Advertisement

ಮುನ್ನೆಚ್ಚರಿಕೆ ಕ್ರಮ; ವಿವಿಧ ಬಡಾವಣೆ ಸೀಲ್‌ಡೌನ್‌

04:19 PM Apr 15, 2020 | Naveen |

ಮುದ್ದೇಬಿಹಾಳ: ವಿಜಯಪುರದಲ್ಲಿ ಕೊರೊನಾ ಸೋಂಕಿತರ ಪತ್ತೆಯಾಗಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದ ಮುಖ್ಯರಸ್ತೆ ಸಂಪರ್ಕಿಸುವ ವಿವಿಧ ಬಡಾವಣೆಗಳ ಆಂತರಿಕ ರಸ್ತೆಗಳನ್ನು ಪುರಸಭೆಯವರು ಪೊಲೀಸರ ಸಹಕಾರದೊಂದಿಗೆ ಸೋಮವಾರ ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಿದ್ದಾರೆ.

Advertisement

ಲಾಕಡೌನ್‌ ಇದ್ದರೂ ಜನರು ಅನವಶ್ಯಕವಾಗಿ ಹೊರಗೆ ತಿರುಗಾಡುತ್ತಿದ್ದರು. ಎಷ್ಟು ತಿಳಿಹೇಳಿದರೂ ತಮ್ಮ ಚಾಳಿ ಮುಂದುವರೆಸಿದ್ದರು. ಪೊಲೀಸರ ಲಾಠಿ ಏಟಿಗೂ ಮಣಿದಿರಲಿಲ್ಲ. ಇದೀಗ ಜಿಲ್ಲೆಯ ಪರಿಸ್ಥಿತಿ ವಿಷಮಗೊಂಡಿರುವುದನ್ನು ಅರಿತು ತಾಲೂಕು ಆಡಳಿತದ ಕಟ್ಟುನಿಟ್ಟಿನ ಸೂಚನೆ ನೀಡಿದ ಹಿನ್ನೆಲೆ ಈ ಕ್ರಮ ಕೈಕೊಳ್ಳಲಾಗಿದೆ. ಇದರಿಂದಾಗಿ ಪಿಲೇಕೆಮ್ಮನಗರದಿಂದ ಬಸವೇಶ್ವರ ವೃತ್ತ ಮಾರ್ಗವಾಗಿ ಪೊಲೀಸ್‌ ಠಾಣೆವರೆಗಿನ, ವೀರಶೈವ ರುದ್ರಭೂಮಿಯಿಂದ ಮುಖ್ಯಬಜಾರ್‌ ಮಾರ್ಗವಾಗಿ ಇಂದಿರಾ ವೃತ್ತದವರೆಗಿನ ಮುಖ್ಯರಸ್ತೆ ಸಂಪರ್ಕಿಸುವ ಆಂತರಿಕ ರಸ್ತೆಗಳನ್ನೆಲ್ಲ ಬ್ಯಾರಿಕೇಡ್‌, ಕಬ್ಬಿಣದ ಏಣಿ ಅಡ್ಡ ಇಟ್ಟು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ.

ಅನವಶ್ಯಕವಾಗಿ ರಸ್ತೆಗಿಳಿಯುತ್ತಿರುವ, ಗುಂಪುಗೂಡುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರ ಸಲಹೆ ಮೇರೆಗೆ ಈ ಕಾರ್ಯ ಕೈಕೊಳ್ಳಲಾಗಿದೆ. ಈ ವ್ಯವಸ್ಥೆ ಲಾಕ್‌ಡೌನ್‌ ಮುಗಿಯುವವರೆಗೂ ಮುಂದುವರಿಯುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಇದೊಂದು ಪ್ರಾಯೋಗಿಕ ಪರೀಕ್ಷೆ ಆಗಿದ್ದು, ಇದರ ಫಲಿತಾಂಶ ನೋಡಿಕೊಂಡು ಇನ್ನುಳಿದ ಬಡಾವಣೆಗಳಲ್ಲೂ ಇದನ್ನು ವಿಸ್ತರಿಸಲಾಗುವುದು. ಈಗ ಸೀಲ್‌ ಮಾಡಿರುವ ಬಡಾವಣೆಗಳ ಜನರ ತುರ್ತು ಸಂಚಾರಕ್ಕೆ ಒಂದೊಂದೇ ರಸ್ತೆಗಳನ್ನು ತೆರೆದಿಡಲಾಗಿದೆ. ಇದರಿಂದ ವಾಹನಗಳ ಅನವಶ್ಯಕ ಸಂಚಾರ ನಿಯಂತ್ರಣಕ್ಕೆ ಪೊಲೀಸರಿಗೆ ಅನುಕೂಲ ಆಗುತ್ತದೆ. ಈ ವ್ಯವಸ್ಥೆಯನ್ನೂ ಉಲ್ಲಂಘಿಸುವವರ ವಾಹನವನ್ನು ಈ ಬಾರಿ ಲಾಕ್‌ ಡೌನ್‌ ಮುಗಿಯುವವರೆಗೂ ಸೀಜ್‌ ಮಾಡಲಾಗುತ್ತದೆ ಎಂದು ಪಿಎಸ್‌ಐ ಮಲ್ಲಪ್ಪ ಮಡ್ಡಿ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next