ಮುದ್ದೇಬಿಹಾಳ: ತಾಲೂಕಿನ ಚಿರ್ಚನಕಲ್ ಗ್ರಾಮ ವ್ಯಾಪ್ತಿಯ ಬಂಡಿದಾರಿ ಪಕ್ಕದ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕತ್ತರಿಸಿ ಶ್ರೀಗಂಧವನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮುದ್ದೇಬಿಹಾಳ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳ ಮತ್ತು ಅರಣ್ಯ ರಕ್ಷಕರ ತಂಡ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು ಆತನಿಂದ 8.60 ಕೆಜಿ ಶ್ರೀಗಂಧದ ಕೇರೆ, ಸ್ಥಳದಲ್ಲಿದ್ದ 3 ಬೈಕ್ ಸೀಜ್ ಮಾಡಿದ ಘಟನೆ ಶನಿವಾರ ಸಂಜೆ ನಡೆದಿದೆ.
ಈ ಕುರಿತು ಕಚೇರಿಯಲ್ಲಿ ಸುದ್ದಿರಾರರೊಂದಿಗೆ ಮಾತನಾಡಿದ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಜೀವ ಬಿರಾದಾರ ಅವರು ನಮಗೆ ಖಚಿತ ಮಾಹಿತಿ ಸಿಕ್ಕಿದ್ದರಿಂದ ನಮ್ಮ ತಂಡ ದಾಳಿ ನಡೆಸಿತು. ಆರೋಪಿ ಬೀದರ್ ಮೂಲದ ಆನಂದ ಕಾಶಿನಾಥ ಬಾತಣದ ಎಂಬಾತನನ್ನು ಸ್ಥಳದಲ್ಲೇ ಅರೆಸ್ಟ್ ಮಾಡಲಾಗಿದ್ದು. ಈತನೊಂದಿಗೆ ಇದ್ದ ಇತರ ನಾಲ್ವರು ಪರಾರಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿ 3 ಬೈಕ್, 2 ಕೊಡಲಿ, 2 ಚಾಣ, 22.15 ಕೆಜಿ ಚಕ್ಕೆ, 8.60 ಕೆಜಿ ಶ್ರೀಗಂಧದ ತಿರುಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ :ವಿಪಕ್ಷಕ್ಕೆ ಮಾಹಿತಿ ಇಲ್ಲದೆ ವಿಷಯ ಸೇರ್ಪಡೆ; ಸಾಮಾನ್ಯ ಸಭೆಯಲ್ಲಿ ಸದಸ್ಯೆ ಏಕಾಂಗಿ ಪ್ರತಿಭಟನೆ
ಬೀದರ್ ಮೂಲದವರಾದ ಇವರ ತಂಡ ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿದ್ದು ಇಲ್ಲಿ ಸ್ಥಳೀಯರ ನೆರವಿನೊಂದಿಗೆ ಈ ಕೃತ್ಯ ಮಾಡುತ್ತಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ತನ್ನೊಂದಿಗೆ ಇದ್ದ ಇನ್ನೂ ನಾಲ್ವರ ಹೆಸರನ್ನು ಬಹಿರಂಗಪಡಿಸಿದ್ದಾನೆ. ಅವರನ್ನೂ ಬಂಧಿಸಲು ಜಾಲ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.