Advertisement

ಮಿನಿ ವಿಧಾನಸೌಧದಲ್ಲಿ ಅವ್ಯವಸ್ಥೆ ಸರಿಪಡಿಸಿ

10:25 AM May 05, 2019 | Team Udayavani |

ಮುದ್ದೇಬಿಹಾಳ: ಅಯ್ಯೋ ಇದು ಮಿನಿ ವಿಧಾನಸೌಧವೋ ಇಲ್ಲಾ ಬಸ್‌ ನಿಲ್ದಾಣವೋ ಒಂದೂ ತಿಳಿಯುತ್ತಿಲ್ಲ. ಇವರು ಜನರಿಗೆ ಸ್ವಚ್ಛ ಭಾರತ ಯೋಜನೆಯಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಮಿನಿ ವಿಧಾನಸೌಧ ಯಾವಾಗ ಸ್ವಚ್ಛವಾಗುತ್ತೂ. ದೇವರೇ ಬಲ್ಲ ಎನ್ನುವಂತಾಗಿದೆ.

Advertisement

ಇದು ಮುದ್ದೇಬಿಹಾಳ ಪಟ್ಟಣದ ಹುಡ್ಕೊ ಕಾಲೋನಿಯಲ್ಲಿರುವ ಮಿನಿ ವಿಧಾನಸೌಧದ ದುಸ್ಥಿತಿ. ಸ್ವಚ್ಛ ಭಾರತ ಯೋಜನೆ ಬಗ್ಗೆ ತಾಲೂಕಾಡಳಿತ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಪ್ರತಿಯೊಂದು ಮನೆಗೆ ಒಂದು ಶೌಚಾಲಯ ನಿರ್ಮಿಸಿಕೊಳ್ಳಲು ಇದೇ ಯೋಜನೆಯಡಿ ಸಹಾಯಧನವನ್ನೂ ನೀಡುತ್ತದೆ. ಆದರೆ ಮಿನಿ ವಿಧಾನಸೌದ ಕಟ್ಟಡದಲ್ಲಿ ಮಾತ್ರ ಶೌಚಾಲಯವೇ ಇಲ್ಲದಂತಾಗಿದೆ. ಇದು ಸ್ಥಳೀಯ ಅಧಿಕಾರಿಗಳ ಬೇಜವಾಬ್ದಾರಿತನ ಎತ್ತಿ ತೋರಿಸುವಂತಿದೆ.

ಇಲ್ಲಿನ ಮಿನಿ ವಿಧಾನಸೌದದಲ್ಲಿ ಉಪ ನೋಂದಣಾಧಿಕಾರಿ, ನೆಮ್ಮದಿ, ಭೂಮಿ, ತಹಶೀಲ್ದಾರ್‌, ಸಿಟಿ ಸರ್ವೆ, ಉಪ ಖಜಾನೆ , ಚುನಾವಣೆ ವಿಭಾಗದ, ಆಹಾರ ಇಲಾಖೆ ಸೇರಿದಂತೆ ಇನ್ನಿತರ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಕಚೇರಿಗಳಿಗೆ ನಿತ್ಯವೂ ಸಾವಿರಾರು ಜನರು ತಮ್ಮ ಕೆಲಸದ ನಿಮಿತ್ತ ಆಗಮಿಸಿ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳುವಂತಾರೆ. ಆದರೆ ಮಲಮೂತ್ರ ವಿಸರ್ಜನೆಗೆ ಶೌಚಾಲಯವಿಲ್ಲದೆ ಸಾರ್ವಜನಿಕರು ಪರಾದಡುವಂತಾಗುತ್ತದೆ.

ಅಧಿಕಾರಿಗಳ ನಿರ್ಲಕ್ಷ್ಯ: ಮಿನಿ ವಿಧಾನಸೌಧದಲ್ಲಿ ಉದ್ಘಾಟನಾ ಸಮಯದಲ್ಲಿ ಶೌಚಾಲಯವಿತ್ತು. ಆದರೆ ನಂತರ ದಿನಗಳಲ್ಲಿ ಶೌಚಾಲಯ ನಿರ್ವಹಣೆಯಲ್ಲಿ ತಾಲೂಕಾಡಳಿತ ಅಧಿಕಾರಿಗಳು ನಿರ್ಲಕ್ಷಿಸಿದ ಹಿನ್ನೆಲೆ ಕೇವಲ ಒಂದೇ ವರ್ಷದಲ್ಲಿಯೇ ನಿರ್ಮಾಣ ಮಾಡಿದ ಶೌಚಾಲಯದ ಬಾಗಿಲಿಗೆ ಬೀಗ ಜಡಿಯಲಾಗಿದೆ.

ಕಸದ ಬುಟ್ಟಿ ಇಡಿ: ತಹಶೀಲ್ದಾರ್‌ ಕಚೇರಿಗೆ ಸಾವಿರಾರು ಜನರು ಆಗಮಿಸುತ್ತಾರೆ. ಈ ಸಮಯದಲ್ಲಿ ಅನುಪಯುಕ್ತ ಕಾಗದ ಪತ್ರಗಳು ಹಾಗೂ ಪ್ಲಾಸ್ಟಿಕ್‌ ಹಾಳೆಗಳನ್ನು ಎಲ್ಲೆಂದರಲ್ಲಿ ಎಸೆಯತ್ತಾರೆ. ಇದರಿಂದ ಮಿನಿ ವಿಧಾನಸೌಧ ಆವರಣ ಕಸದಿಂದ ಕೂಡಿದ್ದು ಮಿನಿ ವಿಧಾನಸೌಧ ಕಚೇರಿಯಲ್ಲಿ ಒಂದು ಕಸದ ಬುಟ್ಟಿ ಇಡಲು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

Advertisement

ಮಿನಿ ವಿಧಾನಸೌಧದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿಯೇ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಸಾಧ್ಯವಾದಗ ಕಾರಣ ಶೌಚಾಲಯವನ್ನು ಬಂದ್‌ ಮಾಡಿಸಲಾಗಿತ್ತು. ಈಗಾಗಲೇ ಅವುಗಳನ್ನು ಪುರಸಭೆ ಕಾರ್ಮಿಕರಿಂದ ಸ್ವಚ್ಛಗೊಳಿಸಲಾಗಿದ್ದು ಶೀಘ್ರದಲ್ಲಿಯೇ ಶೌಚಾಲಯ ಬಾಗಿಲು ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ಆದರೆ ಶೌಚಾಲಯಗಳನ್ನು ಉಪಯೋಗಿಸುವಾದ ಸಾರ್ವಜನಿಕರೂ ಸ್ವಚ್ಛತೆಗೆ ಮಹತ್ವ ನೀಡಬೇಕಿದೆ.
ವಿನಯಕುಮಾರ ಪಾಟೀಲ,
ತಹಶೀಲ್ದಾರ್‌, ಮುದ್ದೇಬಿಹಾಳ

ತಹಶೀಲ್ದಾರ್‌ ಕಚೇರಿಯೊಳಗ್‌ ಶೌಚಾಲಯ ಚಾಲು ಮಾಡ್ರಿ ಅಂತಾ ಎಷ್ಟೇ ಹೇಳಿದ್ರೂ ಯಾರೂ ಕಿವಿಗೆ ಹಾಕಿಕೊಳ್ಳಾಕತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಎಷ್ಟು ತೊಂದರೆಯಾಗಿದೆ ಅಂತಾ ಅವರಿಗೆ ತಿಳಿದಿಲ್ಲಾ. ಹಿಂದಿದ್ದ ತಹಶೀಲ್ದಾರ್‌ ಬಾಗವಾನ ಅವರಿಗೂ ಸಾಕಷ್ಟು ಬಾರಿ ಹೇಳಿದ್ವಿ. ಅವರೂ ನಮ್ಮ ಮಾತಿಗೆ ಕಿಮ್ಮತ್ತು ಕೊಡಲಿಲ್ಲ. ಈಗ ಹೊಸ ತಹಶೀಲ್ದಾರ್‌ ಸಾಹೇಬ್ರು ಬಂದಾರಾ. ಇವರಾದ್ರೂ ಶೌಚಾಲಯವನ್ನು ಚಾಲು ಮಾಡಿದ್ರ ಚಲೊ ಆಗತೈತ್ರಿ.
•ಹನುಮಂತ ದಾಸರ
ಅಧ್ಯಕ್ಷರು, ರಿಪಬ್ಲಿಕ್‌ ಸೇನೆ, ಮುದ್ದೇಬಿಹಾಳ

ಶಿವಕುಮಾರ ಶಾರದಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next