Advertisement

ಸಮಾಜಮುಖೀ ಬದುಕು ಸಾಗಿಸಲು ಸಲಹೆ

01:29 PM Nov 04, 2019 | Naveen |

ಮುದ್ದೇಬಿಹಾಳ: ಜವಾಬ್ದಾರಿ ಅರಿತು ತನ್ನದೆಯಾದ ರೀತಿಯಲ್ಲಿ ಸಮಾಜದ ಋಣ ತೀರಿಸುವ ಉತ್ಸಾಹ, ಅಭಿಲಾಷೆ ಯಾರಲ್ಲಿ ಇರುತ್ತದೆಯೂ ಅವರು ಸಮಾಜಮುಖೀಯಾಗಿ ಬದುಕುವುದು ಸಾಧ್ಯವಾಗುತ್ತದೆ ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಇಲ್ಲಿನ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ರವಿವಾರ ಏರ್ಪಡಿಸಿದ್ದ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕು ರಡ್ಡಿ ನೌಕರರ ಸಂಘ ಉದ್ಘಾಟನೆ, ರಡ್ಡಿ ನೌಕರರ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನ ಸಂಯುಕ್ತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಡ್ಡಿ ಸಮಾಜದವರು ಜಾಗೃತರಾಗಿರಬೇಕು. ಈ ಸಮಾಜದ ಶ್ರೀಮಂತರು ಬಡವರನ್ನು ಮೇಲೆತ್ತುವ ಕೆಲಸ ಮಾಡಬೇಕು. ಅವರ ಸಾಮಾಜಿಕ ಜವಾಬ್ದಾರಿ ನಾವು ಹೊತ್ತುಕೊಳ್ಳಬೇಕು.

ಹೇಮರಡ್ಡಿ ಮಲ್ಲಮ್ಮಳಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡೋಣ. ಆದರೆ ಸರ್ಕಲ್‌ ಕಟ್ಟಿ ಪೂಜೆ ಮಾಡೋದು ಬೇಡ. ಯಾರ್ಯಾರೋ ಸರ್ಕಲ್‌ ಮಾಡ್ತಾರೆ ಅಂತ ಹೇಳಿ ನಾವೂ ಹಾಗೇ ಮಾಡಬಾರದು. ಆ ತಾಯಿಗೆ ದೇವಸ್ಥಾನ ಕಟ್ಟಿದರೆ ಅದೇ ಸಾರ್ಥಕ ಕಾರ್ಯ.

ಈ ಸಮಾಜದ ಸಾಧಕರನ್ನು ಮಕ್ಕಳಿಗೆ ಪರಿಚಯಿಸಿ ಆ ಮಕ್ಕಳು ಸಾಧಕರ ಹಾದಿಯಲ್ಲಿ ನಡೆಯಲು ಅನುಕೂಲ ಮಾಡಿಕೊಡುವ ಕಾರ್ಯ ಶ್ಲಾಘನೀಯ ಎಂದರು.

Advertisement

ವೇಮನ, ಮಲ್ಲಮ್ಮಳ ಭಾವಚಿತ್ರಕ್ಕೆ ಪುಷ್ಪಾರ್ಷನೆ ನೆರವೇರಿಸಿದ ಮಾಜಿ ಸಚಿವ ಸಿ.ಎಸ್‌. ನಾಡಗೌಡ ಮಾತನಾಡಿ, ನಮ್ಮೊಳಗಿನ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು. ಇತಿಹಾಸ ಸೃಷ್ಟಿಸುವ ಕೆಲಸ ನಮ್ಮಿಂದ ಆಗಬೇಕು. ಸಮಾಜದ ವಿಷಯ ಬಂದಾಗ ಪಕ್ಷಭೇದ ಮರೆತು ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟು ಪ್ರದರ್ಶಿಸಬೇಕು. ನಮ್ಮ ಮಕ್ಕಳನ್ನು ವ್ಯಸನ ಮುಕ್ತಗೊಳಿಸಲು ಮುಂದಾಗಬೇಕು ಎಂದರು.

ಕೆಲವರು ಮಾಡುವ ತಪ್ಪುಗಳು ಸಮಾಜಕ್ಕೆ ಕೆಟ್ಟ ಹೆಸರು ತರುತ್ತದೆ. 30 ವರ್ಷ ವಿಧಾನಸಭೆಯಲ್ಲಿ ಶಾಸಕನಾಗಿ ಕೆಲಸ ಮಾಡಿದ ಅನುಭವ ಇದ್ದು ಇವತ್ತು ಜಾತಿ ಆಧಾರದ ಕೆಲಸಗಳಿಗೆ ಅಲ್ಲಿ ಪ್ರಾಮುಖ್ಯತೆ ಸಿಗುತ್ತಿದೆ. ಉತ್ತರ ಕರ್ನಾಟಕದ ನೌಕರರೇ ಉತ್ತರ ಕರ್ನಾಟಕದ ಜನಪ್ರತಿನಿಧಿಗಳನ್ನು ನೀವು ಯಾರು ಎಂದು ಪ್ರಶ್ನಿಸುವ ಪರಿಸ್ಥಿತಿ ಬಂದಿದೆ. ಯಾರಿಗೂ ನೋವು ಮಾಡದೆ ಸಂಘಟನೆ ಕಟ್ಟಬೇಕು.

ಪಾಳೇಗಾರಿಕೆ ಮಾಡಿದ ಸಮಾಜ ಇದು. ಜನರನ್ನು ಕಟ್ಟಿಕೊಂಡು ನಾಯಕತ್ವ ವಹಿಸಿದ ಸಮಾಜ ಇದು. ಈ ಹೆಮ್ಮೆ ಎಲ್ಲರಿಗೂ ಇರಬೇಕು ಎಂದರು.

ತಾಳಿಕೋಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಸುಮಂಗಲಾ ಕೋಳೂರ ರಡ್ಡಿ ಸಮಾಜದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶೇಖರಗೌಡ ಮಾಲಿಪಾಟೀಲ, ಶ್ರೀಂಗಾರಗೌಡ ಪಾಟೀಲ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಪಂ ಸದಸ್ಯೆ ಜ್ಯೋತಿ ಅಸ್ಕಿ, ತಹಶೀಲ್ದಾರ್‌ ವಿನಯ್‌ಕುಮಾರ ಪಾಟೀಲ ಮಾತನಾಡಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ರಡ್ಡಿ ಗುರುಪೀಠದ ವೇಮನಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಸಂಘದ ತಾಲೂಕಾಧ್ಯಕ್ಷ ಎನ್‌.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಚನ್ನಮ್ಮ ತಂಗಡಗಿ, ಜಿಪಂ ಸದಸ್ಯ ಬಸನಗೌಡ ವಣಿಕ್ಯಾಳ, ಗಣ್ಯರಾದ ಸೋಮನಗೌಡ ಹಾದಿಮನಿ, ಶಿವಾನಂದ ದೇಸಾಯಿ, ಬಸನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ರಾಜುಗೌಡ ಕೋಳೂರ, ಶಿವನಗೌಡ ಮುದ್ದೇಬಿಹಾಳ, ಸೋಮನಗೌಡ ಬಿರಾದಾರ, ಬಿ.ಎಸ್‌. ಸಾಸನೂರ, ಬಿ.ಆರ್‌.ಪೊಲೀಸ್‌ಪಾಟೀಲ ಸೇರಿದಂತೆ ರಡ್ಡಿ ಸಮಾಜದ ಹಲವು ಗಣ್ಯರು, ಅಧಿಕಾರಿಗಳು, ಶಿಕ್ಷಣ ಸಂಸ್ಥೆ ಸಂಸ್ಥಾಪಕರು ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ರಡ್ಡಿ ಸಮಾಜದ ಸಾಧಕರು, ಅಧಿಕಾರಿಗಳು, ಸಂಘ ಸಂಸ್ಥೆ ಮುಖಂಡರು, ಶಿಕ್ಷಣ ಸಂಸ್ಥೆ ಸಂಸ್ಥಾಪಕರು, ಚಿನ್ನದ ಪದಕ ವಿಜೇತರು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಎನ್‌ಜಿಒ ನಿರ್ದೇಶಕರು, ದಾನಿಗಳು, ನಿವೃತ್ತ ನೌಕರರು ಸೇರಿ ಹಲವರನ್ನು ಸನ್ಮಾನಿಸಲಾಯಿತು.

ಎಸ್‌.ಐ. ಕಡಕೋಳ ಸ್ವಾಗತಿಸಿದರು. ಎಸ್‌.ಎಸ್‌.
ರಾಮತಾಳ ಪ್ರಾಸ್ತಾವಿಕ ಮಾತನಾಡಿದರು. ಎಂ.ಎನ್‌. ಅಸ್ಕಿ ಮತ್ತು ಸಿದ್ದನಗೌಡ ಬಿರಾದಾರ ನಿರೂಪಿಸಿದರು. ಅಪ್ಪಾಸಾಹೇಬಗೌಡ ಮೂಲಿಮನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next