ಮುದ್ದೇಬಿಹಾಳ: ತಾಲೂಕಿನ ಮುದ್ನಾಳ ತಾಂಡಾದ ಒಂದು ಮಗುವಿನ ತಾಯಿ ಶೋಭಾ ಲಮಾಣಿ ಎಂಬವರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ನ.7ರ ಗುರುವಾರ ಮುದ್ದೇಬಿಹಾಳ ಪಟ್ಟಣದಲ್ಲಿ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಸವೇಶ್ವರ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಲಾಯಿತು. ತಹಶೀಲ್ದಾರ್ ಕಚೇರಿಯವರೆಗೂ ರ್ಯಾಲಿ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಘಟನೆ ನಡೆದು 4-5 ದಿನಗಳಾದರೂ ಡಿಸಿ, ಎಸ್ಪಿ, ತಹಶೀಲ್ದಾರ್ ಯಾರೊಬ್ಬರೂ ಸಂತ್ರಸ್ತೆ ಮಹಿಳೆಯ ಮನೆಗೆ ಆಗಮಿಸಿ ಕುಟುಂಬದವರಿಗೆ ಸಾಂತ್ವನ ಹೇಳದಿರುವುದನ್ನು ಕಟುವಾಗಿ ಖಂಡಿಸಲಾಯಿತು.
ಏನಿದು ಘಟನೆ: ನ.2 ರಂದು ಶೋಭಾ ಅವರ ಶವ ಅರೆನಗ್ನಾವಸ್ಥೆಯಲ್ಲಿ ಗ್ರಾಮದ ಪಕ್ಕದ ಜಮೀನೊಂದರಲ್ಲಿ ಪತ್ತೆಯಾಗಿತ್ತು. 2 ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಪೊಲೀಸರು ಊಹಿಸಿದ್ದರು. ಮೃತಳ ತಾಯಿ ಶಾಂತಮ್ಮ ಮತ್ತು ಮೃತಳ 6 ವರ್ಷದ ಮಗಳು ಪೊಲೀಸರಿಗೆ ಹೇಳಿಕೆ ನೀಡಿದ್ದರು. ತನ್ನ ಮಗಳ ಸಾವಿಗೆ ಮುದ್ನಾಳ ಗ್ರಾಮದ ಬಾಷಾ ಸುಗಂಧಿ ಮತ್ತು ಇನ್ನಿತರರು ಕಾರಣ ಎಂದು ದೂರು ಶಾಂತಮ್ಮ ದಾಖಲಿಸಿದ್ದಳು.
ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು ಸಂಶಯ ಬಂದ ಕೆಲವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು.