ಮುದ್ದೇಬಿಹಾಳ: ಯೋಜನಾ ವರದಿ ಅನುಸಾರವೇ ಅಭಿವೃದ್ಧಿ ಕೆಲಸಗಳು ನಡೆಯುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಕಳಪೆ ಕಾಮಗಾರಿ ಮಾಡಿದ್ದು ಸಾಬೀತಾದಲ್ಲಿ ಗುತ್ತಿಗೆದಾರರ ಜೊತೆ ಸಂಬಂಧಿಸಿದ ಅಧಿಕಾರಿಗಳನ್ನೂ ಸೇರಿಸಿ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಯಲಿಗಾರ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಇಲ್ಲಿನ ತಾಪಂ ಸಭಾ ಭವನದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವ ಪಿಡಬ್ಲೂಡಿ, ಪಿಆರ್‌ಇಡಿ ಸಬ್ ಡಿವಿಜನ್, ಗ್ರಾಮೀಣ ಕುಡಿವ ನೀರು ಸರಬರಾಜು, ಪುರಸಭೆ, ಹೆಸ್ಕಾಂ ಮತ್ತಿತರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳು ಜನರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಇವೆ. ಅಂಥ ಕಾಮಗಾರಿಗಳನ್ನು ಭ್ರಷ್ಟಾಚಾರ ನಡೆಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದಿಲ್ಲವೇ, ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆ ಆದಂತಾಗುವುದಿಲ್ಲವೇ ಎಂದು ಹರಿಹಾಯ್ದರು.
ಹೆಸ್ಕಾಂನವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು ಯಾವುದೇ ವಿದ್ಯುತ್ ಕಂಬ ಸ್ಥಳಾಂತರ ಮಾಡಬೇಕಾದರೆ ಹೆಸ್ಕಾಂನವರ ಬಳಿ ಅದಕ್ಕಾಗಿಯೇ ಪ್ರತ್ಯೇಕ ಅನುದಾನ ಇರುತ್ತದೆ. ಆದರೆ ಅವರು ಇದನ್ನು ಬಳಕೆ ಮಾಡುವುದರ ಬದಲು ಎಸ್ಟಿಮೇಟ್ ತಯಾರಿಸಿ ಸಂಬಂಧಿಸಿದವರಿಂದ ಹಣ ತುಂಬಿಸಿಕೊಂಡು ಕಂಬ ಸ್ಥಳಾಂತರಿಸುತ್ತಾರೆ. ಈ ಬಗ್ಗೆ ಜಿಲ್ಲಾಮಟ್ಟದ ಸಭೆಯಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ. ಶೇ. 1ರಷ್ಟು ಅನುದಾನ ಇದಕ್ಕಾಗಿ ನಿಗದಿಪಡಿಸಿದ್ದರೂ ಸಾರ್ವಜನಿಕರಿಗೆ ದಾರಿ ತಪ್ಪಿಸುವ ಕೆಲಸ ಏಕೆ ಮಾಡುತ್ತೀರಿ. ಜನರು ಸತ್ತ ಮೇಲೆ ಎಚ್ಚರಗೊಳ್ಳುತ್ತೀರೇನು?ಸಾರ್ವಜನಿಕರು ವಿದ್ಯುತ್ ತೆಗೆದುಕೊಳ್ಳದಿದ್ದರೆ ಹೆಸ್ಕಾಂ ಇಲಾಖೆಯೇ ಇರುತ್ತಿರಲಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ಹೆಸ್ಕಾಂನವರು ಸಾರ್ವಜನಿಕರ ದೂರವಾಣಿ ಕರೆಗಳನ್ನು ಸ್ವೀಕರಿಸುವುದಿಲ್ಲ ಎನ್ನುವ ಆರೋಪ ವ್ಯಾಪಕವಾಗಿದೆ. ರಾತ್ರಿ ಏನಾದರೂ ವಿದ್ಯುತ್ ಸಮಸ್ಯೆ ಆದಲ್ಲಿ ಲೈನಮನ್, ಸೆಕ್ಷನ್ ಆಫೀಸರ್ ಯಾರೂ ಸಿಗುವುದೇ ಇಲ್ಲ. ಇದನ್ನು ತಿದ್ದಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ನೇತಾಜಿನಗರ, ಅಂಬೇಡ್ಕರ್ ನಗರ ಬಡಾವಣೆಯ ನಿವಾಸಿಗಳ ಜೊತೆ ಸಭೆಯಲ್ಲಿ ಮಧ್ಯ ಪ್ರವೇಶಿಸಿದ ಪರಶುರಾಮ ನಾಲತವಾಡ ಅವರು ಅಂಬೇಡ್ಕರ್ ನಗರದಲ್ಲಿ ಕಸಾಯಿ ಖಾನೆ ಇದ್ದು ಅದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಪುರಸಭೆಗೆ ಹಲವು ಬಾರಿ ಅದನ್ನು ಸ್ಥಳಾಂತರಿಸುವಂತೆ ಹೇಳಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಕೂಡಲೇ ಸ್ಪಂದಿಸಿದ ಯಲಿಗಾರ ಅವರು ಸಭೆಯಲ್ಲಿ ಪಾಲ್ಗೊಂಡಿದ್ದ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಅವರಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ಮುದ್ದೇಬಿಹಾಳ ತಹಶೀಲ್ದಾರ್ ಜಿ.ಎಸ್. ಮಳಗಿ, ತಾಳಿಕೋಟೆ ತಹಶೀಲ್ದಾರ್ ಅನಿಲಕುಮಾರ ಢವಳಗಿ, ಲೋಕಾಯುಕ್ತ ಸಿಪಿಐ ಬಿರಾದಾರ, ತಾಪಂ ಸಹಾಯಕ ನಿರ್ದೇಶಕ ಪ್ರಕಾಶ ದೇಸಾಯಿ, ಗ್ರಾಮೀಣ ಕುಡಿವ ನೀರು ಪೂರೈಕೆ ವಿಭಾಗದ ಎಇಇ ಜೆ.ಪಿ. ಶೆಟ್ಟಿ ಸೇರಿದಂತೆ ಕೆಲ ಪ್ರಮುಖ ಇಲಾಖೆಗಳ ಅಧಿಕಾರಿಗಳು ಇದ್ದರು.