Advertisement

ಪೇಜಾವರ ಶ್ರೀಗೆ ಭಾವಪೂರ್ಣ ನಮನ

11:18 AM Dec 30, 2019 | Naveen |

ಮುದ್ದೇಬಿಹಾಳ: ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದಂಗಳವರು ಎಲ್ಲ ಕಾಲಕ್ಕೂ, ಎಲ್ಲ ಕಡೆ, ಎಲ್ಲ ಧರ್ಮಗಳಿಗೆ ಸಲ್ಲುವ ಮೇರು ವ್ಯಕ್ತಿತ್ವದ ಸಂತರು, ದಾರ್ಶನಿಕರು ಆಗಿದ್ದರು ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದ್ದಾರೆ.

Advertisement

ಇಲ್ಲಿನ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ರವಿವಾರ ಸಂಜೆ ಬಿಜೆಪಿ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಶ್ರೀಪಾದಂಗಳಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀಪಾದಂಗಳು ಹಿಂದೂ, ಮುಸ್ಲಿಂ ಕೋಮು ಸೌಹಾರ್ದದ ಸೇತುವೆಯಾಗಿದ್ದರು. ತಮ್ಮ ಮಠದಲ್ಲಿ ಮುಸ್ಲಿಮರಿಗೆ ಇಫ್ತಾರ್‌ ಕೂಟ ಏರ್ಪಡಿಸುವ ಮೂಲಕ ಈ ನೆಲದಲ್ಲಿ ವಾಸಿಸುವ ಮುಸ್ಲಿಮರೂ ಸಹಿತ ಭಾರತೀಯರು, ಸಲ್ಲ ಧರ್ಮಗಳೂ ಸಮಾನ ಎನ್ನುವ ಸಂದೇಶವನ್ನು ಸಾರಿದ್ದರು.

ಹಿಂದೂ ಧರ್ಮದ ಆಚರಣೆಯನ್ನು ಜಾರಿಗೊಳಿಸಿ ಈ ಧರ್ಮದ ಮಹತ್ವ ಸಾರಿದ್ದರು. ಈ ಭೂಮಿ ಮೇಲೆ ಸಾಕಷ್ಟು ರಾಷ್ಟ್ರಗಳಿದ್ದು ಬಹಳಷ್ಟು ಧರ್ಮಗಳು ಅಲ್ಲಲ್ಲಿ ಜನ್ಮ ತಾಳಿವೆ. ಆದರೆ ಭಾರತದಲ್ಲಿ ಮಾತ್ರ ಅನೇಕ ಧರ್ಮಗಳು ಬೆಳೆದಿವೆ. ಭಾರತ ಜಗತ್ತಿನ ಎಲ್ಲ ಧರ್ಮಗಳಿಗೆ ಆಶ್ರಯ ಕೊಟ್ಟಿರುವ ಪುಣ್ಯಭೂಮಿಯಾಗಿದ್ದು ಇದಕ್ಕೆ ಉದಾಹರಣೆ ಎನ್ನಿಸಿಕೊಂಡಿದೆ ಎಂದರು.

ಸಾಮಾನ್ಯ ವ್ಯಕ್ತಿಯೊಬ್ಬರು ಧಾರ್ಮಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡುವ ಮೂಲಕ ಈ ದೇಶದ ಹಿರಿಮೆ ಎತ್ತಿ ಹಿಡಿಯುವ ಕೆಲಸ ಮಾಡುವುದು ಸರಳ ಕೆಲಸವಲ್ಲ. ಪೇಜಾವರ ಶ್ರೀಗಳು ಅನೇಕ ಕಷ್ಟಕಾರ್ಪಣ್ಯಗಳ ನಡುವೆಯೂ ಹಿಂದೂ ಧರ್ಮದ ಮೌಲ್ಯ ಎತ್ತಿ ಹಿಡಿಯುವುದರ ಜೊತೆಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೇಬೇಕು ಎನ್ನುವ ನಿಲುವು ತಳೆದಿದ್ದರು.

Advertisement

ಸರ್ಕಾರಗಳು ತಪ್ಪು ಮಾಡಿದಾಗ ಸರಿದಾರಿಯಲ್ಲಿ ನಡೆಯಲು ತಿಳಿಸುತ್ತಿದ್ದರು. ಜನಸಾಮಾನ್ಯರಿಗೆ ತೀರ ಹತ್ತಿರದವರಾಗಿ ನಡೆದುಕೊಂಡಿದ್ದರು. ಇವರ ಅಗಲಿಕೆ ವಿಶ್ವದ ಸಂತ ಕುಲಕ್ಕೆ ತುಂಬಲಾಗದ ನಷ್ಟ ಎನ್ನಿಸಿಕೊಂಡಿದೆ ಎಂದರು.

ಬಿಜೆಪಿ ತಾಲೂಕಾಧ್ಯಕ್ಷ ಡಾ| ಪರಶುರಾಮ ಪವಾರ, ಕಾಶೀಬಾಯಿ ರಾಂಪುರ, ಶಿವಶಂಕರಗೌಡ ಹಿರೇಗೌಡರ, ಸುರೇಶ ಕುಲಕರ್ಣಿ, ಜಗನ್ನಾಥ ಗೌಳಿ ಮಾತನಾಡಿದರು. ಪ್ರಮುಖರಾದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಸ್‌.ಆರ್‌. ಕುಲಕರ್ಣಿ, ಪುರಸಭೆ ಸದಸ್ಯೆ ಸಹನಾ ಬಡಿಗೇರ, ಬಿಜೆಪಿ ಎಸ್ಸಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೀಲಮ್ಮ ಚಲವಾದಿ, ಗೌರಮ್ಮ ಹುನಗುಂದ, ಬಸಯ್ಯ ನಂದಿಕೇಶ್ವರಮಠ, ಮಂಜು ರತ್ನಾಕರ, ಅಶೋಕ ರಾಠೊಡ, ಹಣಮಂತ್ರಾಯ ದೇವರಳ್ಳಿ, ಎಲ್‌. ಎಸ್‌.ದೇಶಪಾಂಡೆ, ವಿಲಾಸ ದೇಶಪಾಂಡೆ, ಆನಂದ ತುಪ್ಪದ ಸೇರಿದಂತೆ 60-70 ಜನರು ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಶ್ರೀಪಾದಂಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಜ್ಯೋತಿ ಬೆಳಗಿಸಲಾಯಿತು. ಅವರ ಸ್ಮರಣಾರ್ಥ ಮೌನಾಚರಣೆ ಮಾಡಲಾಯಿತು. ಪುನೀತ್‌ ಹಿಪ್ಪರಗಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next