ಮುದ್ದೇಬಿಹಾಳ: ಅಪಾಯಕಾರಿ ಕೊರೊನಾ ವೈರಸ್ ಬಗ್ಗೆ ಭಯ ಬೇಡ, ಆದರೆ ಮುಂಜಾಗ್ರತಾ ಕ್ರಮ ಅಗತ್ಯವಾಗಿ ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯಾ ತೇರದಾಳ ಹೇಳಿದ್ದಾರೆ.
ಪಟ್ಟಣದ ಈಕರಸಾ ಸಂಸ್ಥೆ ಬಸ್ ನಿಲ್ದಾಣದಲ್ಲಿ ರವಿವಾರ ಸಂಜೆ ಆರೋಗ್ಯ ಇಲಾಖೆ ಮತ್ತು ಸಾರಿಗೆ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಕೊರೊನಾ ವೈರಸ್ ಕುರಿತು ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಯಾಣಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರು ಸೋಂಕು ಪೀಡಿತರ ಸಂಪರ್ಕದಿಂದ ಆದಷ್ಟು ದೂರ ಇರಬೇಕು. ಮೇಲಿಂದ ಮೇಲೆ ಬಿಸಿ ನೀರು ಸೇವಿಸಬೇಕು. ಶಂಕಿತ ರೋಗಿಯನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿಸುವುದರ ಜೊತೆಗೆ ಮುಖಕ್ಕೆ ಮೂರು ಪದರದ ಮಾಸ್ಕ್ ಬಳಸಬೇಕು. ವೈಯಕ್ತಿಕ ಸ್ವತ್ಛತೆ ಕಾಪಾಡಿಕೊಳ್ಳುವುದರ ಜೊತೆಗೆ ಆಗಾಗ ಸಾಬೂನಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳದೆದುಕೊಳ್ಳುತ್ತಿರಬೇಕು. ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಇಲ್ಲವೇ ಕರವಸ್ತ್ರ ಬಳಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಉಸಿರಾಟದ ತೊಂದರೆ ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಮಾಂಸ, ಮೊಟ್ಟೆ, ಮೀನು ಮುಂತಾದವುಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬೇಕು. ಪ್ರಾಣಿಗಳನ್ನು ಮುಟ್ಟಿದ ನಂತರ ಪ್ರತಿ ಸಲ ಸ್ವಚ್ಛವಾಗಿ ಕೈ ತೊಳೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಘಟಕ ವ್ಯವಸ್ಥಾಪಕ ರಾಹುಲ್ ಹೊನಸೊರೆ ಮಾತನಾಡಿ, ಸಾರ್ವಜನಿಕರು ಕೊರೊನಾ ಬಗ್ಗೆ ಜಾಗ್ರತರಾಗಿರಬೇಕು. ಪ್ರಯಾಣಿಕರ ಅಕ್ಕಪಕ್ಕ ವಿದೇಶಿಯರು ಇದ್ದರೆ ಅಥವಾ ವಿದೇಶದಿಂದ ಬಂದ ಭಾರತೀಯರು ಕಂಡು ಬಂದಲ್ಲಿ ತಕ್ಷಣವೇ ಸಾರಿಗೆ ಸಿಬ್ಬಂದಿ ಗಮನಕ್ಕೆ ತರಬೇಕು ಅಥವಾ ಆರೋಗ್ಯ ಇಲಾಖೆ ಸಹಾಯವಾಣಿ 104ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಹೀಗೆ ಮಾಡುವುದರಿಂದ ಬೇರೆಯವರಿಗೂ ಸೋಂಕು ಹರಡುವುದನ್ನು ತಡೆಯುವುದು ಸಾಧ್ಯವಿದೆ. ಸಾರಿಗೆ ಸಿಬ್ಬಂದಿಗಳೂ ಸಹಿತ ಇಂಥ ಪ್ರಕರಣ ಕಂಡು ಬಂದಲ್ಲಿ ತಕ್ಷಣ ಮೇಲಾಧಿಕಾರಿಗಳ ಇಲ್ಲವೇ ಸಂಬಂ ಧಿಸಿದವರ ಗಮನಕ್ಕೆ ತಂದು ಸಹಕರಿಸಬೇಕು ಎಂದರು.
ಆರೋಗ್ಯ ಇಲಾಖೆಯ ಎಂ.ಪಿ. ಹಿಂಗೋಲಿ, ಎಸ್.ಆರ್. ಸಜ್ಜನ, ಸಾರಿಗೆ ಸಂಸ್ಥೆಯ ಎಂ.ಎಚ್. ಬಿರಾದಾರ, ಎಸ್.ಬಿ. ಗಸ್ತಿಗಾರ, ಸಾರಿಗೆ ನಿಯಂತ್ರಕರಾದ ಜಿ.ಎಂ. ಹಿರೇಗೌಡರ, ಎಸ್. ಎಚ್.ಢವಳಗಿ, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಹಿರಿಯ ಆರೋಗ್ಯ ಸಹಾಯಕ ಎಂ.ಎಸ್. ಗೌಡರ ನಿರೂಪಿಸಿದರು. ಇದೇ ವೇಳೆ ಪ್ರಯಾಣಿಕರಿಗೆ ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ಇರುವ ಕರಪತ್ರ ವಿತರಿಸಲಾಯಿತು.