ಮುದ್ದೇಬಿಹಾಳ: ದೇಶ ಸೇವೆಯೇ ಈಶ ಸೇವೆ ಎನ್ನುವುದನ್ನು ಸೈನಿಕರು, ಗ್ರಾಮೀಣ ಜನರು ಕಂಡುಕೊಂಡಿದ್ದಾರೆ. ದೇಶರಕ್ಷಣೆ ನಿಜವಾದ ಕಾಳಜಿ, ಕಿಚ್ಚು ಗ್ರಾಮೀಣರಲ್ಲೇ ಹೆಚ್ಚಿಗೆ ಕಾಣುತ್ತದೆ ಎಂದು ಇಟಗಿ ಭೂ ಕೈಲಾಸ ಮೇಲಗದ್ದುಗೆ ಸಂಸ್ಥಾನ ಹಿರೇಮಠದ ಗುರು ಶಾಂತವೀರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಸೈನಿಕ ಮೈದಾನದಲ್ಲಿ ಕಾರ್ಗಿಲ್ ವೀರ ಯೋಧರ ಸ್ಮಾರಕ ನಿರ್ಮಾಣ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವ, ಹುತಾತ್ಮ ಯೋಧರ ಕುಟುಂಬದವರಿಗೆ ಸನ್ಮಾನ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಗ್ರಾಮೀಣ ಜನರೇ ತಮ್ಮ ಮಕ್ಕಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೈನ್ಯಕ್ಕೆ ಸೇರಿಸುತ್ತಾರೆ. ಪಟ್ಟಣ, ನಗರ ಪ್ರದೇಶಗಳಲ್ಲಿ ಈ ಪ್ರಮಾಣ ಕಡಿಮೆ. ಸೈನಿಕರನ್ನು ಜಾತಿ ಆಧಾರದ ಮೇಲೆ ವಿಭಜಿಸದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಗಡಿಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಶತ್ರುಗಳಿಂದ ನಮ್ಮನ್ನು ಕಾಪಾಡುವ ಸೈನಿಕರ ಕುಟುಂಬದ ರಕ್ಷಣೆ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ವಿನಯಕುಮಾರ ಪಾಟೀಲ, ಮುಖ್ಯ ಅತಿಥಿಯಾಗಿದ್ದ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ನಾನಪ್ಪ ನಾಯಕ ಸೇನೆಯಲ್ಲಿನ ಸೇವೆ, ಸೈನಿಕರ ಪರಿಶ್ರಮ ಕುರಿತು ಮಾತನಾಡಿದರು.
ಬಳಬಟ್ಟಿ ಗ್ರಾಮದ ಹುತಾತ್ಮ ಯೋಧ ಶ್ರೀಶೈಲ ತೋಳಮಟ್ಟಿ (ಬಳಬಟ್ಟಿ) ಅವರ ತಂದೆ ರಾಯಪ್ಪ, ತಾಯಿ ಮಹಾದೇವಿ, ಪತ್ನಿ ಗೀತಾ ಮತ್ತು ಕಾರ್ಗಿಲ್ ಹುತಾತ್ಮ ಯೋಧ ದಾವಲಸಾಬ ಕಂಬಾರ ಅವರ ಸಹೋದರ ಲಾಲಸಾಬ ಕಂಬಾರ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಶ್ರೀಶೈಲ ಅವರ ಪತ್ನಿ ಗೀತಾ ಅವರನ್ನು ಸನ್ಮಾನಿಸುವಾಗ ಪತಿಯನ್ನು ನೆನೆದು ವೇದಿಕೆಯಲ್ಲೇ ಕಣ್ಣೀರು ಸುರಿಸಿದರು. ಇವರ 5 ವರ್ಷದ ಪುತ್ರ ಯುಕೆಜಿ ಓದುತ್ತಿರುವ ವಿಶ್ವನಾಥ ತಾನು ತನ್ನ ತಂದೆಯ ಕೆಲಸ ಮುಂದುವರಿಸಲು ದೊಡ್ಡವನಾದ ಮೇಲೆ ಸೇನೆಗೆ ಸೇರುವುದಾಗಿ ಹೇಳಿ ಎಲ್ಲರಿಂದಲೂ ಭೇಷ್ ಎನ್ನಿಸಿಕೊಂಡ. ಕಾರ್ಯಕ್ರಮಕ್ಕೂ ಮುನ್ನ ತಹಶೀಲ್ದಾರ್, ಸಮಿತಿ ಪದಾಧಿಕಾರಿಗಳು, ಗಣ್ಯರು ಕಾರ್ಗಿಲ್ ಹುತಾತ್ಮ ಯೋಧ ದಾವಲಸಾಬ ಕಂಬಾರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಮಹಾಂತೇಶ ಬಂಗಾರಗುಂಡ ಸ್ವಾಗತಿಸಿದರು. ಸಮಿತಿ ಅಧ್ಯಕ್ಷ ಕಿರಣರಾಜ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಗೋಪಾಲ ಹೂಗಾರ ನಿರೂಪಿಸಿದರು.