ಮುದ್ದೇಬಿಹಾಳ: ಗ್ರಾಮೀಣ ಪ್ರದೇಶಗಳಲ್ಲಿ ಯಥೇಚ್ಚವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಸೇರಿದಂತೆ ಎಲ್ಲ ರೀತಿಯ ಮದ್ಯ, ಸಾರಾಯಿ ಮಾರಾಟ ಸಂಪೂರ್ಣ ನಿಷೇಧಿಸಬೇಕು ಎಂದು ಆಗ್ರಹಿಸಿ ಒಂದಿಡೀ ಗ್ರಾಮಸ್ಥರು ನಡೆಸುತ್ತಿರುವ ಜನಜಾಗೃತಿ ಅಭಿಯಾನ ಅಕ್ಕಪಕ್ಕದ ಗ್ರಾಮಗಳಿಗೂ ಹರಡತೊಡಗಿದ್ದು, ಮದ್ಯ, ಸಾರಾಯಿ ನಿಷೇಧಕ್ಕೆ ಹೆಚ್ಚಿನ ಶಕ್ತಿ ದೊರಕ ತೊಡಗಿದೆ.
5-6 ದಿನಗಳ ಹಿಂದೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕೃಷ್ಣಾ ನದಿ ತೀರದಲ್ಲಿರುವ ಕೆಸಾಪುರ ಗ್ರಾಮದ ಪ್ರಜ್ಞಾವಂತರ ತಂಡದಿಂದ ಗ್ರಾಮಸ್ಥರ ಸಹಕಾರದೊಂದಿಗೆ ಅಭಿಯಾನ ಶುರುವಾಗಿತ್ತು. ಈಗ ಆ ಅಭಿಯಾನ ಕೆಸಾಪುರ ಗ್ರಾಮದ ಪಕ್ಕದಲ್ಲಿರುವ ಇತಿಹಾಸ ಪ್ರಸಿದ್ದ ಎಚ್ಚರೇಶ್ಚರ ಸ್ವಾಮಿ ದೇವಸ್ಥಾನ ಹೊಂದಿರುವ ನೆರಬೆಂಚಿ ಗ್ರಾಮಕ್ಕೂ ವಿಸ್ತರಿಸಿದೆ.
ಕೆಸಾಪುರ ಗ್ರಾಮದ ಪ್ರಜ್ಞಾವಂತರ ತಂಡ ಕೆಸಾಪುರ ಮಾತ್ರವಲ್ಲದೆ ಪಕ್ಕದ ಬಂಗಾರಗುಂಡ ಗ್ರಾಮದಲ್ಲೂ ಜನಜಾಗೃತಿ ನಡೆಸಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೆರಬೆಂಚಿ ಗ್ರಾಮಕ್ಕೆ ತೆರಳಿ ಮದ್ಯ, ಸಾರಾಯಿ ಮಾರಾಟ ಮಾಡದಂತೆ ಅಂಗಡಿ, ಹೊಟೇಲ್, ಮನೆಗಳು, ಪಾನಶಾಪ್ ಮತ್ತಿತರೆಡೆ ಕಳ್ಳತನದಿಂದ ಅಕ್ರಮವಾಗಿ ಮದ್ಯ ಮಾರುವವರ ಮುಂದೆ ಪ್ರತಿಭಟನೆ ನಡೆಸಿ ಇನ್ಮುಂದೆ ಮದ್ಯ ಮಾರದಂತೆ ಎಚ್ಚರಿಕೆ ನೀಡಿದ್ದಾರೆ.
ಗ್ರಾಮಸ್ಥರಲ್ಲೂ ಜಾಗೃತಿ ಮೂಡಿಸಿ ಮದ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಮನವರಿಕೆ ಮಾಡಿಕೊಟ್ಟಿದ್ದಾರೆ. ಗ್ರಾಮದಲ್ಲಿ ಕಾಲ್ನಡಿಗೆಯಲ್ಲಿ ಸಾಮೂಹಿಕವಾಗಿ ಸಂಚರಿಸಿ ಎಲ್ಲರಲ್ಲೂ ಅರಿವು ಮೂಡಿಸಿದ್ದಾರೆ.
ಇದರ ಪರಿಣಾಮ ಆಯಾ ಗ್ರಾಮಗಳಲ್ಲಿ ಅಕ್ರಮ ಮದ್ಯ, ಸಾರಾಯಿ ಮಾರಾಟ ಬಂದ್ ಆಗಿದೆ. ಪೊಲೀಸರು ಕೆಲವರ ವಿರುದ್ದ ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಪ್ರಕರಣಗಳನ್ನೂ ದಾಖಲಿಸಿಕೊಂಡಿದ್ದಾರೆ ಮುಂಬರುವ ದಿನಗಳಲ್ಲಿ ಇದು ಕೃಷ್ಣಾ ನದಿ ತೀರದಲ್ಲಿರುವ ಹಲವು ಗ್ರಾಮಗಳಿಗೂ ವಿಸ್ತರಿಸುವ ಸಂಭವ ಇದೆ.