ಮುದ್ದೇಬಿಹಾಳ: ಸರ್ಕಾರದ ವಿವಿಧ ಯೋಜನೆಗಳನ್ನು, ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಮುದ್ದೇಬಿಹಾಳ ತಾಲೂಕಿನ ಪಿಡಿಒಗಳು ತೃಪ್ತಿದಾಯಕ ಕೆಲಸ ಮಾಡಿದ್ದಾರೆ. ಮಾರ್ಚ್ 31ರೊಳಗೆ ಎಲ್ಲ ಯೋಜನೆಗಳು, ಹಂತಗಳಲ್ಲಿ ಶೇ. 100 ಪ್ರಗತಿ ತೋರಿಸಲು, ಸ್ವತ್ಛ ಭಾರತ ಅಡಿ ಸರ್ಕಾರದ ಮಹತ್ವಾಕಾಂಕ್ಷಿ ಶೌಚಾಲಯ ನಿರ್ಮಾಣ ಯೋಜನೆ ಗುರಿ ಸಾಧಿಸಲು ಸೂಚಿಸಲಾಗಿದೆ ಎಂದು ಜಿಪಂ ಸಿಇಒ ಗೋವಿಂದ ರಡ್ಡಿ ಹೇಳಿದ್ದಾರೆ.
ತಾಲೂಕಿನ ಎಲ್ಲ ಗ್ರಾಪಂಗಳ ಪ್ರಗತಿ ಪರಿಶೀಲನೆ ಹಿನ್ನೆಲೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಎಲ್ಲ ಪಿಡಿಒಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಪ್ರಗತಿ ಶೇ. 82ರಷ್ಟಾಗಿದ್ದು ಶೇ. 100 ಗುರಿ ಸಾಧನೆಗೆ ಸೂಚಿಸಲಾಗಿದೆ. ಗ್ರಾಪಂ ಅಡಿ ಬರುವ ಆಸ್ತಿ ತೆರಿಗೆ ವಸೂಲಾತಿ ಪ್ರಮಾಣ ಶೇ. 77ರಷ್ಟಿದ್ದು ಜಿಲ್ಲೆಯಲ್ಲೇ ಇದು ಹೆಚ್ಚಿನ ತೃಪ್ತಿಕರ ಸಾಧನೆ ಎನ್ನಿಸಿಕೊಂಡಿದೆ.
ಒಟ್ಟಾರೆ ಜಿಲ್ಲೆಯ ತೆರಿಗೆ ವಸೂಲಾತಿ ಪ್ರಮಾಣ ಶೇ. 61ರಷ್ಟಿದೆ. ಸರ್ಕಾರ ಗ್ರಾಮೀಣ ಭಾಗದಲ್ಲಿ ಶೌಚಾಲಯ ಕಟ್ಟಿಸಲು ಎನ್‌ಒಎಲ್‌ಬಿ (ನೋ ಒನ್ ಲೆಫ್ಟ್ ಬಿಹೈಂಡ್-ಯಾರೊಬ್ಬರು ಹೊರಗುಳಿಯಬಾರದು) ಹೆಸರಿನಲ್ಲಿ ಹೊಸ ಯೋಜನೆಯೊಂದನ್ನು ಜಾರಿಗೊಳಿಸಿದ್ದು ಮುದ್ದೇಬಿಹಾಳ ತಾಲೂಕಲ್ಲಿ ಇನ್ನೂ 3,000 ಶೌಚಾಲಯ ನಿರ್ಮಾಣ ಬಾಕಿ ಇವೆ. ಇವುಗಳ ಫಲಾನುಭವಿಗಳನ್ನು ಗುರುತಿಸಿ ಆಧಾರ್, ಬಿಪಿಎಲ್ ಪಡೆದು ಪಿಡಿಒಗಳು ಸಾಫ್ಟವೇರ್ ನಲ್ಲಿ ಎಂಟ್ರಿ ಮಾಡಿದ್ದಾರೆ. ಈ ಬಗ್ಗೆಯೂ ಸಭೆಯಲ್ಲಿ ಪರಿಶೀಲನೆ ನಡೆಸಿ ಸಲಹೆ ಸೂಚನೆ ನೀಡಲಾಯಿತು. ಪ್ರತಿ ಗ್ರಾಪಂ ವತಿಯಿಂದ ವಿದ್ಯುತ್ ಬಿಲ್ ಸೇರಿದಂತೆ ವಿವಿಧ ತೆರಿಗೆ ಭರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದರು.
ಸಭೆಯಲ್ಲಿ ಪ್ರತಿಯೊಬ್ಬ ಪಿಡಿಒ ಅವರನ್ನು ಪ್ರಗತಿ ಬಗ್ಗೆ ವಿಚಾರಿಸುವ ವೇಳೆ ಹಿರೇಮುರಾಳ ಗ್ರಾಪಂ ಆಸ್ತಿ ತೆರಿಗೆ ವಸೂಲಾತಿ ಪ್ರಮಾಣದಲ್ಲಿ ಹೆಚ್ಚಳ ಇರುವುದನ್ನು ತಿಳಿದ ಅವರು, ಇದನ್ನು ಮಾದರಿಯಾಗಿಟ್ಟುಕೊಂಡು ಉಳಿದೆಲ್ಲರೂ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವಂತೆ ಸೂಚಿಸಿದರು.
ಜಿಪಂ ಸಹಾಯಕ ಯೋಜನಾಧಿಕಾರಿ ಸಿ.ಬಿ. ಕುಂಬಾರ, ತಾಪಂ ಇಒ ಶಶಿಕಾಂತ ಶಿವಪುರೆ, ಸಹಾಯಕ ನಿರ್ದೇಶಕ ಪ್ರಕಾಶ ದೇಸಾಯಿ, ಪಿಡಿಒಗಳಾದ ಎಸ್.ಐ. ಹಿರೇಮಠ, ನಿಂಗಣ್ಣ ದೊಡಮನಿ, ಪಿ.ಎಸ್.ನಾಯ್ಕೋಡಿ, ಎನ್. ಎಂ. ಬಿಷ್ಟಗೊಂಡ, ಬಿ.ವೈ. ತಾಳಿಕೋಟೆ, ಪಿ.ಎಸ್. ಕಸನಕ್ಕಿ, ವೀರೇಶ, ಗುರಡ್ಡಿ, ಬಿರಾದಾರ ಮುಂತಾದವರು ಸಭೆಯಲ್ಲಿ ಭಾಗವಹಿಸಿ ತಮ್ಮ ಗ್ರಾಪಂಗಳ ಪ್ರಗತಿ ವರದಿ ನೀಡಿದರು.