ಮುದ್ದೇಬಿಹಾಳ: ಜಮೀನು ವಿವಾದ ಹಿನ್ನೆಲೆ ಅಣ್ಣನ ಮಗನೇ ಚಿಕ್ಕಪ್ಪ (ತಂದೆಯ ತಮ್ಮ)ನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ನಾಲತವಾಡ ಪಟ್ಟಣದಲ್ಲಿ ನಡೆದಿದೆ.
ಬಾಲಪ್ಪ ಅಮರಪ್ಪ ಕ್ಷತ್ರಿ (47) ಮೃತ ಚಿಕ್ಕಪ್ಪ. ಬಾಲಪ್ಪನ ಅಣ್ಣ ಪರಸಪ್ಪನ ಮಗ ಆದಪ್ಪ ಕ್ಷತ್ರಿ ಕೊಲೆ ಆರೋಪಿ.
ಬಾಲಪ್ಪ ಅವರು ನಾರಾಯಣಪುರ ರಸ್ತೆಯ ಬಲಭಾಗದಲ್ಲಿರುವ ತಮ್ಮ ಜಮೀನಿನಲ್ಲಿ ಅಮಾವಾಸ್ಯೆ ನಿಮಿತ್ಯ ಪೂಜೆ ಸಲ್ಲಿಸಲು ಹೋಗಿದ್ದರು. ಈ ವೇಳೆ ಪಕ್ಕದ ಜಮೀನಿನಲ್ಲಿ ಆರೋಪಿ ಆದಪ್ಪ ಕುಟುಂಬದವರು ತಮ್ಮ ಜಮೀನಿನಲ್ಲಿ ಗಳೆ ಹೊಡೆಯುತ್ತಿದ್ದರು. ಈ ವೇಳೆ ಜಮೀನಿನ ಬದುವಿನ ಬಗ್ಗೆ ಎರಡೂ ಕಡೆಯವರ ನಡುವೆ ಜಗಳ ನಡೆದಿದೆ. ಜಗಳದಲ್ಲಿ ಆರೋಪಿ ಆದಪ್ಪನು ಬಾಲಪ್ಪನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಬಾಲಪ್ಪ ಕುಸಿದು ಬಿದ್ದ ಕೂಡಲೆ ಆರೋಪಿ ಆದಪ್ಪ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಜಮೀನಿನಲ್ಲಿ ನಡೆದ ಘಟನೆ ಕುರಿತು ಮೋಬೈಲ್ ಮೂಲಕ ಸಂಬಂಧಿಕರಿಗೆ ತಿಳಿಸಿದ್ದಾನೆ.
ಅವರು ಸ್ಥಳಕ್ಕೆ ಬಂದು ನೋಡಿದಾಗ ಬಾಲಪ್ಪ ಮೃತನಾಗಿದ್ದ. ಸ್ಥಳಕ್ಕೆ ಮುದ್ದೇಬಿಹಾಳ ಪಿಎಸ್ ಐ ಸಂಜಯ್ ತಿಪ್ಪರಡ್ಡಿ ಭೇಟಿ ನೀಡಿ ಕಾನೂನು ಪ್ರಕ್ರಿಯೆ ಜರುಗಿಸಿದ್ದಾರೆ.
ಸಂಜೆ ಶವವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆಗೆ ಅನುವು ಮಾಡಿಕೊಡಲಾಗಿದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ತಲೆಮರೆಸಿಕೊಂಡಿದ್ದಾನೆ.
ಇದನ್ನೂ ಓದಿ: Stock market ಅತಿದೊಡ್ಡ ಹಗರಣದಲ್ಲಿ ಮೋದಿ, ಶಾ ನೇರವಾಗಿ ಭಾಗಿ: ರಾಹುಲ್ ಆರೋಪ