ಮುದ್ದೇಬಿಹಾಳ: ಈ ನಾಡಿನ ಶ್ರೇಷ್ಠ ಯತಿವರೇಣ್ಯರಲ್ಲಿ ಒಬ್ಬರಾಗಿದ್ದ ಮಧ್ವಾಚಾರ್ಯರು ಸ್ಥಾಪಿಸಿದ್ದ ದ್ವೈತ ಸಂಪ್ರದಾಯಕ್ಕೆ ಸೇರಿರುವ ಉಡುಪಿ ಪೇಜಾವರ ಮಠದ 32ನೇ ಪೀಠಾಧಿಪತಿ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣಕ್ಕೆ 2009, 2013 ಮತ್ತು 2014 ಹೀಗೆ ಒಟ್ಟು 3 ಬಾರಿ ಭೇಟಿ ನೀಡಿ ಅಪಾರ ಭಕ್ತಸಮೂಹಕ್ಕೆ ದರ್ಶನಾಶಿರ್ವಾದದ ಸೌಭಾಗ್ಯ ಕರುಣಿಸಿ ಈ ಭಾಗದಲ್ಲಿ ತಮ್ಮ ಹೆಜ್ಜೆ ಗುರುತನ್ನು ಉಳಿಸಿ ಹೋಗಿದ್ದಾರೆ.
1999ರ ಫೆಬ್ರವರಿ 20,21,22ರಂದು 3 ದಿನ ಪಟ್ಟಣದ ಬನಶಂಕರಿ ನಗರದಲ್ಲಿರುವ ತಾಳಿಕೋಟೆ ಬೈಪಾಸ್ ರಸ್ತೆಪಕ್ಕದ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಚಿದಂಬರ ಸೇವಾ ಸಮಿತಿ ವತಿಯಿಂದ ನೀಲಗಿರಿಭಟ್ಟ ಜೋಶಿ (ನೀಲಣ್ಣ) ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಗಾಯತ್ರಿ ಮಹಾಯಾಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೊದಲ ಬಾರಿ ಇಲ್ಲಿಗೆ ಬಂದಿದ್ದ ಯತಿವರ್ಯರು 2 ದಿನ ಇಲ್ಲೇ ವಾಸ್ತವ್ಯ ಹೂಡಿದ್ದರು. ಆಗ ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳ ವಿಪ್ರ ಸಮಾಜದವರು, ಇತರೆ ಸಮಾಜದ ಭಕ್ತರು ಯತಿವರೇಣ್ಯರ ದರ್ಶನಾಶಿರ್ವಾದ ಪಡೆದುಕೊಂಡಿದ್ದರು ಎನ್ನುವುದನ್ನು ವಿಪ್ರ ಸಮಾಜದ ಮುಂದಾಳು ಸುರೇಶ ಕುಲಕರ್ಣಿ ನೆನಪಿಸಿಕೊಳ್ಳುತ್ತಾರೆ.
2013ರ ಜುಲೈ 3ರಂದು ತಾಳಿಕೋಟೆ ಪಟ್ಟಣದಲ್ಲಿ ನಡೆದ ಶ್ರೀಕೃಷ್ಣ ದೇವಸ್ಥಾನಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ಮರಳುವ ಮಾರ್ಗಮಧ್ಯೆ ರಾತ್ರಿ ಮುದ್ದೇಬಿಹಾಳ ಪಟ್ಟಣದಲ್ಲಿರುವ ಯತಿವರೇಣ್ಯರ ಪ್ರಮುಖ ಭಕ್ತರಲ್ಲಿ ಒಬ್ಬರಾಗಿದ್ದ ಸುಭಾಷ್ ಕುಲಕರ್ಣಿ ಅವರ ಮನೆಗೆ ಭೇಟಿ ನೀಡಿ ಕೆಲ ನಿಮಿಷ ವಾಸ್ತವ್ಯ ಮಾಡಿ ತೀರ್ಥ ಸ್ವೀಕರಿದ್ದರು. ಆಗ ಬೆಂಗಳೂರಿಗೆ ತೆರಳುವ ಅವಸರ ಇದ್ದುದರಿಂದ ಭಕ್ತರಿಗೆ ದರ್ಶನ ನೀಡಿರಲಿಲ್ಲ.
2014ರ ಡಿಸೆಂಬರ್ 9ರಂದು 5ನೇ ಪರ್ಯಾಯ ಹಿನ್ನೆಲೆ ಭಾರತ ಪರ್ಯಟನೆ ಭಾಗವಾಗಿ ಇಲ್ಲಿಗೆ ಆಗಮಿಸಿದ್ದ ಯತಿವರೇಣ್ಯರು ಒಂದಿಡೀ ದಿನ ಇಲ್ಲೇ ಇದ್ದು ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಬೃಂದಾವನದಲ್ಲಿ ರಾಯರಿಗೆ ವಿಶೇಷ ಪೂಜೆ ನಡೆಸಿಕೊಟ್ಟಿದ್ದರು. ಹಲವು ಪ್ರಮುಖ ಭಕ್ತರ ಮನೆಗೂ ತೆರಳಿ ದರ್ಶನಾಶಿರ್ವಾದ ನೀಡಿದ್ದರು.
ಪ್ರಸಾದವನ್ನೂ ಇಲ್ಲೇ ಸ್ವೀಕರಿಸಿದ್ದರು. ವಿವೇಕಾನಂದ ವಿದ್ಯಾಪ್ರಸಾರ ಸಮಿತಿಯ ಜ್ಞಾನಭಾರತಿ ವಿದ್ಯಾಮಂದಿರಕ್ಕೆ ತೆರಳಿ ಅಲ್ಲಿ ನಡೆಯುತ್ತಿದ್ದ ಸಂಸ್ಕಾರಯುತ ಶೈಕ್ಷಣಿಕ ಚಟುವಟಿಕೆ ಗಮನಿಸಿ ಸಮಿತಿಯ ಆಡಳಿತ ಮಂಡಳಿ, ಶಿಕ್ಷಕ ವೃಂದದಿಂದ ಗೌರವ ಸನ್ಮಾನ ಸ್ವೀಕರಿಸಿದ್ದರು. ಅನಂತರ ಕಬ್ಬಿಣದ ತೇರು ತಯಾರಿಸುವಲ್ಲಿ ದೇಶಾದ್ಯಂತ ಜನಮನ್ನಣೆ ಪಡೆದುಕೊಂಡಿರುವ ರಥಶಿಲ್ಪಿ ಡಾ| ಪರಶುರಾಮ ಪವಾರ ಅವರ ನರೇಂದ್ರ ಎಂಜಿನಿಯರಿಂಗ್ ವರ್ಕ್ಸ್ ಉದ್ಯಮಕ್ಕೆ ಪಾದಸ್ಪರ್ಶ ಮಾಡಿ ತೇರು ತಯಾರಿಕೆಯ ಪದ್ಧತಿ ತಿಳಿದುಕೊಂಡು ಶುಭ ಕೋರಿದ್ದರು. ಆಗ ಪ್ರಮುಖ ಭಕ್ತ ಸುಭಾಷ್ ಕುಲಕರ್ಣಿ ಅವರ ಮನೆಯಲ್ಲೇ ವಾಸ್ತವ್ಯ
ಹೂಡಿ ಭಕ್ತರನ್ನು ಆಶಿರ್ವದಿಸಿದ್ದರು.
ಡಿ.ಬಿ. ವಡವಡಗಿ