ಮುದ್ದೇಬಿಹಾಳ: ಮನುಷ್ಯ ಜಗತ್ತಿನಲ್ಲಿ ಎಲ್ಲವನ್ನೂ ಸಂಶೋಧನೆ ಮಾಡಿ ಕೃತಕವಾಗಿ ಸೃಷ್ಟಿಸಬಹುದು. ಆದರೆ ನೀರು, ಗಾಳಿ, ಮಣ್ಣನ್ನು ಮಾತ್ರ ಸೃಷ್ಟಿಸುವುದು ಅಸಾಧ್ಯ ಎನ್ನುವುದನ್ನು ಅರಿತು ಪರಿಸರ ಕಾಪಾಡುವ, ಸ್ವಚ್ಛವಾಗಿಟ್ಟುಕೊಳ್ಳುವ ಹೊಣೆಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಮುದ್ದೇಬಿಹಾಳ ತಾಲೂಕಿನ ಕೋಳೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜಯಪುರ ಜಿಪಂ, ಮುದ್ದೇಬಿಹಾಳ ತಾಪಂ, ಕೋಳೂರು ಗ್ರಾಪಂ ಸಹಯೋಗದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿ ಮಂಗಳವಾರ ಏರ್ಪಡಿಸಿದ್ದ ಸ್ವಚ್ಛ ಮೇವ ಜಯತೆ ಆಂದೋಲನ ಹಾಗೂ ಜಲಾಮೃತ ಕುರಿತು ತಾಲೂಕು ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಭೂಮಿಯನ್ನು ಭಗವಂತ ಅತ್ಯಂತ ಸುಂದರವಾಗಿ ಸೃಷ್ಟಿಸಿದ್ದಾನೆ. ಮನುಷ್ಯ, ಪ್ರಾಣಿಗಳು, ಪರಿಸರ ಈ ಸೌಂದರ್ಯ ಇಮ್ಮಡಿಗೊಳಿಸಿವೆ. ಆದರೆ ಅತಿಯಾಸೆಗೆ ಬಿದ್ದು ಪರಿಸರ ನಾಶ ಮಾಡುತ್ತಿರುವ ಮನುಷ್ಯ ತನ್ನ ಅತಿಯಾಸೆಗೆ ಕಡಿವಾಣ ಹಾಕಬೇಕು. ಮುಂದಿನ ಜನಾಂಗಕ್ಕೆ ನಾವು ಉತ್ತಮವಾದ ಪರಿಸರವನ್ನು ಕಾಣಿಕೆಯಾಗಿ ನೀಡುವತ್ತ ಗಮನ ಹರಿಸಬೇಕು. ನಮ್ಮ ಸುತ್ತಲಿನ, ನಮ್ಮ ಊರಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ನಮ್ಮದೇ ಆಗಿದೆ ಎನ್ನುವುದನ್ನು ಅರಿಯಬೇಕು. ಪ್ರತಿಯೊಂದು ಶಾಲೆಯಲ್ಲಿ ವಿದ್ಯಾರ್ಥಿಗೊಂದರಂತೆ ಸಸಿ ನೆಟ್ಟು ಪೋಷಣೆ ಜವಾಬ್ದಾರಿ ಅವರಿಗೆ ವಹಿಸಿಕೊಡಬೇಕು ಎಂದು ಹೇಳಿದರು.
ಬಿಇಒ ಎಸ್.ಡಿ. ಗಾಂಜಿ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಎಸ್.ಎಸ್. ಮೇಟಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸುಮಿತ್ರಾ ರಾಠೊಡ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ತಾಪಂ ಸದಸ್ಯ ಪ್ರೇಮಸಿಂಗ್ ಚವ್ಹಾಣ, ಬಿಜೆಪಿ ಧುರೀಣ ಮಲಕೇಂದ್ರಗೌಡ ಪಾಟೀಲ, ನಿವೃತ್ತ ಶಿಕ್ಷಕ ಸಿದ್ದನಗೌಡ ಬಿರಾದಾರ, ಪ್ರಮುಖರಾದ ಅಲಬಯ್ಯ ಹಿರೇಮಠ, ಈರಪ್ಪ ಹಳ್ಳೂರ, ರಾಯನಗೌಡ ಬಿರಾದಾರ, ರಾಮನಗೌಡ ಪಾಟೀಲ, ಲಕ್ಷ್ಮಣ ಢವಳಗಿ, ಮಲ್ಲಿಕಾರ್ಜುನ ತಂಗಡಗಿ, ಶರಣಪ್ಪ ಹಳ್ಳೂರ, ಬಸಲಿಂಗಪ್ಪ ಬಿದರಕುಂದಿ ವೇದಿಕೆಯಲ್ಲಿದ್ದರು.
ಗಿರಿಮಲ್ಲಪ್ಪ ಬಿದರಕುಂದಿ, ಚನ್ನಪ್ಪ ಢವಳಗಿ, ನಿಂಗನಗೌಡ ಬಿರಾದಾರ, ರೇವಣೆಪ್ಪ ಹರನಾಳ, ಲಕ್ಷ್ಮಣ ಬಿಜ್ಜೂರ ಸೇರಿದಂತೆ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಇದ್ದರು.
ಶಾಲಾ ಆವರಣದಲ್ಲಿ ಅರಣ್ಯಾಧಿಕಾರಿ ಸಂತೋಷಕುಮಾರ ಅಜೂರ ನೇತೃತ್ವದಲ್ಲಿ ಶಾಸಕರು, ಗಣ್ಯರು ಸಸಿ ನೆಟ್ಟರು. ಸ್ವಚ್ಛ ಮೇವ ಜಯತೆ ಸ್ವಚ್ಛತಾ ರಥಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಲಾಯಿತು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ತಾಪಂ ಇಒ ಪ್ರಕಾಶ ದೇಸಾಯಿ ಸ್ವಾಗತಿಸಿದರು. ತಾಪಂ ಎಡಿ ಪಿ.ಎಸ್.ನಾಯ್ಕೋಡಿ ನಿರೂಪಿಸಿದರು. ಪಿಡಿಒ ನಿರ್ಮಲಾ ತೋಟದ ವಂದಿಸಿದರು.