Advertisement

Muddebihal: ಅಕ್ರಮ ಮದ್ಯ ಮಾರಾಟ; ಅಬಕಾರಿ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ ಮಹಿಳೆಯರು

03:16 PM Apr 21, 2024 | keerthan |

ವಿಜಯಪುರ: ಗ್ರಾಮದಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟವನ್ನು ಸಾಕ್ಷಿ ಸಮೇತ ನೀಡಿದರೂ ಆರೋಪಿಗಳನ್ನು ಬಂಧಿಸದ ಅಬಕಾರಿ ಅಧಿಕಾರಿಗಳನ್ನು ಮಹಿಳೆಯರು ಇಡೀ ರಾತ್ರಿ ಗ್ರಾಮದಿಂದ ತೆರಳದಂತೆ ದಿಗ್ಬಂಧನ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

Advertisement

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಂಗಾರಗುಂಡ ಗ್ರಾಮದಲ್ಲಿ ಶನಿರಾತ್ರಿ ರಾತ್ರಿ 10 ರಿಂದ ಭಾನುವಾರ ಬೆಳಿಗ್ಗೆ 5 ಗಂಟೆಯವರೆಗೆ ಅಬಕಾರಿ ಅಧಿಕಾರಿಗಳನ್ನು ಮಹಿಳೆಯರೇ ಕೂಡಿ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಸಾವಿರ ಜನಸಂಖ್ಯೆ ಇಲ್ಲದ ಬಂಗಾರಗುಂಡ ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡುವ 12 ಮದ್ಯದ ಅಂಗಡಿಗಳಿವೆ. ಇದರಿಂದಾಗಿ ಗ್ರಾಮದಲ್ಲಿ ಬಹುತೇಕ ಕುಟುಂಬಗಳು ಬೀದಿಗೆ ಬಿದ್ದಿದ್ದು, ಸಾಲ ಹಾಗೂ ಮದ್ಯ ವ್ಯಸನಿಗಳು ಸಾವಿಗೀಡಾಗುತ್ತಿದ್ದಾರೆ. ಕೇವಲ ಒಂದು ವರ್ಷದಲ್ಲಿ 8 ಯುವಕರು ಆತ್ಮಹತ್ಯೆ ಮಾಡಿಕೊಂಡು ಕುಟುಂಬಗಳು ಕಂಗಾಲಾಗಿವೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮ ಮದ್ಯದಿಂದ ಇಡೀ ಗ್ರಾಮದಲ್ಲಿ ಶಾಂತಿ ಹಾಗೂ ಕೌಟುಂಬಿಕ ನೆಮ್ಮದಿ ಹಾಳಾಗಿದ್ದು, ಅಬಕಾರಿ ಅಧಿಕಾರಿಗಳು ಮಾತ್ರ ಅಕ್ರಮ ಮದ್ಯ ಮಾರಾಟ ತಡೆಗೆ ಮುಂದಾಗಿಲ್ಲ. ಶಾಲೆ, ದೇವಸ್ಥಾನಗಳಂಥ ಸಾರ್ವಜನಿಕ ಸ್ಥಳಗಳೂ ಮದ್ಯ ವ್ಯಸನಿಗಳ ತಾಣಗಳಾಗಿವೆ ಎಂದು ಕಿಡಿ ಕಾರಿದರು.

ಅಕ್ರಮ ಮದ್ಯ ಮಾರಾಟ ತಡೆಯುವ ಕುರಿತು ಹಲವು ಬಾರಿ ಮನವಿ ಮಾಡಿದರೂ ಸಾಕ್ಷಿ ಸಮೇತ ಆರೋಪ ಮಾಡಿ ಎಂದು ಅಬಕಾರಿ ಅಧಿಕಾರಿಗಳು ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಹೀಗಾಗಿಯೇ ಶನಿವಾರ ರಾತ್ರಿ ಅಕ್ರಮ ಮದ್ಯ ಮಾರಾಟಕ್ಕೆ ಸಂಗ್ರಹಿಸಿದ್ದ ದಾಸ್ತಾನು ಸಮೇತ ಹಿಡಿದು, ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Advertisement

ಶನಿವಾರ ರಾತ್ರಿ 10 ಗಂಟೆಗೆ ಸ್ಥಳಕ್ಕೆ ಬಂದ ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯವನ್ನು ಮಾತ್ರ ವಶಕ್ಕೆ ಪಡೆಯುತ್ತೇವೆ, ಆರೋಪಿಗಳನ್ನು ಬಂಧಿಸುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಕುಪಿತರಾದ ನೂರಾರು ಮಹಿಳೆಯರು, ಅಬಕಾರಿ ಅಧಿಕಾರಿಗಳು ಸ್ಥಳದಿಂದ ಕದಲದಂತೆ ಕೂಡಿ ಹಾಕಿದ್ದಾರೆ. ಅಂತಿಮವಾಗಿ ಆರೋಪಿಗಳ ವಿರುದ್ಧ ದೂರು ದಾಖಲಿಸಿ ಬಂಧಿಸುವುದಾಗಿ ಹೇಳಿ ಭಾನುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಮಹಿಳೆಯರು ವಶಕ್ಕೆ ಪಡೆದಿದ್ದ ಅಕ್ರಮ ಮದ್ಯದ ಸಮೇತ ಗ್ರಾಮದಿಂದ ಅಬಕಾರಿ ಅಧಿಕಾರಿಗಳು ತೆರಳಲು ಮುಂದಾಗಿದ್ದಾರೆ.

ಈ ಹಂತದಲ್ಲೂ ವಾಹನ ಅಡ್ಡಗಟ್ಟಿರುವ ಮಹಿಳೆಯರು, ಆರೋಪಿಗಳನ್ನು ಬಂಧಿಸದಿದ್ದರೆ ಗ್ರಾಮದಲ್ಲಿ ಭವಿಷ್ಯದಲ್ಲಿ ಉಂಟಾಗುವ ಅಕ್ರಮ ಮದ್ಯ ಮಾರಾಟದ ಎಲ್ಲ ಅಚಾತುರ್ಯಗಳಿಗೆ ಅಬಕಾರಿ ಇಲಾಖೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿ ಬಿಟ್ಟು ಕಳಿಸಿದ್ದಾರೆ.

ಈ ಕುರಿತು ಉದಯವಾಣಿ ಜೊತೆ ಮಾತನಾಡಿದ ಗ್ರಾಮದ ಆಂಜನೇಯ ಪೂಜಾರಿ, ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದೆ. ಶಾಲೆಗಳು, ದೇವಸ್ಥಾನಗಳು ಮದ್ಯವ್ಯಸನಿಗಳ ತಾಣವಾಗುತ್ತಿವೆ. ಅಕ್ರಮ ಮದ್ಯದಿಂದ ಇಡೀ ಗ್ರಾಮದಲ್ಲಿ ಅಶಾಂತಿ ಸೃಷ್ಟಿಯಾಗಿದ್ದು, ಕೌಂಟುಂಬಿಕ ಆರ್ಥಿಕ ಸಂಕಷ್ಟದಿಂದ ವರ್ಷದಲ್ಲಿ 8 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಕಷ್ಟ ನಿವೇದಿಸಿದರು.

ಇಷ್ಟಾದರೂ ಅಬಕಾರಿ ಅಧಿಕಾರಿಗಳು ನಮ್ಮ ಮನಿಗೆ ಸ್ಪಂದಿಸಿಲ್ಲ, ಕ್ರಮ ಕೈಗೊಳ್ಳಲು ಅಕ್ರಮ ಮದ್ಯದ ಸಾಕ್ಷಿ ಕೇಳುತ್ತಾರೆ. ಅಕ್ರಮ ಮದ್ಯ ಸಮೇತ ಹಿಡಿದು ಕೊಟ್ಟರೂ ಆರೋಪಿಗಳನ್ನು ಬಂಧಿಸಿಲ್ಲ. ಹೀಗಾಗಿ ಮಹಿಳೆಯರು ಅಬಕಾರಿ ಅಧಿಕಾರಿಗಳಿಗೆ ಇಡೀ ರಾತ್ರಿ ದಿಗ್ಬಂಧನ ಹಾಕಿದ್ದರು ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next