Advertisement

ಮಾಹಿತಿ ಬೇಕಾದ್ರೆ 60 ಸಾವಿರ ರೂ. ತುಂಬಿ!

01:42 PM Mar 16, 2020 | Naveen |

ಮುದ್ದೇಬಿಹಾಳ: ಕೃಷಿ ಇಲಾಖೆಯಡಿ ಕೃಷಿ ಹೊಂಡಗಳ ಮಾಹಿತಿ ಒದಗಿಸುವಂತೆ ಕೇಳಿದ ಅರ್ಜಿದಾರರೊಬ್ಬರಿಗೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯೊಬ್ಬರು ಮಾಹಿತಿ ಬೇಕಾದಲ್ಲಿ ಒಟ್ಟು 60,000 ರೂ. ತುಂಬುವಂತೆ ಪತ್ರ ಬರೆದು ಅರ್ಜಿ ಹಾಕಿದ್ದ ರೈತ ಬೇಸ್ತು ಬೀಳುವಂತೆ ಮಾಡಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ನಾಲತವಾಡದಲ್ಲಿ ನಡೆದಿದೆ.

Advertisement

ತಾಲೂಕಿನ ಗರಸಂಗಿ ಗ್ರಾಮದ ಮಲ್ಲಪ್ಪ ತೋಟಪ್ಪ ಡೊಳ್ಳಿನ ಎನ್ನುವವರು ನಾಲತವಾಡ ಕೃಷಿ ಕೇಂದ್ರದ ಕೃಷಿ ಅಧಿಕಾರಿಗೆ 2014-15ನೇ ಸಾಲಿನಿಂದ 20-1-2020ರವರೆಗಿನ ನಾಲತವಾಡ ಹೋಬಳಿಯ ರೈತರ ಜಮೀನುಗಳಲ್ಲಿ ನಿರ್ಮಿಸಿರುವ ಕೃಷಿ ಹೊಂಡದ ಮಾಹಿತಿ ಕೊಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ 20-1-2020ರಂದು ಅರ್ಜಿ ಸಲ್ಲಿಸಿದ್ದರು.

ಕೃಷಿ ಹೊಂಡದ ಸಮಗ್ರ ಮಾಹಿತಿ, ಫಲಾನುಭವಿ ರೈತರ ಯಾದಿ, ಕೃಷಿ ಹೊಂಡಕ್ಕೆ ರೈತರಿಂದ ಪಡೆದ ಕಾಗದ ಪತ್ರದ ನಕಲು, ಕೃಷಿ ಹೊಂಡಗಳ ಕ್ರಿಯಾಯೋಜನೆ, ಓಚರ್‌, ಎಂಪಿ ಪುಸ್ತಕದ ನಕಲು, ಬಿಲ್‌, ಚಕ್‌ ನಂಬರ್‌, 3 ಹಂತಗಳ ಫೋಟೊ ಕೊಡುವಂತೆ ಅವರು ಅರ್ಜಿಯಲ್ಲಿ ಕೇಳಿದ್ದರು.

ಇದಕ್ಕೆ ಒಂದೂವರೆ ತಿಂಗಳ ನಂತರ ಉತ್ತರ ರೂಪದ ಪತ್ರ ಬರೆದ ಕೃಷಿ ಅ ಧಿಕಾರಿ, ತಾವು ಕೇಳಿದ ಮಾಹಿತಿ ಒಟ್ಟು 1,600 ಪುಟಗಳಲ್ಲಿ ಲಭ್ಯವಿದ್ದು ಪ್ರತಿ ಪುಟಕ್ಕೆ 10 ರೂ.ನಂತೆ 1,6000 ರೂ. ಮತ್ತು ಪ್ರತಿ ಫೋಟೊಗೆ 45 ರೂ.ನಂತೆ 44,235 ರೂ. ತುಂಬಿದರೆ ಮಾಹಿತಿ ಒದಗಿಸಲಾಗುವುದು ಎಂದು ತಿಳಿಸಿರುವುದು ಅರ್ಜಿ ಹಾಕಿದ ರೈತನನ್ನು ಹೈರಾಣು ಮಾಡಿದೆ.

ಆ ಪತ್ರದ ಸಮೇತ ಮಲ್ಲಪ್ಪ ಅವರು ಸುದ್ದಿಗಾರರ ಎದುರು ಅಳಲು ತೋಡಿಕೊಂಡಿದ್ದು ಕೃಷಿ ಹೊಂಡದಲ್ಲಿ ಹಗರಣ ನಡೆದಿರುವ ಕಾರಣಕ್ಕೆ ಅದನ್ನು ಬಹಿರಂಗಪಡಿಸಲು ಮಾಹಿತಿ ಕೇಳಿದರೆ ಈ ರೀತಿ ಉತ್ತರ ಕೊಟ್ಟಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ನಿಯಮದ ಪ್ರಕಾರ ಪ್ರತಿ ಪುಟಕ್ಕೆ 2 ರೂ., ಪ್ರತಿ ಫೋಟೊವನ್ನು ಝರಾಕ್ಸ್‌ ಮಾಡಿಸಿದರೂ ಅದರ ಪ್ರತಿ ಪುಟಕ್ಕೆ 1 ರೂ. ಪಡೆಯಬೇಕು ಎಂದಿದೆ.

Advertisement

ಹೀಗಿರುವಾಗ ಮನಸ್ಸಿಗೆ ತೋಚಿದಂತೆ ಹಣ ತುಂಬಲು ಹೇಳಿ ಅರ್ಜಿದಾರರ ಆಸಕ್ತಿ ಕುಂದಿಸುವ ಪ್ರಯತ್ನ ನಡೆಸಿದ್ದು ಸರಿ ಅಲ್ಲ. ಈಗಲಾದರೂ ಸಂಬಂ ಧಿಸಿದ ಕೃಷಿ ಅಧಿಕಾರಿ ತಮ್ಮ ತಪ್ಪು ತಿದ್ದಿಕೊಂಡು ಮಾಹಿತಿ ಹಕ್ಕು ನಿಯಮದ ಅಡಿ ನಿಗದಿಪಡಿಸಿದ ಶುಲ್ಕ ಪಡೆದುಕೊಂಡು ತಾವು ಕೇಳಿದ ಮಾಹಿತಿ ಕೊಟ್ಟು ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಪಂ ಸದಸ್ಯರ ಅಭಿವೃದ್ಧಿಗೆ ಅನುದಾನ
ಇನ್ನೊಂದು ಪ್ರಕರಣದಲ್ಲಿ ಇಲ್ಲಿನ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪ ವಿಭಾಗದ ಕಚೇರಿಯ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿ ಅರ್ಜಿದಾರರಿಗೆ ಪತ್ರ ಬರೆದಿದ್ದು ಅದರಲ್ಲಿ ಜಿಪಂ ಸದಸ್ಯರ ಅಭಿವೃದ್ಧಿಗಾಗಿ ಕೈಗೊಂಡ ಕಾಮಗಾರಿ ಅನುದಾನ ಎಂದು ಉಲ್ಲೇಖೀಸಿ ನಗೆಪಾಟಲಿಗೀಡಾದ ಪ್ರಸಂಗ ಬೆಳಕಿಗೆ ಬಂದಿದೆ.

ರಕ್ಕಸಗಿ ಗ್ರಾಪಂ ಸದಸ್ಯ ಶಿವಶರಣ ಪರಪ್ಪ ಪಟ್ಟಣಶೆಟ್ಟಿ ಎನ್ನುವವರು ಉಪ ವಿಭಾಗದ ಎಇಇಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿ 2018-19ನೇ ಸಾಲಿನ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಅಭಿವೃದ್ಧಿ ಯೋಜನೆಗೆ ಜಿಪಂ ಸದಸ್ಯರ ಅನುದಾನದಡಿ ಕೈಗೊಂಡ ಕಾಮಗಾರಿಗಳ ಕ್ರಿಯಾಯೋಜನೆಯ ಮಾಹಿತಿ ಪೂರೈಸುವಂತೆ ಕೇಳಿದ್ದರು. ಈ ಅರ್ಜಿಗೆ ಉತ್ತರಿಸಿದ್ದ ಉಪ ವಿಭಾಗದ ಎಇಇ ಅವರು ನೀವು (ಶಿವಶರಣ ಪಟ್ಟಣಶೆಟ್ಟಿ) ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ 11 ಪುಟಗಳ ಮಾಹಿತಿ ಒದಗಿಸಲಾಗಿದೆ ಎಂದು ತಿಳಿಸಿದ್ದೂ ಅಲ್ಲದೆ ಕೋರಿರುವ ಅರ್ಜಿಯಲ್ಲಿ 2018-19ನೇ ಸಾಲಿನಿಂದ ಮುದ್ದೇಬಿಹಾಳ ಮತಕ್ಷೇತ್ರದ ಅಭಿವೃದ್ಧಿ ಯೋಜನೆಗೆ ಜಿಪಂ ಸದಸ್ಯರ ಅಭಿವೃದ್ಧಿಗಾಗಿ ಕೈಗೊಂಡ ಕಾಮಗಾರಿಯ ಅನುದಾನದ ಮಂಜೂರಾದ ಕ್ರಿಯಾ ಯೋಜನೆಯ ಮಾಹಿತಿ ಎಂದು ಬಳಸಿದ್ದು ನಗೆಪಾಟಲಿಗೀಡಾದಂತಾಗಿದೆ. ಜಿಪಂ ಸದಸ್ಯರು ತಮ್ಮ ಮತಕ್ಷೇತ್ರದ ಅಭಿವೃದ್ಧಿ ಕಾಮಗಾರಿ ನಡೆಸುತ್ತಾರೋ ಅಥವಾ ತಮ್ಮ ಅಭಿವೃದ್ಧಿಗಾಗಿ ಕಾಮಗಾರಿ ನಡೆಸುತ್ತಾರೆಯೋ ಎನ್ನುವ ಸಂದೇಹ ಉಂಟಾಗುವ ರೀತಿ ಪತ್ರದ ಒಕ್ಕಣಿಕೆ ಇರುವುದು ಅಚ್ಚರಿ ಮೂಡಿಸಿದೆ. ಮಾಹಿತಿ ಹಕ್ಕು ಅಧಿಕಾರಿಯೂ ಆಗಿರುವ ಎಇಇ ಅವರು ನೀಡಿದ ಉತ್ತರದಲ್ಲಿ ವಾಸ್ತವವನ್ನೇ ಬಹಿರಂಗಪಡಿಸಿದ್ದಾರೆ. ಜಿಪಂ ಸದಸ್ಯರು ಜನರ ಅಭಿವೃದ್ಧಿಗಿಂತ ತಮ್ಮ ಅಭಿವೃದ್ಧಿಯನ್ನೇ ಮುಖ್ಯವಾಗಿಸಿಕೊಂಡಿದ್ದು ಬಹಿರಂಗವಾಗುಳಿದಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next