Advertisement

ಅಧಿಕಾರಿಗಳ ಮೇಲೆ ಹರಿಹಾಯ್ದ ನಡಹಳ್ಳಿ

04:19 PM Dec 28, 2019 | Team Udayavani |

ಮುದ್ದೇಬಿಹಾಳ: ಬಡವರಿಗೆ ಸಹಾಯ ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡಲು ಆಗದಿದ್ದರೆ ಈ ತಾಲೂಕನ್ನು
ಬಿಟ್ಟು ಹೊರಡಿ ಎಂದು ಕೆಲ ಸರ್ಕಾರಿ ಇಲಾಖೆಗಳ ಮುಖ್ಯಸ್ಥರು, ಪಿಡಿಒಗಳನ್ನು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ತೀವ್ರ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದ ಘಟನೆ ಶುಕ್ರವಾರ ತಾಪಂ ಸಭಾ ಭವನದಲ್ಲಿ ಏರ್ಪಡಿಸಿದ್ದ ವಿವಿಧ ಸರ್ಕಾರಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.

Advertisement

ಒಂದೂವರೆ ವರ್ಷದ ಹಿಂದೆ ಎಲ್ಲ ಪಿಡಿಒಗಳಿಗೆ ಪ್ರತಿಯೊಂದು ಗ್ರಾಮದ ಮನೆ ಮನೆಗೆ ಭೇಟಿ ಕೊಟ್ಟು ವಸತಿ ರಹಿತರ ನೈಜ ಪಟ್ಟಿ ತಯಾರಿಸಿಕೊಡುವಂತೆ, ಅನರ್ಹರಿಗೆ ಸರ್ಕಾರದ ಉಚಿತ ಮನೆ ಹಂಚಿಕೆ ಮಾಡದಂತೆ ತಿಳಿಸಿದ್ದೆ. ಆದರೆ ಯಾರೊಬ್ಬರೂ ಈ ಕೆಲಸ ಮಾಡಲಿಲ್ಲ. ಬದಲಾಗಿ ಶಾಸಕರು ಮನೆ ಕೊಡದಂತೆ ಹೇಳಿದ್ದಾರೆ ಎಂದು ಅಪಪ್ರಚಾರ ಮಾಡಿ ನನ್ನ ಹೆಸರು ಕೆಡಿಸುವ ಷಡ್ಯಂತ್ರ ನಡೆಸಿದ್ದೀರಿ. ನೀವು ರಾಜಕೀಯ ಮಾಡ್ತೀರೋ ಅಥವಾ ಬಡವರ ಪರ ಕೆಲಸ ಮಾಡ್ತೀರೋ ಎಂದು ಹರಿಹಾಯ್ದರು.

ಮನೆಗಳ ಸರ್ವೇ ನಡೆಸಿದವರನ್ನು, ನಡೆಸಿಲ್ಲದವರನ್ನು ಸಭೆಯಲ್ಲೇ ಎದ್ದು ನಿಲ್ಲಿಸಿ ಸರ್ವೇ ನಡೆಸಿದವರಿಂದ ಮಾಹಿತಿ ಪಡೆದುಕೊಂಡು, ಸರ್ವೇ ನಡೆಸದವರಿಗೆ ಎಚ್ಚರಿಕೆ ನೀಡಿ 15 ದಿನದಲ್ಲಿ ಸರ್ವೇ ವರದಿ ಸಲ್ಲಿಸದಿದ್ದಲ್ಲಿ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಎಚ್ಚರಿಸಿದರು. ನೀವು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ, ನಾನು ನಿಮ್ಮ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನೀವು ಕಾನೂನು ಮೀರಿ ಮನೆಗಳ ಹಂಚಿಕೆ ವಿಷಯದಲ್ಲಿ ದಂಧೆ ನಡೆಸಲು ಮುಂದಾದರೆ ನಾನು ಸುಮ್ಮನಿರೊಲ್ಲ ಎಂದು ಗರಂ ಆದರು.

ಬಿದರಕುಂದಿ, ಹಡಲಗೇರಿ, ಕುಂಟೋಜಿ ಗ್ರಾಪಂನ ಕೆಲವು ಸರ್ವೇ
ನಂಬರ್‌ಗಳನ್ನು ಮುದ್ದೇಬಿಹಾಳ ಪುರಸಭೆಗೆ ವರ್ಗಾಯಿಸಿ 2011ರಲ್ಲೇ ಸರ್ಕಾರ ಗೆಜೆಟ್‌ ನೊಟಿಫಿಕೇಶನ್‌ ಹೊರಡಿಸಿದೆ. ಆದರೂ ಈ ಗ್ರಾಪಂ ಪಿಡಿಒಗಳು ಆದೇಶ ಪಾಲಿಸಿಲ್ಲ. ಇದರಿಂದ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಹಿನ್ನೆಡೆ ಆಗತೊಡಗಿದೆ. ತಿಂಗಳೊಳಗೆ ಗ್ರಾಪಂನವರು ಸರ್ವೆ ನಂಬರ್‌ಗಳನ್ನು ಪುರಸಭೆಗೆ ವರ್ಗಾಯಿಸಬೇಕು. ಈ ಬಗ್ಗೆ ಸಂಬಂಧಿಸಿದವರೊಂದಿಗೆ ಪುರಸಭೆ ಮುಖ್ಯಾಧಿಕಾರಿ ಸಂಪರ್ಕದಲ್ಲಿರಬೇಕು ಎಂದು ಸೂಚಿಸಿದರು.

ಪುರಸಭೆ, ಗ್ರಾಪಂ ಎನ್‌ಒಸಿ ಇಲ್ಲದೆ ಆಸ್ತಿ ನೋಂದಣಿ ಮಾಡುತ್ತಿರುವ ಸಬ್‌ ರಜಿಸ್ಟ್ರಾರ್‌ ವಿರುದ್ಧ ತೀವ್ರ ಶಾಸಕರು
ಹರಿಹಾಯ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಬ್‌ ರಜಿಸ್ಟ್ರಾರ್‌, ಇನ್ನು ಮುಂದೆ ಅಂಥ ಪ್ರಕರಣ ನಡೆಯದಂತೆ ಎಚ್ಚರ ವಹಿಸುತ್ತೇನೆ ಎಂದು ಹೇಳಿದರು.

Advertisement

ರಸ್ತೆಬದಿ ಅಂಗಡಿಗಳಿಗೆ ಪುರಸಭೆ ಎನ್‌ಒಸಿ ಇಲ್ಲದೇ ಬೇಕಾಬಿಟ್ಟಿ ವಿದ್ಯುತ್‌ ಕನೆಕ್ಷನ್‌ ಕೊಡುವುದನ್ನು ಬಂದ್‌ ಮಾಡುವಂತೆ ಹೆಸ್ಕಾಂ ಅಧಿಕಾರಿ ಎಸ್‌.ಬಿ. ಪಾಟೀಲಗೆ, ಮುಖ್ಯ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಪಿಡಬ್ಲೂಡಿ ಎಇಇ ಜಿ.ಎಸ್‌.ಪಾಟೀಲಗೆ, ತಾಲೂಕಿನಲ್ಲಿ ಅಕ್ರಮ ಮದ್ಯ ಹಾವಳಿ ತಡೆಗಟ್ಟಲು ಮುಂದಾಗುವಂತೆ ಅಬಕಾರಿ ಅಧಿಕಾರಿಗೆ, ಕಡುಬಡವರ ಮಾಸಾಶನ, ರೇಷನ್‌ ಕಾರ್ಡ್‌ ಕೊಡಲು ವಿಳಂಬ ಮಾಡದಂತೆ ತಹಶೀಲ್ದಾರ್‌ ಜಿ.ಎಸ್‌. ಮಳಗಿ ಮತ್ತು ಅನಿಲಕುಮಾರ ಢವಳಗಿಗೆ ಸೂಚಿಸಿದರು.

ಇದೇ ವೇಳೆ ಇನ್ನಿತರ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ತಾಪಂ ಅಧ್ಯಕ್ಷೆ ಚನ್ನಮ್ಮ ತಂಗಡಗಿ, ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ತಾಳಿಕೋಟೆ ತಹಶೀಲ್ದಾರ್‌ ಅನಿಲಕುಮಾರ ಢವಳಗಿ, ಸಾರಿಗೆ ಘಟಕ ವ್ಯವಸ್ಥಾಪಕ ರಾಹುಲ್‌ ಹೊನಸೂರೆ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next