ಮುದ್ದೇಬಿಹಾಳ: ಗೋವಾ ರಾಜ್ಯದಿಂದ ಬಂದವರು ತಮ್ಮ ಮನೆಗಳಲ್ಲಿ, ಮಹಾರಾಷ್ಟ್ರ ಸೇರಿದಂತೆ ಕೋವಿಡ್ ಸೋಂಕಿನ ಹೈ ರಿಸ್ಕ್ ರಾಜ್ಯಗಳಿಂದ ಬಂದವರು ತಾಲೂಕಾಡಳಿತ ಗುರುತಿಸಿದ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರೆಂಟೈನ್‌ಗೊಳಗಾಗಿ ಸೋಂಕು ಹರಡದಂತೆ ಮುಂಜಾಗ್ರೆತೆ ವಹಿಸಬೇಕು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮನವಿ ಮಾಡಿದರು.
ನಗರದ ಬಸ್ ನಿಲ್ದಾಣಕ್ಕೆ ಬುಧವಾರ ಗೋವಾದಿಂದ 7 ಬಸ್‌ಗಳಲ್ಲಿ ಆಗಮಿಸಿದ 196 ವಲಸೆ ಕಾರ್ಮಿಕರನ್ನು ಸ್ವಾಗತಿಸಿಕೊಂಡು ಅವರಿಗೆ ಮತ್ತು ಅವರನ್ನು ಕರೆ ತಂದ ಬಸ್
ಗಳ ಚಾಲಕ-ನಿರ್ವಾಹಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಿ ಅವರು ಮಾತನಾಡಿದರು. ಯಾರೊಬ್ಬರೂ ನಿಯಮ ಉಲ್ಲಂಘಿಸಬಾರದು. ಕ್ವಾರೆಂಟೈನ್ ಮಾಡಲು ಬರುವ ಸರ್ಕಾರಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಬಾರದು. ಸಾಂಸ್ಥಿಕ ಕ್ವಾರೆಂಟೈನ್ ಗೊಳಗಾದವರಿಗೆ ಸರ್ಕಾರವೇ ಊಟ, ನೀರು ಸಹಿತ ಎಲ್ಲ ಸೌಲಭ್ಯ ಒದಗಿಸಲು ವ್ಯವಸ್ಥೆ ಮಾಡಿದೆ ಎಂದರು.
ಕ್ವಾರೆಂಟೈನ್ ನಿಯಮ ಉಲ್ಲಂಘಿಸುವವರಿಗೆ ಶಿಕ್ಷೆ ವಿಧಿಸಲು ಅವಕಾಶ ಇದೆ. ಸೋಂಕಿನ ಹೈ ರಿಸ್ಕ್ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವ ಬಸ್ ಗಳ ಚಾಲಕರು-ನಿರ್ವಾಹಕರು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಮನೆಗೆ ಹೋದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಡಾ| ಪರಶುರಾಮ ಪವಾರ, ತಾಳಿಕೋಟೆ ಪುರಸಭೆ ಸದಸ್ಯ ವಾಸು ಹೆಬಸೂರ ಸೇರಿದಂತೆ ಅಧಿಕಾರಿಗಳು ಇದ್ದರು.