್ಟಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಲು ಸಹಕರಿಸಿದ್ದಾರೆ.

ರಾಜ್ಯಾದ್ಯಂತ ವಿಕಲಚೇತನರಿಗೆ ಸಾಮಗ್ರಿ ವಿತರಿಸಲಾಗುತ್ತಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಕೇಂದ್ರದ ವೈದ್ಯಾ ಧಿಕಾರಿ ಡಾ| ಶಿವರಾಜ್‌ ಪಾಟೀಲ ಮಾತನಾಡಿ, ಇಂದಿನ ದಿನಮಾನದಲ್ಲಿ ಎಲ್ಲರೂ ತಮ್ಮ ವೈಯಕ್ತಿಕ ಚಿಂತನೆ ಮಾಡುತ್ತಾರೆ. ಆದರೆ ಡಾ| ವಿರೇಂದ್ರ ಹೆಗ್ಗಡೆಯವರು ಇಡೀ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಜಾರಿಗೊಳಿಸಿ ತಮ್ಮ ಸಾಮಾಜಿಕ ಬದ್ಧತೆ ತೋರಿಸಿಕೊಟ್ಟಿದ್ದಾರೆ ಎಂದರು.

Advertisement

ಅತಿಥಿಗಳಾಗಿದ್ದ ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ
ಮಾತನಾಡಿ, ಎಸ್‌ಕೆಡಿಆರ್‌ಡಿಪಿ ಅಡಿ ಕೆರೆ ಹೂಳೆತ್ತಿ ಅಂತರ್ಜಲಮಟ್ಟ ವೃದ್ಧಿಸುವ ಸಾರ್ಥಕ ಕಾರ್ಯವನ್ನು ಮಾಡಿದ್ದು ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಈ ಸಂಸ್ಥೆ ಮಾಡಿದ್ದು ಶ್ಲಾಘನೀಯ ಎಂದರು. ಡಾ| ಎ.ಎಂ. ಮುಲ್ಲಾ ಮಾತನಾಡಿ, ಎಸ್‌ಕೆಡಿಆರ್‌ಡಿಪಿ ಅಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿದ್ದು ಬಡ ವಿದ್ಯಾರ್ಥಿ, ಪಾಲಕರ ಪಾಲಿಗೆ ವರದಾನವಾಗಿದ್ದು ಎಸ್‌ಕೆಡಿಆರ್‌ ಡಿಪಿ ಅಡಿ ಉಚಿತ ವೈದ್ಯಕೀಯ ನೆರವು ಕೊಡಲು ಸದಾ ಸಿದ್ದನಿದ್ದೇನೆ ಎಂದರು.

ಶಿಕ್ಷಕ ಸಾಹಿತಿ ಆರ್‌.ಜಿ. ಕಿತ್ತೂರ ಮಾತನಾಡಿ, ಸಮಾಜದಲ್ಲಿ ತೊಂದರೆ ಗೊಳಗಾದವರಿಗೆ ನೆರವು ನೀಡುವ ಕಾರ್ಯ ಮಾದರಿಯಾದದ್ದಾಗಿದ್ದು ನೆರವು ಪಡೆದವರು ಋಣ ತೀರಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ವಕೀಲೆ ಎಚ್‌.ಡಿ. ಅನಂತಪುರ ಮಾತನಾಡಿ, ಮಕ್ಕಳ ಶಿಕ್ಷಣ, ಆರೋಗ್ಯ, ಸಂಸ್ಕಾರದ ಜೊತೆ ಮಕ್ಕಳಿಗೋಸ್ಕರ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದರು.

ಒಕ್ಕೂಟದ ಅಧ್ಯಕ್ಷೆ ಮಂಜುಳಾ ಕೆಸರಟ್ಟಿ, ಸೇವಾಪ್ರತಿನಿ ಧಿಗಳು,
ಫಲಾನುಭವಿಗಳು, ಪಾಲಕರು ಇದ್ದರು. ಕಾರ್ಯಕ್ರಮದಲ್ಲಿ 15 ವಿದ್ಯಾರ್ಥಿಗಳಿಗೆ ಶಿಷ್ಯವೇತನದ ಮಂಜೂರಾತಿ ಪತ್ರ, 57 ವಿಕಲಚೇತನರಿಗೆ ವಿವಿಧ ಪರಿಕರ ವಿತರಿಸಲಾಯಿತು. ಮನಿಷ್‌ ಪ್ರಾರ್ಥಿಸಿದರು. ಮೇಲ್ವಿಚಾರಕಿ ಕವಿತಾ ಸ್ವಾಗತಿಸಿದರು. ಎಸ್‌ಕೆಡಿಆರ್‌ಡಿಪಿ ಕೃಷಿ ಅಧಿಕಾರಿ ಬಸವರಾಜ, ಕಚೇರಿ ಸಹಾಯಕ ಪ್ರಬಂಧಕ ಚಂದ್ರಶೇಖರ ನಿರೂಪಿಸಿದರು. ಎಸ್‌ಕೆಡಿಆರ್‌ಡಿಪಿ ಮಹಿಳಾ ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಧಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next