Advertisement

ವಾರ್ಡ್‌ಗಳಲ್ಲಿ ಸಂಚ‌ರಿಸಿ ಅಹವಾಲು ಆಲಿಕೆ

03:56 PM Sep 07, 2019 | Naveen |

ಮುದ್ದೇಬಿಹಾಳ: ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಪುರಸಭೆ ಅಧಿಕಾರಿಗಳ ಸಮೇತ ಭೇಟಿ ನೀಡಿ ಅಲ್ಲಿರುವ ಸೌಕರ್ಯ ಮತ್ತು ಆಯಾ ವಾರ್ಡ್‌ಗಳಿಗೆ ಅಗತ್ಯ ಅಭಿವೃದ್ಧಿ ಕಾರ್ಯಕ್ಕೆ ಏನು ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಪರಿಶೀಲಿಸುವ ವಾರ್ಡ್‌ ವಾಕ್‌-ವಾರ್ಡ್‌ ವಾಚ್ ವಿನೂತನ ಕಾರ್ಯಕ್ಕೆ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಚಾಲನೆ ನೀಡಿದ್ದಾರೆ.

Advertisement

ಗುರುವಾರ, ಶುಕ್ರವಾರ ಎರಡೂ ದಿನ ಬೆಳಗ್ಗೆ 6:30ರಿಂದ 9ರವರೆಗೆ ವಾರ್ಡ್‌ಗಳಲ್ಲಿ ಸಂಚರಿಸಿ ಅಲ್ಲಿ ಆಗಿರುವ ಅಭಿವೃದ್ಧಿ ಕೆಲಸ ಮತ್ತು ಪುರಸಭೆ ಒದಗಿಸಿರುವ ಮೂಲ ಸೌಕರ್ಯಗಳನ್ನು ಖುದ್ದು ಪರಿಶೀಲಿಸಿ ಅಗತ್ಯ ಇರುವ ಸ್ಥಳಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಪುರಸಭೆ ಮುಖ್ಯಾಧಿಕಾರಿ ಎಸ್‌.ಎಫ್‌. ಈಳಗೇರ ಅವರಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಶಾಸಕರು ಗುರುವಾರ ವಿದ್ಯಾನಗರ ಬಡಾವಣೆಗೆ ಭೇಟಿ ನೀಡಿ ರಸ್ತೆ, ಚರಂಡಿ, ವಿದ್ಯುತ್‌, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಪರಿಶೀಲಿಸಿದ್ದರು. ಅಲ್ಲಿನ ನಿವಾಸಿಗಳಿಂದ ಅಹವಾಲು ಆಲಿಸಿ ಬಡಾವಣೆ ಅಭಿವೃದ್ಧಿಗೆ ಏನು ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ದಾಖಲಿಸಿಕೊಂಡಿದ್ದರು.

ಶುಕ್ರವಾರ ಮಹಾಂತೇಶನಗರ, ವಾಲ್ಮೀಕಿನಗರ, ಡಾ| ಪದಕಿ ಬಡಾವಣೆ ಭೇಟಿ ನೀಡಿ ರಸ್ತೆ, ಚರಂಡಿ ವ್ಯವಸ್ಥೆ ಹೇಗಿದೆ? ಎಷ್ಟೆಲ್ಲ ರಸ್ತೆಗಳು, ಸರ್ಕಾರಿ ಆಸ್ತಿ ಅತಿಕ್ರಮಣ ಆಗಿವೆ. ಯಾರ್ಯಾರು ರಸ್ತೆ, ಚರಂಡಿ ಅತಿಕ್ರಮಿಸಿ ಕಟ್ಟಡ ಕಟ್ಟಿದ್ದಾರೆ. ಎಲ್ಲೆಲ್ಲಿ ಸರ್ಕಾರ ಹಾಗೂ ಪುರಸಭೆಯ ಆಸ್ತಿ ಇದೆ ಎನ್ನುವುದನ್ನು ಪರಿಶೀಲಿಸಿದರು. ಯಾವ್ಯಾವ ಸ್ಥಳಗಳಲ್ಲಿ ಏನೇನು ಅಭಿವೃದ್ಧಿ ಮಾಡಿದರೆ ಆಯಾ ಬಡಾವಣೆಗಳು ಸುಧಾರಣೆಗೊಳ್ಳುತ್ತವೆ ಎನ್ನುವುದನ್ನು ಅವಲೋಕಿಸಿದರು.

ಶಾಸಕರ ವಾರ್ಡ್‌ ವಾಕ್‌ ಸಂದರ್ಭ ಕೇಳಿಬರುವ ಅಹವಾಲು, ಬೇಡಿಕೆ, ಅಭಿವೃದ್ಧಿ ವಿಚಾರ ಮುಂತಾದವುಗಳನ್ನು ಶಾಸಕರ ಆಪ್ತ ಸಹಾಯಕ ಬಸನಗೌಡ ಪಾಟೀಲ ನಡಹಳ್ಳಿ, ಪುರಸಭೆ ಕಚೇರಿ ಸಿಬ್ಬಂದಿ ಪತ್ರಿಮಠ ದಾಖಲಿಸಿಕೊಳ್ಳುತ್ತಿದ್ದರು. ಅಗತ್ಯ ಇರುವೆಡೆ ತ್ವರಿತ ಕ್ರಮಕ್ಕೆ ಶಾಸಕರು ತಮ್ಮ ಜೊತೆ ಇದ್ದ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡುತ್ತಿದ್ದರು.

Advertisement

ಯಾವ್ಯಾವ ಬಡಾವಣೆಗಳಲ್ಲಿ ಸರ್ಕಾರಿ ಜಾಗ, ಪುರಸಭೆ ಆಸ್ತಿ, ಗಾರ್ಡನ್‌ ಇವೆಯೋ ಅವೆಲ್ಲವನ್ನೂ ಪುರಸಭೆ ಸುಪರ್ದಿಗೆ ತೆಗೆದುಕೊಳ್ಳಬೇಕು. ಗಾರ್ಡನ್‌ ಅತಿಕ್ರಮಿಸಿ ಕಟ್ಟಡ ಕಟ್ಟಿದ್ದರೆ ಅಂಥವರಿಗೆ ತೆರುವುಗೊಳಿಸಲು ನೋಟಿಸ್‌ ನೀಡಿ ಕಾಲಾವಕಾಶ ಕೊಡಬೇಕು. ಪುರಸಭೆ ಕಚೇರಿ ಎದುರು ಇರುವ ಖಾಲಿ ನಿವೇಶನ ಸೇರಿ ಸರ್ಕಾರದ ಆಸ್ತಿಯನ್ನು ಅಳತೆ ಮಾಡಿ ಗಡಿ ಗುರುತಿಸಿ ನಕ್ಷೆ ತಯಾರಿಸಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಎಲ್ಲ ಪರಿಶೀಲಿಸಿದ ಮೇಲೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಪಟ್ಟಣ ಸೌಂದರ್ಯಿಕರಣಕ್ಕೆ ನಾಗರಿಕರು ಕೈಜೋಡಿಸಬೇಕು. ಅಗತ್ಯ ಸಲಹೆ ಸೂಚನೆ ನೀಡಿ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು ಶೀಘ್ರ ಕಾರ್ಯಾರಂಭಗೊಳಿಸಲಾಗುತ್ತದೆ. ನಿತ್ಯ ಬೆಳಗ್ಗೆ 6ರಿಂದ 9ರವರೆಗೆ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡುವ ಪರಿಪಾಠ ಜಾರಿಗೊಳಿಸಲಾಗಿದೆ. ಪಟ್ಟಣದ ಎಲ್ಲ 23 ವಾರ್ಡಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಜನರ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಹಂತಹಂತವಾಗಿ ಅವುಗಳ ಪರಿಹಾರಕ್ಕೆ ಮುಂದಾಗುತ್ತೇನೆ ಎಂದು ತಿಳಿಸಿದರು.

ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಬಸವರಾಜ ಮುರಾಳ, ಅಶೋಕ ವನಹಳ್ಳಿ, ಬಿಜೆಪಿ ಧುರೀಣರಾದ ರಾಜೇಂದ್ರಗೌಡ ರಾಯಗೊಂಡ, ಮಂಜುನಾಥ ರತ್ನಾಕರ, ಶರಣು ಬೂದಿಹಾಳಮಠ ಸುನೀಲ ಇಲ್ಲೂರ, ಬಲಭೀಮ ನಾಯಕಮಕ್ಕಳ, ಸಂಗಮೇಶ ವಾಲೀಕಾರ, ಆಯಾ ಬಡಾವಣೆ ಪ್ರಮುಖರು ಶಾಸಕರೊಂದಿಗೆ ಸಂಚರಿಸಿ ಅಗತ್ಯ ಮಾರ್ಗದರ್ಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next