Advertisement

ಸರೂರ: ಜಗದ್ಗುರು ರೇವಣಸಿದ್ದೇಶ್ವರ ಜಾತ್ರೋತ್ಸವಕ್ಕೆ ಚಾಲನೆ

01:37 PM Feb 24, 2020 | Naveen |

ಮುದ್ದೇಬಿಹಾಳ: ಹಾಲುಮತ ಸಮಾಜದ ಮೂಲ ಗುರು ಪೀಠ ಇರುವ ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದ ಜಗದ್ಗುರು ರೇವಣಸಿದ್ದೇಶ್ವರ (ಏಳುಗುಡಿ) ಜಾತ್ರಾ ಮಹೋತ್ಸವಕ್ಕೆ ಶನಿವಾರ ಚಾಲನೆ ದೊರಕಿದ್ದು ಫೆ. 25ರವರೆಗೆ ವಿವಿಧ ಧಾರ್ಮಿಕ, ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿವೆ.

Advertisement

ಸಿದ್ದಯ್ಯ ಗುರುವಿನ ಇವರ ನೇತೃತ್ವದಲ್ಲಿ, ಕಾಡಯ್ಯ ಗುರುವಿನ ಅಧ್ಯಕ್ಷತೆಯಲ್ಲಿ, ಮೂಲ ಮಠದ ಗುರುವರ್ಯರ ಉಪಸ್ಥಿತಿಯಲ್ಲಿ ಸಕಲ ಕಾರ್ಯಗಳು ನೆರವೇರಲಿವೆ. ಜಾತ್ರೆ ಪ್ರಾರಂಭೋತ್ಸವದ ಮೊದಲ ದಿನ ಶನಿವಾರ ಮದ್ಯಾಹ್ನ ರೇವಣಸಿದ್ದೇಶ್ವರ ಪಲ್ಲಕ್ಕಿ ಉತ್ಸವವನ್ನು ನಾರಾಯಣಪುರ ಜಲಾಶಯದ ಹತ್ತಿರ ಛಾಯಾಭಗವತಿ ಬಳಿ ಇರುವ ಕೃಷ್ಣಾ ನದಿಗೆ ಗಂಗಸ್ಥಳಕ್ಕೆ ಕರೆದೊಯ್ಯಲಾಗಿತ್ತು. ರಾತ್ರಿ ಸುಪ್ರಸಿದ್ದ ಭಜನಾ ಮಂಡಳಿಗಳಿಂದ ಬೆಳಗಿನವರೆಗೆ ಶಿವಭಜನೆ ನೆರವೇರಿದವು.

ರವಿವಾರ ಬೆಳಗ್ಗೆ ಸಕಲ ವಾದ್ಯ ವೈಭವಗಳೊಂದಿಗೆ ತೆಲಗಿ ಗ್ರಾಮದ ಕರಡಿ ಮಜಲಿನ ಸಮೇತ ಗ್ರಾಮದಲ್ಲಿರುವ ರೇವಣಸಿದ್ದೇಶ್ವರರ ಗುಡಿಯಿಂದ ಏಳು ಗುಡಿಯವರೆಗೆ ಕಳಸಗಳ ಮೆರವಣಿಗೆ ಡೊಳ್ಳು ವಾದ್ಯ ತಂಡದ ಸಮ್ಮುಖ ನಡೆದು ನಂತರ ಕಳಸವನ್ನು ಶಿಖರಕ್ಕೇರಿಸಲಾಯಿತು. ಸಂಜೆ ಸಕಲ ವಾದ್ಯ ವೈಭವಗಳೊಂದಿಗೆ ರೇವಣ ಸಿದ್ದೇಶ್ವರ ಪಲ್ಲಕ್ಕಿ ಉತ್ಸವ, ಚಿತ್ತಾರದ ಮದ್ದು ಸುಡುವಿಕೆ ನೆರವೇರಿದವು.

ಮಧ್ಯರಾತ್ರಿ 1ಕ್ಕೆ ಶಿವವಾಣಿ (ಹೇಳಿಕೆಗಳು) ಹೊರಬೀಳಲಿದೆ. 24ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸುಪ್ರಸಿದ್ದ ಡೊಳ್ಳಿನ ಪದಗಳು, ರಾತ್ರಿ 10ಕ್ಕೆ ಗುರು ವೀರೇಶ್ವರ ನಾಟ್ಯಸಂಘ ನಾಲತವಾಡ ಇವರಿಂದ ಹಾಸ್ಯ ಪ್ರಧಾನ ನಾಟಕ ಪ್ರದರ್ಶನ ಇರುತ್ತದೆ. ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಉದ್ಘಾಟಿಸಲಿದ್ದು ಎಂ.ಎಸ್‌. ಪಾಟೀಲ ಅಧ್ಯಕ್ಷತೆ ವಹಿಸುವರು. ಹಲವು ಗಣ್ಯರು ಅತಿಥಿಗಳಾಗಿ ಆಗಮಿಸುವರು. 25ರಂದು ಬೆಳಗ್ಗೆ 10ಕ್ಕೆ ದಿಂಡಿನ ರೇಸು ಸ್ಪರ್ಧೆ ಇರುತ್ತದೆ.

ಶಿವವಾಣಿ: ಶನಿವಾರ ರೇವಣಸಿದ್ದೇಶ್ವರ ಪಲ್ಲಕ್ಕಿ ಉತ್ಸವವನ್ನು ನಾರಾಯಣಪುರ ಜಲಾಶಯದ ಬಳಿ ಇರುವ ಛಾಯಾ ಭಗವತಿ ದೇವಸ್ಥಾನ ಬಳಿ ಕೃಷ್ಣಾ ನದಿಗೆ ಗಂಗಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಮಧ್ಯರಾತ್ರಿ ಹಾಲುಮತ ಗುರುಪೀಠದ ಗುರುವರ್ಯರಾದ ಸಹದೇವಯ್ಯ ಶರಣಯ್ಯ ಗುರುವಿನ್‌, ಸಿದ್ದಯ್ಯ ಕಾಡಯ್ಯ ಗುರುವಿನ್‌ ಅವರಿಂದ ಶಂಖನಾದದ ನಂತರ ಶಿವವಾಣಿ (ಹೇಳಿಕೆ) ಹೊರ ಬಂದವು. ಭಕ್ತರೊಬ್ಬರು ಸುತ್ತ ಮುಂಗಾರು ಮಳಿ ದಯಮಾಡಬೇಕ್ರಿ ಶಿವಾ ಎಂದು ಬೇಡಿಕೊಂಡರು.

Advertisement

ಕೆಲಹೊತ್ತು ಆವೇಶ ಮೈದುಂಬಿಸಿಕೊಂಡ ಗುರುವರ್ಯರು ಎಲೇ.. ತುರ್ತು ರೋಹಿಣಿ, ಮೃಗಶಿರ ಮಸ್ತು. ಮುಂಗಾರು ಕೂರಿಗ್ಗೆ ವರವುಳ್ಳ ಬಸವಣ್ಣನ ಕೊಳ್ಳ ಕಟ್ಟೇನಿ, ಅರವುಳ್ಳ ಭಕ್ತನಿಗೆ ಉಡಿ ಕಟ್ಟೇನಿ. ಆರಾದ್ರಿ, ಪುನರ್ವಸು, ಪುಷ್ಯ, ಆಶ್ಲೇಷಾ, ಮಗಿಗೆ ಸಕಲ ಸದ್ಭಕ್ತರಿಗೆ ತೃಪ್ತಿ ಆಯ್ತು. ಮುಂಗಾರು ಒಂಭತ್ತಣೆ ಅಂತಾನಲೇ.. ಎಲೈ… ತುರ್ತು ಮುಂಗಾರಿ ಮಳಿ ಸಾಗ ಮಾಡೀನಿ. ಪುಷ್ಯ ಪುನರ್ವಸು ಹಿಡಕೊಂಡು ಮುಂದಿನ ಮಳೆಗಳು ಸಾಯೋ ಜೀವ ಉಳಿಸ್ತಾವ ನೋಡು. ಮುಂಗಾರ್ಯಾಗ ಮುತ್ತಿನ ರಾಶಿಲೇ ಎಂದಿದ್ದು ಭಕ್ತರ ಸಂತಸಕ್ಕೆ ಕಾರಣವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next