ಮುದ್ದೇಬಿಹಾಳ: ಇಲ್ಲಿನ ಶತಮಾನ ಕಂಡಿರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಗೆ (ಕೆಬಿಎಂಪಿಎಸ್) 1986ರಲ್ಲಿ 7ನೇ ತರಗತಿ ಪೂರೈಸಿರುವ ಹಳೆ ವಿದ್ಯಾರ್ಥಿಗಳ ಬ್ಯಾಚ್‌ನ ಪ್ರಮುಖರು ಶಾಲೆಗೆ ಭೇಟಿ ನೀಡಿ ಮುಖ್ಯಾಧ್ಯಾಪಕರ ಕೊಠಡಿ, ಗಣಪತಿ ಪ್ರತಿಷ್ಠಾಪನಾ (ಶಾಲೆ ಸಭಾಭವನ) ಕೋಣೆ ನೆಲಹಾಸು ದುರಸ್ತಿಗೊಳಿಸುವ ಮತ್ತು ವರಾಂಡಾದಲ್ಲಿರುವ ಸಭಾಮಂಟಪ ಜೀರ್ಣೋದ್ಧಾರಗೊಳಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಉದಯವಾಣಿಯಲ್ಲಿ 2019ರ ಡಿಸೆಂಬರ್ 3 ಮತ್ತು 4ರಂದು ಶತಮಾನದ ಶಾಲೆಗೆ ಸಮಸ್ಯೆಗಳೇ ಕಂಟಕ, ಕೆಬಿಎಂಪಿ ಶಾಲೆ ಸುತ್ತ ಅಸ್ವತ್ಛತೆ ಹುತ್ತ ಶಿರೋನಾಮೆಯಡಿ ಪ್ರಕಟಗೊಂಡಿದ್ದ ವಿಶೇಷ ವರದಿ ಮತ್ತು ಶಾಲೆಯಲ್ಲಿ ಕಲಿತು ಸಮಾಜದ ವಿವಿಧ ಸ್ಥರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಳೆ ವಿದ್ಯಾರ್ಥಿಗಳ ನೆರವಿನ ಚಟುವಟಿಕೆಗಳಿಂದ ಪ್ರೇರಣೆಗೊಂಡು ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ.
ಸ್ಥಳೀಯರಾಗಿರುವ ಮತ್ತು ಇದೇ ಶಾಲೆಯಲ್ಲಿ ಹಲವು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ದಿ| ಬಿ.ಎಸ್. ಜಮಖಂಡಿ ಗುರೂಜಿ ಅವರ ಪುತ್ರ ಸದ್ಯ ಪೌರಾಡಳಿತ ಇಲಾಖೆ ಅಧಿಕಾರಿಯಾಗಿರುವ ಅರವಿಂದ ಜಮಖಂಡಿ ನೇತೃತ್ವದ 1986 ಬ್ಯಾಚ್‌ನ ಸ್ನೇಹಿತರ ತಂಡ ಶಾಲೆ ಮುಖ್ಯಾಧ್ಯಾಪಕ ಟಿ.ಎನ್. ರೂಢಗಿ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಶಾಲೆ ಜೀರ್ಣೋದ್ಧಾರಕ್ಕೆ ಅಗತ್ಯ ಇರುವ ಕೆಲಸ ಕಾರ್ಯಗಳ ಮಾಹಿತಿ ಪಡೆದುಕೊಂಡರು.
ನಂತರ ಶಾಲೆಯ ಎಲ್ಲ ಕಡೆ ತಿರುಗಾಡಿ ಏನೇನು ಬೇಕು ಎನ್ನುವುದನ್ನು ಪಟ್ಟಿ ಮಾಡಿಕೊಂಡು ಆದಷ್ಟು ಬೇಗ ತಮ್ಮ ಬ್ಯಾಚ್‌ನ ಪ್ರಮುಖರಾದ ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ಅಧ್ಯಕ್ಷ ಸತೀಶಕುಮಾರ ಓಸ್ವಾಲ್ ಸೇರಿದಂತೆ ಹಲವು ಗಣ್ಯರ ಜೊತೆ ಚರ್ಚಿಸಿ ಅಗತ್ಯ ಕಾಮಗಾರಿಗೆ ಚಾಲನೆ ನೀಡುವುದಾಗಿ ವಾಗ್ಧಾನ ಮಾಡಿದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅರವಿಂದ, ತಮ್ಮ ತಂದೆ ಅದೇ ಶಾಲೆಯಲ್ಲಿ ಬಹಳ ವರ್ಷ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ಸ್ಮರಣೆಯಲ್ಲಿ ಜಮಖಂಡಿ ಪರಿವಾರದ ವತಿಯಿಂದ ಶಾಶ್ವತವಾಗಿ ಉಳಿಯುವಂತಹ ಕಾರ್ಯವೊಂದನ್ನು ಮಾಡಲು ಚಿಂತಿಸಿದ್ದು ಈ ಕುರಿತು
ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಅನುಷ್ಠಾನಕ್ಕೆ ತರಲಾಗುತ್ತದೆ ಎಂದರು.
ಗೋಪಿ ಮಡಿವಾಳರ, ರಾಘವೇಂದ್ರ ಕುಲಕರ್ಣಿ, ಕುಮಾರಸ್ವಾಮಿ ಶಿವಯೋಗಿಮಠ, ಅಶೋಕ ಬಿರಾದಾರ, ಸುರೇಶ ಕಲಾಲ, ಮುತ್ತು ಹುರಕಡ್ಲಿ, ಮಲ್ಲನಗೌಡ ಸಾಲವಾಡಗಿ, ಡಾ| ಕೃಷ್ಣಾಜಿ ಪವಾರ, ರಾಘವೇಂದ್ರ ಕುಲಕರ್ಣಿ ರೂಢಗಿ, ಜೀತೇಂದ್ರ ಓಸ್ವಾಲ್, ಪ್ರಕಾಶ ಪತ್ತಾರ ಸೇರಿದಂತೆ 15-20 ಜನ ಇದ್ದರು.
ನೆಲಹಾಸಿಗೆ ಟೈಲ್ಸ್: ಕೆಲ ದಿನಗಳ ಹಿಂದೆ ಶಾಲೆಗೆ ಭೇಟಿ ನೀಡಿದ್ದ 1985ರ 7ನೇ ತರಗತಿ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳ ತಂಡ ಅಂದು ನೀಡಿದ್ದ ವಾಗ್ಧಾನದಂತೆ ಶಾಲೆಯ ಕಾರಿಡಾರ್‌ನ ಮಿಣಜಗಿ ಫರಸಿ ನೆಲಹಾಸನ್ನು ತೆಗೆದುಹಾಕಿ ಆ ಜಾಗದಲ್ಲಿ ಶಾಬಾದಿ ಕಲ್ಲಿನ ಟೈಲ್ಸ್‌ಗಳನ್ನು ಅಳವಡಿಸಿ ಸುಂದರಗೊಳಿಸಲಾಗಿದೆ. ಟೈಲ್ಸ್ ದೇಣಿಗೆಯ ಸಂಕೇತವಾಗಿ ಕಲ್ಲಿನಲ್ಲಿ ಕೆತ್ತಿದ 1985ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳಿಂದ ಟೈಲ್ಸ್ ಕೊಡುಗೆ ನಾಮಫಲಕವನ್ನೂ ಅಳವಡಿಸಿ ತಮ್ಮ ಕಾರ್ಯವನ್ನು ಇತರರಿಗೆ ಮಾದರಿಯನ್ನಾಗಿ ಮಾಡಿದ್ದಾರೆ. ಮೊದಲೆಲ್ಲ ಅಲ್ಲಲ್ಲಿ ತುಂಡಾಗಿ ಮಕ್ಕಳು, ಶಿಕ್ಷಕರ ಸುಗಮ ತಿರುಗಾಟಕ್ಕೆ ಅಡ್ಡಿ ಮಾಡುತ್ತಿದ್ದ ಮಿಣಜಗಿ ಫರಸಿ ನೆಲಹಾಸಿನ ಜಾಗದಲ್ಲಿ ಟೈಲ್ಸ್‌ಗಳು ಬಂದಿದ್ದು ಎಲ್ಲರ ಗಮನ ಸೆಳೆಯುತ್ತಿದೆ.