ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿ ತೀರದಲ್ಲಿರುವ ಬಂಗಾರಗುಂಡ-ಕಪನೂರ ಗ್ರಾಮ ವ್ಯಾಪ್ತಿಯ ತೆರೆದ ಬಾವಿಯ ಪಕ್ಕ ಭೂಮಿಯಲ್ಲಿ ಗೂಡು ಮಾಡಿಕೊಂಡು 15 ದಿನಗಳ ವಯಸ್ಸಿನ ತನ್ನ ಎರಡು ಮರಿಗಳೊಂದಿಗೆ ವಾಸವಾಗಿದ್ದ 12 ಅಡಿ ಉದ್ದದ ಹೆಣ್ಣು ಮೊಸಳೆಯನ್ನು ಅರಣ್ಯ ಇಲಾಖೆಯ ಸಿಬಂದಿ ಶುಕ್ರವಾರ ಸಂಜೆ ಸೆರೆ ಹಿಡಿದು ಅದನ್ನು ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಸುರಕ್ಷಿತವಾಗಿ ಬಿಡುವ ಮೂಲಕ ಗ್ರಾಮಸ್ಥರ ಆತಂಕ ನಿವಾರಿಸಿದ್ದಾರೆ.
ಬಹಳ ದಿನಗಳಿಂದ ಈ ಮೊಸಳೆ ತೆರೆದ ಬಾವಿಯೊಂದರಲ್ಲಿ ವಾಸವಾಗಿದ್ದು ರಾತ್ರಿ ಹೊರಗೆ ಬರುವುದು, ಹಗಲು ನೀರಲ್ಲಿರುವುದು ಮಾಡುತ್ತಿತ್ತು. ಬಾವಿಯಲ್ಲಿ ನೀರು ಕಡಿಮೆಯಾದ ಮೇಲೆ ಬಾವಿಯ ಪಕ್ಕದ ಭೂಮಿಯಲ್ಲಿದ್ದ ಗೂಡಿನಲ್ಲಿ ವಾಸವಾಗಿತ್ತು. ಮೇಲಿಂದ ಮೇಲೆ ಇದು ಜನರ ಕಣ್ಣಿಗೆ ಬಿದ್ದು ಆತಂಕ ಸೃಷ್ಟಿಸಿತ್ತು. ಇದನ್ನು ಅರಣ್ಯ ಇಲಾಖೆಯವರ ಗಮನಕ್ಕೆ ತಂದಾಗ ಅವರು ಬಂದು ಮೊಸಳೆ ಸೆರೆ ಹಿಡಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮುದ್ದೇಬಿಹಾಳ ಪ್ರಾದೇಶಿಕ ಅರಣ್ಯ ಇಲಾಖೆಯ ಆರ್‍ಎಫ್‍ಓ ಬಸನಗೌಡ ಬಿರಾದಾರ ಅವರ ಮಾರ್ಗದರ್ಶನದಲ್ಲಿ ಎಆರ್‍ಎಫ್‍ಓಗಳಾದ ಮಲ್ಲಪ್ಪ ತೇಲಿ, ವಿಜಯಕುಮಾರ ಕಿತ್ತೂರ ಅವರು ಮೊಸಳೆ ಹಿಡಿಯುವಲ್ಲಿ ಪರಿಣಿತಿ ಹೊಂದಿರುವ ಇಲಾಖೆಯ ಸಿಬಂದಿ ನಾಗೇಶ ಮೋಪಗಾರ ಎಂಬಾತನ ನೆರವಿನಿಂದ ಸಂಜೆ ಮೊಸಳೆಯನ್ನು ಗೂಡಿನಿಂದ ಹೊರಗೆ ಬರುವಂತೆ ಮಾಡಿ ಸೆರೆ ಹಿಡಿದರು.
ಕೋಲು, ಹಗ್ಗ ಬಳಸಿ ಮಿಸುಕಾಡದಂತೆ ಕಟ್ಟಿ ವಾಹನದ ಮೂಲಕ ಹಿನ್ನೀರಿಗೆ ಸಾಗಿಸಿ ಸುರಕ್ಷಿತವಾಗಿ ಬಿಡಲು ಕ್ರಮ ಕೈಕೊಂಡರು. ಗ್ರಾಮದ ಯುವಕರಾದ ಪರಶುರಾಮ ಕಪನೂರ, ರುದ್ರಗೌಡ ಪಾಟೀಲ, ಗ್ರಾಮಸ್ಥರು ಸಹಕರಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಎಫ್‍ಓ ಬಿರಾದಾರ ಅವರು ಈ ಮೊಸಳೆಯಿಂದ ಯಾರಿಗೂ ಅಪಾಯ ಸಂಭವಿಸಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹಗಲು ಜನಸಂಚಾರ ಕಂಡು ಬಂದಾಗ ತನ್ನ ಗೂಡಿನಲ್ಲಿ ಹೋಗಿ ಅಡಗಿಕೊಳ್ಳುತ್ತಿದ್ದ ಇದು ರಾತ್ರಿ ವೇಳೆ ಮತ್ತು ಜನಸಂಚಾರ ಇಲ್ಲದ ವೇಳೆ ಆಹಾರ ಅರಸಲು ಹೊರಗೆ ಬರುತ್ತಿತ್ತು. ಇದು ಜನರಲ್ಲಿ ಆತಂಕ ಉಂಟು ಮಾಡಿದ್ದರಿಂದ ಸೆರೆ ಹಿಡಿದು ಸುರಕ್ಷಿತವಾಗಿ ಮರಿಗಳ ಸಮೇತ ನದಿಯಲ್ಲಿ ಬಿಡಲಾಗಿದೆ ಎಂದು ತಿಳಿಸಿದರು.