Advertisement

ಶತಮಾನದ ಸರ್ಕಾರಿ ಶಾಲೆ ಸಮಸ್ಯೆಗಳ ಪರಿಶೀಲನೆ

05:21 PM Dec 04, 2019 | Naveen |

ಮುದ್ದೇಬಿಹಾಳ: ಪಟ್ಟಣದಲ್ಲಿನ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯ ಕುರಿತು ಶತಮಾನದ ಶಾಲೆಗೆ ಸಮಸ್ಯೆಗಳೇ ಕಂಟಕ ಶಿರೋನಾಮೆಯಡಿ ಮಂಗಳವಾರ ಉದಯವಾಣಿಯಲ್ಲಿ ಪ್ರಕಟಗೊಂಡಿದ್ದ ವಿಶೇಷ ವರದಿಗೆ ಭಾರೀ ಸ್ಪಂದನೆ ದೊರಕಿದೆ.

Advertisement

ವರದಿಯ ಕ್ಲಿಪ್ಪಿಂಗ್‌ ಅನ್ನು ಓದುಗರು ಮತ್ತು ಈ ಶಾಲೆಯ ಕೆಲ ಹಳೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದನ್ನು ಗಮನಿಸಿದ ಇದೇ ಶಾಲೆಯಲ್ಲಿ 1986ರಲ್ಲಿ 7ನೇ ತರಗತಿ ಪಬ್ಲಿಕ್‌ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದ ಹಳೆ ವಿದ್ಯಾರ್ಥಿ, ಸದ್ಯ ಅಮೆರಿಕದ ಟೆಕ್ಸಾಸ್‌ನಲ್ಲಿ ಟಾಟಾ ಕನ್ಸ್‌ಲ್ಟನ್ಸಿ ಸರ್ವಿಸಸ್‌ನಲ್ಲಿ ಸೀನಿಯರ್‌ ಮ್ಯಾನೇಜರ್‌ ಆಗಿರುವ ವಿಷ್ಣುವರ್ಧನ ಮುರಾಳ ಅವರು ಶಾಲೆಯ ದುಸ್ಥಿತಿಗೆ ಮರುಕಪಟ್ಟಿದ್ದು ನೆರವಿಗೆ ಮುಂದಾಗಿದ್ದಾರೆ.

ತಾವು ಕಲಿಯುವಾಗಿನ ಶಾಲಾ ಪರಿಸರ, ಶಿಕ್ಷಕರು ಹಾಗೂ ಸಹಪಾಠಿಗಳನ್ನು ಸ್ಮರಿಸಿಕೊಂಡರು. ಶಾಲೆಯ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ, ಶಾಲೆಗೆ ಅಗತ್ಯವಿರುವ ಸಾಮಗ್ರಿಗಳ ದೇಣಿಗೆ ಕೊಡುವ ಅಥವಾ ಕೋಣೆಯೊಂದನ್ನು ಕಟ್ಟಿಸಿಕೊಡುವ ವಿಷಯ ಪ್ರಸ್ತಾಪಿಸಿದರು.

ಇಲ್ಲಿಗೆ ಬಂದಾಗ ಸ್ನೇಹಿತರನ್ನು ಸಂಪರ್ಕಿಸಿ ಏನಾದರೂ ಮಾಡುವ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಶಾಲೆಯ ಅನೇಕ ಹಳೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮೊಳಗೆ ಮಾತನಾಡಿಕೊಂಡು ಹಳೆ ವಿದ್ಯಾರ್ಥಿಗಳೆಲ್ಲ ಸೇರಿ ತಾವು ಕಲಿತ ಶಾಲೆಯ ಜೀರ್ಣೋದ್ಧಾರಕ್ಕೆ, ಶತಮಾನೋತ್ಸವ ಆಚರಣೆಗೆ ಮುಂದಾಗುವ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಬಂದರು.

ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ವರದಿ ನೋಡಿ, ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ರಾಹುಲ್‌ ಹೊನಸೂರೆ ಅವರ ಬಳಿ ತೆರಳಿ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅವರ ಜೊತೆ ಶಾಲಾ ಕಾಂಪೌಂಡ್‌, ಶೌಚಾಲಯ ಕೊಳಚೆ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಅವುಗಳ ಪರಿಹಾರಕ್ಕೆ ಸೂಚಿಸಿದರು.

Advertisement

ಶಾಲೆಯಲ್ಲಿ ಅವ್ಯವಸ್ಥೆ ತೊಲಗಬೇಕಾದರೆ ನಿಲ್ದಾಣಕ್ಕೆ ಹೊಂದಿಕೊಂಡಿರುವ ಕಾಂಪೌಂಡ್‌ ಅನ್ನು 8-10 ಅಡಿ ಎತ್ತರಕ್ಕೇರಿಸುವುದೊಂದೇ ಪರಿಹಾರ ಎಂದರಿತ ಅವರು ಈ ಬಗ್ಗೆ ಸಂಬಂಧಿಸಿದ ಮೇಲಧಿಕಾರಿಗಳ ಜೊತೆ ಚರ್ಚಿಸಿ ಆದಷ್ಟು ಬೇಗ ಕಾಂಪೌಂಡ್‌ ಎತ್ತರ ಮಾಡುವ ಮತ್ತು ಶೌಚಾಲಯ ಗಲೀಜು ಹೊರ ಸೂಸದಂತೆ ನೋಡಿಕೊಳ್ಳುವ ಬಗ್ಗೆ ಕ್ರಮ ಕೈಗೊಂಡು ತಮಗೆ ವರದಿ ಸಲ್ಲಿಸುವಂತೆ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಡಿ. ಗಾಂಜಿ ಅವರು ಶಿಕ್ಷಣ ಸಂಯೋಜಕರು, ಸಂಪನ್ಮೂಲ ವ್ಯಕ್ತಿಗಳ ಸಮೇತ ಶಾಲೆಗೆ ಭೇಟಿ ನೀಡಿ ಅಲ್ಲಿ ಮನೆ ಮಾಡಿರುವ ಅವ್ಯವಸ್ಥೆ ಕಣ್ಣಾರೆ ಕಂಡು ಪರಿಸ್ಥಿತಿ ಗಂಭೀರತೆ ಅರಿತುಕೊಂಡರು. ಕೆಬಿಎಂಪಿಎಸ್‌ ಆವರಣದಲ್ಲಿನ ಕೆಬಿಎಂಪಿಎಸ್‌, ಸರ್ಕಾರಿ ಪ್ರೌಢಶಾಲೆ, ಆದರ್ಶ ವಿದ್ಯಾಲಯ ಮುಖ್ಯಾಧ್ಯಾಪಕರ ಜೊತೆ ಚರ್ಚಿಸಿ ಸ್ಥಳದಲ್ಲೇ 60,000 ರೂ. ಅನುದಾನ ಬಳಸಿ ಶಾಲೆಗೆ ಎತ್ತರದ ಕಾಂಪೌಂಡ್‌ ಹಾಕಿಸಲು ಸೂಚಿಸಿದ್ದು ಮಾತ್ರವಲ್ಲದೆ ಕಾಂಪೌಂಡ್‌ಗೆ ಬೇಕಾಗುವ ಸಾಮಗ್ರಿಗಳನ್ನು ಸ್ಥಳದಿಂದಲೇ ಆದೇಶ ಮಾಡಿ ಕಾರ್ಯರೂಪಕ್ಕೆ ಇಳಿಸಿಯೇ ಬಿಟ್ಟರು.

ಇದಲ್ಲದೆ ಕಾಂಪೌಂಡ್‌ ಒಳ ಭಾಗವನ್ನು ಜೆಸಿಬಿಯಿಂದ ಸ್ವತ್ಛಗೊಳಿಸಿ ಅಲ್ಲಿ ಗಿಡ ನೆಟ್ಟು ಪರಿಸರ ಕಾಳಜಿ ಮಕ್ಕಳಿಗೆ ಕಲಿಸಿಕೊಡುವ ಮಹತ್ವದ ತೀರ್ಮಾನ ಕೈಗೊಂಡು ಅದನ್ನು ಜಾರಿಗೊಳಿಸುವಂತೆ ಜೊತೆಯಲ್ಲಿದ್ದ ಅಧಿಕಾರಿಗಳು, ಮುಖ್ಯಾಧ್ಯಾಪಕರಿಗೆ ಮೌಖೀಕ ಆದೇಶ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next