Advertisement

ಬ್ಯಾಂಕ್‌ ಚುನಾವಣೆಗೆ ಅಪಸ್ವರದ ಕೂಗು

03:15 PM Jan 19, 2020 | Naveen |

ಮುದ್ದೇಬಿಹಾಳ: ಇಲ್ಲಿನ ಪ್ರತಿಷ್ಠಿತ ದಿ ಕರ್ನಾಟಕ ಕೋ ಆಪ್‌ ಬ್ಯಾಂಕ್‌ನ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಸಾಕಷ್ಟು ಅಪಸ್ವರ ಕೇಳಿ ಬರತೊಡಗಿದೆ. ಒಟ್ಟು 7091 ಮತದಾರರ ಪೈಕಿ 5929 ಮತದಾರರ ಮತದಾನದ ಹಕ್ಕನ್ನು ಬ್ಯಾಂಕ್‌ನವರು ವಿವಿಧ ಕಾರಣ ನೀಡಿ ರದ್ದುಪಡಿಸಿರುವುದು ತೀವ್ರ ವಿವಾದಕ್ಕೆ ಅವಕಾಶ ಮಾಡಿಕೊಟ್ಟಿದೆ.

Advertisement

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತದಾರರ ಹಕ್ಕು ರದ್ದುಪಡಿಸಿರುವ ಘಟನೆಗೆ ಬ್ಯಾಂಕ್‌ನ ಸದಸ್ಯ ವಲಯದಲ್ಲಿ ತೀವ್ರ ಆಕ್ಷೇಪಣೆಗಳು ಕೇಳಿಬರತೊಡಗಿದ್ದು ವಿವಾದ ಕೋರ್ಟ್‌ ಮೆಟ್ಟಿಲೇರುವ ಸಂಭವ ಎದ್ದು ಕಾಣುತ್ತಿರುವುದು ಚುನಾವಣೆ ಮೇಲೆ ಕರಿಛಾಯೆ ಮುಸುಕಿದಂತಾಗಿದ್ದು ಬ್ಯಾಂಕ್‌ನ ಇತಿಹಾಸದಲ್ಲಿ ಇದು ಕಪ್ಪು ಚುಕ್ಕೆ ಎನ್ನಿಸಿಕೊಂಡಿದೆ.

ಈಗಾಗಲೇ ಕೆಲವು ಸದಸ್ಯರು ಬ್ಯಾಂಕ್‌ನ ಹಾಲಿ ಆಡಳಿತ ಮಂಡಳಿಗೆ, ಸಂಬಂಧಿಸಿದ ಅ ಧಿಕಾರಿಗಳಿಗೆ ಮನವಿ ಸಲ್ಲಿಸಿ ಮತದಾರರ ಹಕ್ಕು ರದ್ದುಪಡಿಸಿರುವುದನ್ನು ಪುನರ್‌ ಪರಿಶೀಲನೆ ನಡೆಸಬೇಕು ಎಂದು ಕೇಳಿಕೊಂಡಿದ್ದರೆ ಮತ್ತೇ ಕೆಲವರು ಮತದಾನಕ್ಕೆ ಆಯ್ಕೆ ಮಾಡಿಕೊಂಡಿರುವ ಪಟ್ಟಣದ ಹೊರ ವಲಯದಲ್ಲಿರುವ ಹೇಮರಡ್ಡಿ ಮಲ್ಲಮ್ಮ ಸಂಸ್ಥೆ ಕಟ್ಟಡಕ್ಕೂ ಆಕ್ಷೇಪಣೆ, ತಕರಾರು ಸಲ್ಲಿಸಿ ಮತದಾನ ಕೇಂದ್ರವನ್ನು ಮೊದಲಿನಂತೆ ಪಟ್ಟಣದ ಹೃದಯ ಭಾಗದಲ್ಲಿರುವ ವಿಬಿಸಿ ಪ್ರೌಢಶಾಲೆಗೆ ಸ್ಥಳಾಂತರಿಸುವ ಬೇಡಿಕೆಯನ್ನೂ ಮಂಡಿಸಿದ್ದಾರೆ.

ಭಾರಿ ಸಂಖ್ಯೆಯಲ್ಲಿ ಮತದಾರರ ಹೆಸರು ಮತದಾರ ಪಟ್ಟಿಯಿಂದ ರದ್ದುಗೊಳ್ಳಲು ಇತ್ತೀಚೆಗೆ ಜಾರಿಗೊಂಡ ಹೊಸ ನಿಯಮ ಕಾರಣ ಎನ್ನಲಾಗುತ್ತಿದೆ. ಬ್ಯಾಂಕಿನ ಸದಸ್ಯರಾದವರು 5 ಸಾಮಾನ್ಯ ಸಭೆಗಳಲ್ಲಿ ಕನಿಷ್ಠ 3 ಸಮಾನ್ಯ ಸಭೆಗೆ ಹಾಜರಾಗಬೇಕು ಮತ್ತು ವರ್ಷದಲ್ಲಿ ಕನಿಷ್ಠ 2 ಬಾರಿಯಂತೆ 3 ವರ್ಷ ತಮ್ಮ ಉಳಿತಾಯ ಖಾತೆಯನ್ನು ನಿರ್ವಹಣೆ ಮಾಡಿರಬೇಕು ಎನ್ನುವುದು ಈ ಗೊಂದಲಕ್ಕೆ ಆಸ್ಪದ ಮಾಡಿಕೊಟ್ಟಂತಾಗಿದೆ.

ಬ್ಯಾಂಕಿನ ಬಹಳಷ್ಟು ಸದಸ್ಯರಿಗೆ ಈ ನಿಯಮಗಳ ಅರಿವು ಇಲ್ಲ. ಸಾಮಾನ್ಯ ಸಭೆಗೆ ಹಾಜರಾಗುವ ಅನೇಕ ಸದಸ್ಯರು ಇದಕ್ಕಾಗಿ ನಿಗದಿಪಡಿಸಿದ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಲೇಬೇಕು ಎನ್ನುವ ಪರಿಕಲ್ಪನೆ ಹೊಂದಿಲ್ಲ. ಇದಲ್ಲದೆ ಹಲವರು ತಮ್ಮ ಖಾತೆ ನಿರ್ವಹಿಸಲು ಇರುವ ನಿಯಮದ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊಂದಿಲ್ಲ. ಬ್ಯಾಂಕ್‌ನವರು ಕೂಡ ಕಾಲಕಾಲಕ್ಕೆ ಈ ನಿಯಮಗಳ ಬಗ್ಗೆ ಸದಸ್ಯರಲ್ಲಿ ಅರಿವು ಮೂಡಿಸುವ ಪ್ರಯತ್ನಗಳನ್ನು ನಡೆಸಿಲ್ಲ ಎನ್ನುವ ಆರೋಪಗಳು ಸದಸ್ಯರಲ್ಲಿ ಕೇಳಿ ಬರುತ್ತಿವೆ.

Advertisement

ಈಗ ಘೋಷಿತಗೊಂಡಿರುವ ಮತದಾರರ ಪಟ್ಟಿಯಲ್ಲಿ ಪಟ್ಟಣ ಪ್ರದೇಶದ ಮತದಾರರಿಗಿಂತ ಗ್ರಾಮೀಣ ಭಾಗದ ಮತದಾರರು, ಒಂದೇ ಮನೆಯ 8-10 ಮತದಾರರು ಇರುವುದು ಸಾಕಷ್ಟು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ. ಬ್ಯಾಂಕಿನ ಅಧಿಕಾರ ಹಿಡಿಯಲು ಕೆಲವು ಪಟ್ಟಭದ್ರರು ಒಳಗೊಳಗೆ ಮಸಲತ್ತು ನಡೆಸಿದ್ದಾರೆ. ತಮಗೆ ಬೇಕಾದವರನ್ನು ಸದಸ್ಯರನ್ನಾಗಿ ಉಳಿಸಿಕೊಂಡು, ತಮ್ಮ ವಿರೋಧಿ ಪಾಳೆಯದಲ್ಲಿರುವವರನ್ನು ಹಣಿಯಲು ತಂತ್ರಗಾರಿಕೆ ಹೆಣೆದಿದ್ದಾರೆ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬರತೊಡಗಿರುವುದು ಹದಗೆಟ್ಟ ಪರಿಸ್ಥಿತಿಗೆ ಕನ್ನಡಿ ಹಿಡಿದಂತಾಗಿದೆ.

ಇವೆಲ್ಲದರ ಮಧ್ಯೆ ಬ್ಯಾಂಕ್‌ನ ಸದಸ್ಯ ಸ್ಥಾನಗಳಿಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ದೊರಕಿದ್ದು ಶನಿವಾರ ಸಂಜೆಯವರೆಗೆ ಕೇವಲ 4 ಜನ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಜ. 23 ಕೊನೆ ದಿನವಾಗಿದೆ. ಒಟ್ಟು 13 ಸ್ಥಾನಗಳಿಗೆ (ಸಾಮಾನ್ಯ-7, ಮಹಿಳೆ-2, ಬಿಸಿಎಂ ಎ-2, ಎಸ್ಸಿ-1, ಎಸ್ಟಿ-1) ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿದೆ. 24ರಂದು
ನಾಮಪತ್ರಗಳ ಪರಿಶೀಲನೆ, 25ರಂದು ನಾಮಪತ್ರ ಹಿಂಪಡೆಯಲು, 27ರಂದು ಕಣದಲ್ಲಿರುವವರ ಅಂತಿಮ ಪಟ್ಟಿ ಪ್ರಕಟಿಸಲು, 31ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆದು
ಅಂದೇ ಸಂಜೆ ಮತ ಎಣಿಕೆ, ಫಲಿತಾಂಶ ಪ್ರಕಟಿಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.

2014ರಲ್ಲೇ ರಿಸರ್ವ್‌ ಬ್ಯಾಂಕ್‌ ನಿಯಮ ರೂಪಿಸಿ ಜಾರಿಗೆ ತಂದಿದ್ದು
ಅದನ್ನು ಕಡ್ಡಾಯವಾಗಿ ಪಾಲಿಸಲಾಗಿದೆ. ಕಾಲ ಕಾಲಕ್ಕೆ ಹೊಸ ನಿಯಮದ ಬಗ್ಗೆ ಸದಸ್ಯರಿಗೆ ಅರಿವು ಮೂಡಿಸಲಾಗಿದೆ. ನಮ್ಮ ಮನೆಯಲ್ಲೇ ಕೆಲವು ಮತಗಳು ರದ್ದುಗೊಂಡಿವೆ. ನಿಯಮ ಬಿಟ್ಟು ಏನನ್ನೂ ಮಾಡಿಲ್ಲ. ಈಗಿನ ಸ್ಥಿತಿಗೆ ಸದಸ್ಯರೇ ಹೊಣೆಗಾರರು.
.ಸತೀಶ ಓಸ್ವಾಲ್‌,
ಬ್ಯಾಂಕ್‌ನ ಹಾಲಿ ಆಡಳಿತ ಮಂಡಳಿ ಅಧ್ಯಕ್ಷರು

ಹೊಸ ನಿಯಮಗಳ ಬಗ್ಗೆ ಹೆಚ್ಚಿನ ಸದಸ್ಯರಿಗೆ ಅರಿವು ಇಲ್ಲ. ಮತದಾರರ ಪಟ್ಟಿ ಘೋಷಣೆ ಆದಾಗಲೇ ಎಲ್ಲರೂ ಜಾಗೃತರಾಗಿದ್ದಾರೆ. ಈ ಬಾರಿ ನಿಯಮ ಸಡಿಲಗೊಳಿಸಬೇಕು. ಎಲ್ಲರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು.
ಕಾಮರಾಜ ಬಿರಾದಾರ, ಪ್ರಭು ಕಡಿ,
ಬ್ಯಾಂಕ್‌ನ ಸದಸ್ಯರು.

„ಡಿ.ಬಿ. ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next