ಮುದ್ದೇಬಿಹಾಳ: ತಾಲೂಕಿನ ಒಟ್ಟು 30 ಸಾಂಸ್ಥಿಕ ಕ್ವಾರೆಂಟೈನ್ ಕೇಂದ್ರಗಳಲ್ಲಿ ಬಿಡಾರ ಹೂಡಿರುವ 2500ಕ್ಕೂ ಹೆಚ್ಚು ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ರಾಜ್ಯಗಳಿಂದ ಮರಳಿ ಬಂದಿರುವ ವಲಸೆ ಕೂಲಿಕಾರ್ಮಿಕರ ಹಸಿವು ತಣಿಸಲು 1.50 ಲಕ್ಷ ಜೋಳದ ರೊಟ್ಟಿಗಳು ಬಸರಕೋಡದ ಶ್ರೀ ಪವಾಡಬಸವೇಶ್ವರ ದೇವಸ್ಥಾನದ ಅಡುಗೆಮನೆಯಲ್ಲಿ ಭರದಿಂದ ಸಿದ್ದಗೊಳ್ಳುತ್ತಿವೆ.
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮತ್ತು ಅವರ ಪತ್ನಿ ಮಹಾದೇವಿ ಪಾಟೀಲ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಯೋಜನೆ ಜಾರಿಗೊಳಿಸಲು ನಿತ್ಯ 30 ಮಹಿಳೆಯರು ರೊಟ್ಟಿ ತಟ್ಟುವ ಕಾರ್ಯದಲ್ಲಿ ತೊಡಗಿದ್ದಾರೆ. ಮಹಾದೇವಿ ಅವರು ಮೇಲಿಂದ ಮೇಲೆ ಸ್ಥಳಕ್ಕೆ ಭೇಟಿ ನೀಡಿ ರೊಟ್ಟಿಯ ಗುಣಮಟ್ಟದ ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆ ಕೊಡುತ್ತಿದ್ದಾರೆ. 2-3 ದಿನಗಳಲ್ಲಿ ರೊಟ್ಟಿಗಳು ಸಿದ್ಧಗೊಂಡು ಎಲ್ಲ ಕೇಂದ್ರಗಳಿಗೆ ತಲುಪಿಸಲು ಶಾಸಕರು ತಂಡವೊಂದನ್ನು ಈಗಾಗಲೇ ರಚಿಸಿದ್ದು ಅದು ಕ್ರಿಯಾಶೀಲವಾಗಿ ಕೆಲಸ ಮಾಡತೊಡಗಿದೆ.
ರೊಟ್ಟಿಗೆ ಮಹತ್ವ ಏಕೆ?: ದಕ್ಷಿಣ ಕರ್ನಾಟಕದಲ್ಲಿ ರಾಗಿಗೆ ಎಷ್ಟು ಮಹತ್ವ ಇದೆಯೋ ಅಷ್ಟು ಮಹತ್ವ ಉತ್ತರ ಕರ್ನಾಟಕದಲ್ಲಿ ಜೋಳಕ್ಕೆ ಇದೆ. ಇದರ ಹಿಟ್ಟಿನಿಂದ ತಯಾರಿಸಿದ ರೊಟ್ಟಿಗಳನ್ನು ಇಲ್ಲಿನ ಜನ ನಿತ್ಯವೂ ಸೇವಿಸುತ್ತಾರೆ. ಬೇರೆ ರಾಜ್ಯಗಳಿಗೆ ದುಡಿಯಲು ವಲಸೆ ಹೋಗುವ ಇಲ್ಲಿನ ಕೂಲಿ ಕಾರ್ಮಿಕರು ತಮ್ಮ ಜೊತೆ 4 ತಿಂಗಳಿಗೆ ಆಗುವಷ್ಟು ಜೋಳ, ಜೋಳದ ಹಿಟ್ಟನ್ನೂ ಜೊತೆಗೊಯ್ಯುವುದು ಇದರ ಮಹತ್ವ ಸಾರಿ ಹೇಳುತ್ತವೆ.
ಕ್ವಾರೆಂಟೈನ್ ಕೇಂದ್ರಗಳಲ್ಲಿರುವ ಜನರಿಗೆ ಸರ್ಕಾರದ ವತಿಯಿಂದ ಅನ್ನ ಸಾಂಬಾರ್, ಪಲಾವ್ ಕೆಲ ಸಂದರ್ಭ ಗೋಧಿ ಹಿಟ್ಟಿನ ಚಪಾತಿ ನೀಡಲಾಗುತ್ತಿದೆ. ಕೆಲ ಕೇಂದ್ರಗಳಲ್ಲಿ ಅಡುಗೆ ಸಾಮಗ್ರಿ ಪೂರೈಸಿ ಅಲ್ಲೇ ಅಡುಗೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಜೋಳದ ರೊಟ್ಟಿ ಕೊಡುವುದು ಸಾಧ್ಯವಾಗುತ್ತಿಲ್ಲ. ಇದನ್ನು ಗಮನಿಸಿದ ಶಾಸಕರು ಮತ್ತು ಅವರ ಪತ್ನಿ ಈ ವಿನೂತನ ಕಾರ್ಯಕ್ಕೆ ಕೈ ಹಾಕಿ ನಮ್ಮ ಜನರಿಗೆ ಜೋಳದ ರೊಟ್ಟಿಯ ರುಚಿ ತೋರಿಸಲು ಸಿದ್ದರಾಗಿದ್ದಾರೆ.
ನಾವು ಕ್ವಾರೆಂಟೈನ್ ಕೇಂದ್ರಗಳಿಗೆ ಹೋದಾಗ ನಮ್ಮ ಜನರು ರೊಟ್ಟಿ ಕೊಡುವಂತೆ ಮನವಿ ಮಾಡಿದ್ದರು. ರೊಟ್ಟಿಯ ಮಹತ್ವ ಗೊತ್ತಿದ್ದ ನಾವು ಇದಕ್ಕೆ ಒಪ್ಪಿ ಸಿದ್ದತೆ ನಡೆಸುತ್ತಿದ್ದೇವೆ. ರೊಟ್ಟಿಯಲ್ಲಿ ಅರಿಷಿಣಪುಡಿ ಸೇರಿಸಿದ್ದು, ಅದಿನ್ನೂ ಹೆಚ್ಚು ಪೌಷ್ಠಿಕ ಆಹಾರವಾಗಲಿದೆ. ಜನರು ಕ್ವಾರೆಂಟೈನ್ ಅವಧಿ ಮುಗಿಸುವವರೆಗೂ ರೊಟ್ಟಿ ಕೊಡುವ ಯೋಜನೆ ಇದೆ.
ಮಹಾದೇವಿ ಪಾಟೀಲ ನಡಹಳ್ಳಿ,
ರೊಟ್ಟಿ ಹಂಚಿಕೆಯ ರೂವಾರಿ
ಡಿ. ಬಿ. ವಡವಡಗಿ