ಮುದ್ದೇಬಿಹಾಳ: ಭೂ ಪರಿಹಾರ ಕುರಿತು ವಿವಾದಕ್ಕೀಡಾಗಿ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಾಲತವಾಡ-ಮೂಕಿಹಾಳ ಮುಖ್ಯ ರಸ್ತೆಯಲ್ಲಿ ಜೈನಾಪುರ ಕ್ರಾಸ್-ಚವನಭಾವಿ ಬಳಿ ಅರ್ಧಕ್ಕೆ ನಿಂತಿರುವ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಲಾಗಿದೆ.
ಈ ಕಾಮಗಾರಿಗೆ ರಸ್ತೆಪಕ್ಕದ ಜಮೀನುಗಳ ಕೆಲ ರೈತರು ತಡೆ ಒಡ್ಡುವ ಆತಂಕ ಇದ್ದುದರಿಂದ ಪಿಡಬ್ಲೂಡಿ ಇಲಾಖೆಯ ಎಇಇ ಜಿ.ಎಸ್.ಪಾಟೀಲ ಅವರು ತಹಶೀಲ್ದಾರ್ ಜಿ.ಎಸ್. ಮಳಗಿ, ಸಿಪಿಐ ಆನಂದ ವಾಗಮೋಡೆ, ಪಿಎಸೈ (ಕ್ರೈಂ) ಟಿ.ಜಿ. ನೆಲವಾಸಿ ಅವರನ್ನು ಸ್ಥಳಕ್ಕೆ ಕರೆದೊಯ್ದು ರೈತರು ಕಾಮಗಾರಿಗೆ ಅಡ್ಡಿ ಪಡಿಸಲು ಮುಂದಾದರೆ ಅವರ ಮನವೊಲಿಸುವ ಉದ್ದೇಶ ಹೊಂದಿದ್ದರು.
ಆದರೆ ಅಧಿಕಾರಿಗಳು ಬಹಳ ಹೊತ್ತು ಸ್ಥಳದಲ್ಲೇ ಗಿಡದ ನೆರಳಲ್ಲಿ ಕುಳಿತು ಕಾಯ್ದರೂ ತಕರಾರು ಮಾಡಬಹುದು ಎನ್ನಲಾದ ರೈತರು ಸ್ಥಳಕ್ಕೆ ಬರಲಿಲ್ಲ. ಹೀಗಾಗಿ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಅಧಿಕಾರಿಗಳು ಸಮಯ ವ್ಯರ್ಥಗೊಳಿಸಿ ಸ್ವಸ್ಥಾನಕ್ಕೆ ಮರಳಿದರು. ಈ ವೇಳೆ ತರಕಾರು ಮಾಡುತ್ತಾರೆ ಎಂದು ಭಾವಿಸಿದ್ದ ಕೆಲ ರೈತರನ್ನು ಪಿಡಬ್ಲೂಡಿ ಅಧಿಕಾರಿಗಳೇ ಸಂಪರ್ಕಿಸಿ ಸ್ಥಳಕ್ಕೆ ಬರುವಂತೆ ಆಹ್ವಾನಿಸಿದ್ದರು. ಆದರೆ ರೈತರ ಮುಖಂಡರು ಬೇರೆ ಊರಲ್ಲಿರುವುದರಿಂದ ಇವತ್ತು ಬರುವುದು ಆಗೊಲ್ಲ. ನಾಳೆ ಎಲ್ಲರೂ ಸೇರಿ ಸಭೆ ನಡೆಸಿ ಮಾತಾಡೋಣ ಎಂದು ಸಮಜಾಯಿಷಿ ನೀಡಿದರು. ಇದನ್ನು ತಿಳಿದ ತಹಶೀಲ್ದಾರ್ ಅವರು ಬುಧವಾರ ಎಲ್ಲರೂ ತಹಸೀಲ್ದಾರ್ ಕಚೇರಿಗೆ ಬಂದರೆ ಅಲ್ಲೇ ಮಾತುಕತೆ ನಡೆಸಿ ಮನವೊಲಿಸುವುದಾಗಿ ತೀರ್ಮಾನಿಸಿದರು.
ಏತನ್ಮಧ್ಯೆ ಕಾಮಗಾರಿ ಹಿಡಿದಿರುವ ಮೂಲ ಗುತ್ತಿಗೆದಾರರು, ಪಿಡಬ್ಲೂಡಿಯವರು ಜಂಟಿಯಾಗಿ ಜೆಸಿಬಿ ಯಂತ್ರದ ಮೂಲಕ ಅರ್ಧಕ್ಕೆ ನಿಂತ ಕಾಮಗಾರಿಯ ಹಾಳಾದ ಭಾಗವನ್ನು ಸಮತಟ್ಟುಗೊಳಿಸುವ, ಎರಡೂ ಕಡೆ ಬೆಳೆದಿರುವ ಜಂಗಲ್ ಕಟಿಂಗ್ ಮಾಡುವ ಕೆಲಸ ಪ್ರಾರಂಭಿಸಿದ್ದಾರೆ.ಪಿಡಬ್ಲೂಡಿ ಸೆಕ್ಷನ್ ಅಧಿಕಾರಿ ದಸ್ತಗೀರ ಮೇಲಿನಮನಿ, ಎಂಜಿನಿಯರ್‌ಗಳು, ಪೊಲೀಸ್ ಸಿಬ್ಬಂದಿ ಈ ಸಂದರ್ಭ ಇದ್ದರು.
ಯಾಕೆ ವಿಳಂಬ?: 5-6 ವರ್ಷಗಳ ಹಿಂದೆ ಜಿಲ್ಲಾ ಮುಖ್ಯ ರಸ್ತೆಯಾಗಿದ್ದ ನಾಲತವಾಡದಿಂದ ಮೂಕಿಹಾಳ ಕ್ರಾಸ್‌ವರೆಗೆ ರಾಜ್ಯ ಹೆದ್ದಾರಿ ಸಂಪರ್ಕಿಸುವ 20.20 ಕಿ.ಮೀ ರಸ್ತೆ ಕಾಮಗಾರಿಗೆ ಪಿಡಬ್ಲೂಡಿ ಇಲಾಖೆಯಿಂದ ಟೆಂಡರ್ ಕರೆದು ಕೆಲಸ ಪ್ರಾರಂಭಿಸಲಾಗಿತ್ತು. ಕಾಮಗಾರಿ ಜೈನಾಪುರ ಕ್ರಾಸ್‌ನಿಂದ ಚವನಭಾವಿವರೆಗೆ ರಸ್ತೆ ನಿರ್ಮಿಸಲು ರಸ್ತೆ ಪಕ್ಕದ ರೈತರು ತಕರಾರು ತೆಗೆದು ತಮ್ಮ ಜಮೀನನ್ನು ಭೂಸ್ವಾ ಧೀನ ಮಾಡಿಕೊಂಡಿದ್ದಕ್ಕೆ ಹೆಚ್ಚುವರಿ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ಕೋರ್ಟ್ ಮೊರೆ ಹೋಗಿದ್ದರು.
ವರ್ಷಗಳವರೆಗೆ ಕೋರ್ಟ್‌ನಲ್ಲಿ ಪ್ರಕರಣ ನಡೆದಿದ್ದರಿಂದ ವಿವಾದಿತ ಭಾಗ ಹೊರತುಪಡಿಸಿ
ಉಳಿದೆಡೆ ರಸ್ತೆ ನಿರ್ಮಿಸಲಾಗಿತ್ತು. ಅಂದಾಜು 5 ಕಿ.ಮೀ ಇರುವ ವಿವಾದಿತ ರಸ್ತೆಯಲ್ಲಿ ಖಡಿಗಳು ಚಲ್ಲಾಪಿಲ್ಲಿಯಾಗಿ ಬಿದ್ದು ರಸ್ತೆ ಸಂಚಾರಕ್ಕೆ ಸಾಕಷ್ಟು ತೊಂದರೆ ತಂದುಕೊಟ್ಟಿತ್ತು. ವಿವಾದ ಕೋರ್ಟ್‌ನಲ್ಲಿ ಇತ್ಯರ್ಥಗೊಂಡಿದ್ದು ರೈತರಿಗೆ ಪರಿಹಾರ ಕೊಡುವ ಅಗತ್ಯ ಇಲ್ಲ ಎಂದು ಕೋರ್ಟ್ ಆದೇಶಿಸಿದ್ದಾಗಿ ಹೇಳಿ ಜಿಲ್ಲಾಧಿಕಾರಿಯವರು ಅರ್ಧಕ್ಕೆ ನಿಂತ ಕಾಮಗಾರಿ ಮುಂದುವರಿಸುವಂತೆ ತಹಶೀಲ್ದಾರ್, ಪಿಡಬ್ಲೂಡಿ ಅಧಿಕಾರಿಗಳಿಗೆ ಸೂಚಿಸಿದ್ದರು.
2-3 ಬಾರಿ ಕೆಲಸಕ್ಕೆ ಹೋದಾಗಲೆಲ್ಲ ರೈತರು ತಕರಾರು ತೆಗೆದು ಕೆಲಸ ನಿಲ್ಲಿಸಿದ್ದರು. ಈ ಹಂತದಲ್ಲಿ ರಸ್ತೆ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರು ಸಂಚಾರಕ್ಕೆ ತೊಂದರೆ ಆಗುತ್ತಿರುವುದರಿಂದ ಬೇಗನೆ ಕೆಲಸ ಪ್ರಾರಂಭಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರತೊಡಗಿದ್ದರು. ಕೋರ್ಟ್‌ನಲ್ಲಿ ವಿವಾದ ಇತ್ಯರ್ಥಗೊಂಡಿದ್ದರಿಂದ ಇದೀಗ ಕೆಲಸ ಮತ್ತೇ ಪ್ರಾರಂಭಿಸಲಾಗಿದೆ.