ಮುದ್ದೇಬಿಹಾಳ: ಕವಡಿಮಟ್ಟಿ ಗ್ರಾಮದಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮುಖ್ಯರಸ್ತೆ ಮೇಲೆ ಕೋವಿಡ್ ಕುರಿತ ಜಾಗೃತಿ ಬರಹ ಮತ್ತು ಕೋವಿಡ್ ವೈರಸ್ ಚಿತ್ರ ಬಿಡಿಸಿ ಗ್ರಾಪಂ ಸಹಯೋಗದಲ್ಲಿ ಕೋವಿಡ್ ಬಗ್ಗೆ ಜನಜಾಗೃತಿ ಮೂಡಿಸಲಾಯಿತು. ಬೃಹತ್ ಆಕಾರದ ವೈರಸ್ ಆಕಾರದ ಸುತ್ತಲೂ ಬೀದಿಗೆ ಬಂದರೆ ನೀನು, ನಿನ್ನ ಮನೆಗೆ ಬರುವೆ ನಾನು ಕೊರೊನಾ ಶಿರ್ಷಿಕೆ ಬರೆದು ವೈರಸ್‌ನ ಅಪಾಯವನ್ನು ಮನದಟ್ಟು ಮಾಡಿಕೊಡಲಾಯಿತು.
ಈ ವೇಳೆ ಪಿಡಿಒ ಪಿ.ಎಸ್. ಕಸನಕ್ಕಿ ಮಾತನಾಡಿ, ಆರೋಗ್ಯ ಇಲಾಖೆ ಪೊಲೀಸರ ನೆರವಿನೊಂದಿಗೆ ಕೋವಿಡ್ ಸಾಂಕ್ರಾಮಿಕ ರೋಗದ ಕುರಿತು ವ್ಯಾಪಕ ಪ್ರಚಾರ ನಡೆಸಿದೆ. ಸರ್ಕಾರ ಲಾಕ್‌ಡೌನ್ ಘೋಷಿಸಿ ಜನರು ಮನೆಯಿಂದ ಹೊರಗೆಬರದಂತೆ ಸೂಚಿಸಿದೆ. ಆದರೂ ನಮ್ಮ ಜನರಲ್ಲಿ ಅಪಾಯದ ಮನವರಿಕೆ ಆಗಿಲ್ಲ. ನಿತ್ಯವೂ ಲಾಕ್‌ಡೌನ್ ನಿಯಮ ಉಲ್ಲಂಘಿ ಸುವುದು ಕಂಡುಬರುತ್ತಿದೆ ಎಂದರು.
ಸಂತೆ, ಜಾತ್ರೆ, ಸಭೆ, ಸಮಾರಂಭ ಹೀಗೆ ಎಲ್ಲವನ್ನೂ ರದ್ದುಪಡಿಸಲಾಗಿದ್ದರೂ ಜನ ಗುಂಪುಗೂಡುವುದು, ಮನೆಯಿಂದ ಹೊರಗೆ ಬರುವುದು ನಿಲ್ಲಿಸಿಲ್ಲ. ಹಾಗಾಗಿ ರಸ್ತೆಯಲ್ಲೇ ಚಿತ್ರ ಬಿಡಿಸುವ ಮೂಲಕ ವೈರಸ್‌ನ ಅಪಾಯದ ಬಗ್ಗೆ ಎಚ್ಚರಿಕೆ ನೀಡಲು ಈ ಕ್ರಮಕ್ಕೆ ಮುಂದಾಗಬೇಕಾಗಿದೆ. ಇನ್ನಾದರೂ ಸಾರ್ವಜನಿಕರು ಸರ್ಕಾರದ ನಿಯಮ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಗ್ರಾಪಂ ಉಪಾಧ್ಯಕ್ಷ ಸಿದ್ದಣ್ಣ ಪೂಜಾರಿ, ಗ್ರಾಪಂ ಸದಸ್ಯರಾದ ಶೇಖಪ್ಪ ಚಲವಾದಿ, ಕೋವಿಡ್ ಸೈನಿಕರಾದ ಭೀಮಣ್ಣ ಪೂಜಾರಿ, ಸುವರ್ಣ ಮುರಾಳ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಈ ವೇಳೆ ಗ್ರಾಪಂ ವತಿಯಿಂದ ಕವಡಿಮಟ್ಟಿ, ಜಲಪುರ, ಶಿರೋಳ, ಸರೂರು, ಸರೂರ ತಾಂಡಾ ಸೇರಿ ಎಲ್ಲ ಗ್ರಾಮಗಳಲ್ಲಿ ಆಟೋಗೆ ಮೈಕ್ ಕಟ್ಟಿ ಕೋವಿಡ್ ನಿಯಂತ್ರಣಕ್ಕಾಗಿ ಪಾಲಿಸಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಯಿತು.