ಮುದ್ದೇಬಿಹಾಳ: ನಮ್ಮ ಸುತ್ತಲಿನ, ನಮ್ಮ ಕಣ್ಣಿಗೆ ಕಾಣುವ ಕಸವನ್ನು ಸ್ವಚ್ಛಗೊಳಿಸಲು ವಿದ್ಯಾರ್ಥಿಗಳೆಲ್ಲ ಮನಸ್ಸು ಮಾಡಬೇಕು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಲೇಜಿನ ಹೆಚ್ಚುವರಿ ಕೊಠಡಿಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಹಾಬಲಿಪುರಂನಲ್ಲಿ ನಡೆದ ಶೃಂಗ ಸಭೆ ವೇಳೆ ಅಲ್ಲಿನ ಸಮುದ್ರದ ದಂಡೆಯಲ್ಲಿದ್ದ ಪ್ಲಾಸ್ಟಿಕ್ ಅನ್ನು ಹೆಕ್ಕಿ ತೆಗೆಯುವ ಮೂಲಕ ಪ್ಲಾಸ್ಟಿಕ್ ವಿರೋ ಧಿ ದಿನ ಮತ್ತು ಸ್ವಚ್ಛತೆಯ ಮಹತ್ವದ ಸಂದೇಶವನ್ನು ದೇಶದ ಜನತೆಗೆ ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿ ಪ್ರಧಾನಿ ಮೋದಿ ಅವರ ನಡವಳಿಕೆಯನ್ನು ಆದರ್ಶವಾಗಿಟ್ಟುಕೊಂಡು ಪಾಲಿಸಬೇಕು ಎಂದರು.
ಶೀಘ್ರದಲ್ಲೇ ಪ್ರತಿಯೊಂದು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಸಮಸ್ಯೆಗಳ ಕುರಿತು ಚರ್ಚಿಸುತ್ತೇನೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಶಾಲಾ ಕೊಠಡಿಗಳ ದುರಸ್ತಿ, ನಿರ್ಮಾಣದ ಅನುಕೂಲ ದೊರೆತಿದ್ದು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರಕ್ಕೆ ಎನ್ನುವ ಹೆಮ್ಮೆ ಇದೆ. ಈ ಕಾಲೇಜಿಗೆ 88.52 ಲಕ್ಷ ರೂ. ವೆಚ್ಚದಲ್ಲಿ 3 ಕೊಠಡಿ ಕಟ್ಟಲಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ 6 ಕೊಠಡಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಕಾಲೇಜಿಗೆ ಅಗತ್ಯವಾಗಿರುವ ಕುಡಿವ ನೀರು ಮತ್ತು ಶೌಚಾಲಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ತಾಲೂಕಾಧ್ಯಕ್ಷ ಎಂ.ಡಿ. ಕುಂಬಾರ, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಅಶೋಕ ವನಹಳ್ಳಿ, ಬಸವರಾಜ ಮುರಾಳ, ಬಸಪ್ಪ ತಟ್ಟಿ, ಸದಾಶಿವ ಮಾಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಧುರೀಣರಾದ ಪ್ರಭು ಕಡಿ, ರಾಜೇಂದ್ರಗೌಡ ರಾಯಗೊಂಡ, ಹನುಮಂತ್ರಾಯ ದೇವರಳ್ಳಿ, ವಿಕ್ರಂ ಓಸ್ವಾಲ್, ರಾಮು ಪೂಜಾರಿ, ಅಪ್ಪುಗೌಡ ಮೈಲೇಶ್ವರ, ಶ್ರೀಶೈಲ ರಾಯಗೊಂಡ, ಗುತ್ತಿಗೆದಾರ ಜಿ.ಎಸ್. ದೋರನಳ್ಳಿ, ಪುರಸಭೆ ಮಾಜಿ ಸದಸ್ಯ ಶರಣು ಬೂದಿಹಾಳಮಠ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ಎಸ್.ಜಿ. ಲೊಟಗೇರಿ ನಿರೂಪಿಸಿದರು. ಇದಕ್ಕೂ ಮುನ್ನ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕರು ವಿದ್ಯಾರ್ಥಿಗಳಿಂದಲೇ ನೆಲಕ್ಕೆ ಗುದ್ದಲಿ ಹಾಕಿಸಿ
ಭೂಮಿಪೂಜೆಗೆ ಅವಕಾಶ ಕಲ್ಪಿಸಿಕೊಟ್ಟರು.