Advertisement

Mudbidri: ಸ್ಥಳಾಂತರಿಸಿದ ಸಾಗುವಾನಿ ಮರಗಳ ಅವಸಾನ

01:13 PM Dec 08, 2024 | Team Udayavani |

ಮೂಡುಬಿದಿರೆ: ಸುಮಾರು 9 ವರ್ಷ ಬೆಳೆದು ನಿಂತಿದ್ದ ಗಿಡಗಳನ್ನು ಕಿತ್ತು ಬೇರೆಡೆ ನೆಟ್ಟು ಬೆಳೆಸುತ್ತೇವೆ ಎಂದು ಹೊರಟವರ ಹಠಮಾರಿ ಧೋರಣೆಗೆ ದೊಡ್ಡ ಸೋಲಾಗಿದೆ. ಹಾಗೆ ಸ್ಥಳಾಂತರಿಸಿದ 15 ಗಿಡಗಳು ಈಗ ಒಣಗಿ ಕಟ್ಟಿಗೆಯಾಗಿವೆ.

Advertisement

ಇಂಥಹದೊಂದು ಘಟನೆ ನಡೆದಿರುವುದು ಮೂಡುಬಿದಿರೆಯಲ್ಲಿ. ಇಲ್ಲಿನ ಜ್ಯೋತಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು 9 ವರ್ಷಗಳ ಹಿಂದೆ ಇಲ್ಲಿ 65 ಸಾಗುವಾನಿ ಗಿಡಗಳನ್ನು ನೆಟ್ಟರು. ಫ‌ರ್ಲಾಂಗ್‌ ದೂರದಲ್ಲಿರುವ ಅವರ ಮನೆಯಿಂದ ಎರಡು ವರ್ಷ ಆ ಶಿಕ್ಷಕರು ತಮ್ಮ ಮಗನ ಜತೆಗೂಡಿ ನೀರು ತಂದು ಆ ಗಿಡಗಳನ್ನು ಸಾಕಿದರು. ಎರಡು ವರ್ಷ ಸರಿಯುವಾಗ 65ರಲ್ಲಿ 55 ಗಿಡಗಳು ಬದುಕಿ ಉಳಿದಿದ್ದವು. ಅವುಗಳು ಚೆನ್ನಾಗಿ ಬೆಳೆಯುತ್ತಿದ್ದಂತೆಯೇ ಶಿಕ್ಷಕರಿಗೆ ಬೇರೆ ಕಡೆಗೆ ವರ್ಗಾವಣೆ ಆಯಿತು. ಆದರೂ ಅವರು ಗಿಡಗಳ ಬೆಳವಣಿಗೆ ಬಗ್ಗೆ ನಿಗಾ ಇರಿಸಿದ್ದರು.

ಶಾಲಾ ಕೈತೋಟದ ಕಲ್ಪನೆ
ಕಳೆದ ವರ್ಷ ಈ ಶಾಲೆಯವರಿಗೆ ಒಂದು ವಿಲಕ್ಷಣ ಯೋಚನೆ ಬಂತು. ಅದೇನೆಂದರೆ ಈ ಬೆಳೆದ ಗಿಡಗಳನ್ನು ಕಿತ್ತು ಆ ಜಾಗದಲ್ಲಿ ಶಾಲಾ ಕೈತೋಟ ರಚನೆ ಮಾಡಲು ನಿರ್ಧರಿಸಲಾಯಿತು. ಜನವರಿ ತಿಂಗಳ ಸುಡು ಬಿಸಿಲಲ್ಲಿ ಜೆಸಿಬಿ ಬಂದಾಯಿತು. ಗಿಡಗಳನ್ನು ಕಿತ್ತದ್ದೂ ಆಯಿತು.

ಈ ಬಗ್ಗೆ ಉದಯವಾಣಿ ಸುದಿನದಲ್ಲಿ 2023ರ ಜನವರಿಯಲ್ಲಿ ವರದಿ ಪ್ರಕಟವಾದಾಗ ಶಾಲೆಯವರು ಅರಣ್ಯ ಇಲಾಖೆಯವರ ಮೊರೆ ಹೋದರು. ಇವುಗಳಲ್ಲಿ ಕೆಲವು ಗಿಡಗಳನ್ನು ಸ್ಥಳಾಂತರ ಮಾಡುವ ಚಿಂತನೆ ಮುಂದಿಟ್ಟರು.

ಅರಣ್ಯ ಇಲಾಖೆಯವರು ಕೂಡ ಹೆದ್ದಾರಿ ವಿಸ್ತರಣೆ ವೇಳೆ ಹಲವು ಕಡೆ ಈ ರೀತಿ ಸ್ಥಳಾಂತರಿಸಲಾಗಿದೆ. ನೆಟ್ಟ ಗಿಡಗಳನ್ನು ಬದುಕಿಸಲು ಸಾಧ್ಯವಾಗಿದೆ. ಅಲ್ಲೂ ಸರಿಯಾಗಿ ನೀರುಣಿಸಿದರೆ ಬದುಕಿಸುವುದು ಕಷ್ಟವಲ್ಲ ಎಂಬ ಆಶಾವಾದದ ಮಾತು ಆಡಲಾಯಿತು. ಆದರೂ 12 – 15 ಅಡಿಗಳಿಗೂ ಎತ್ತರವಾಗಿ ಬೆಳೆದು ಮರವಾಗತೊಡಗಿದ್ದ ಈ ಗಿಡಗಳು ಮತ್ತೆ ಬದುಕುವ ಬಗ್ಗೆ ಸಂಶಯವಿತ್ತು.

Advertisement

ಈಗ ಸಂಶಯ ನಿಜವಾಗಿದೆ. ಈಗ ಇದನ್ನು ಪರಿಶೀಲಿಸಿದಾಗ ಕಿತ್ತು ನೆಟ್ಟ 15 ಗಿಡಗಳು ಒಣಗಿ ಕಟ್ಟಿಗೆಯಾಗಿ ಹೋಗಿರುವುದು ಸೃಷ್ಟವಾಗಿ ಗೋಚರಿಸಿದೆ. ಈ ಒಣ ಮರಗಳಿಗೆ ಕಾಟು ಬಳ್ಳಿಗಳು ಹಬ್ಬಿಕೊಂಡು ಹಸುರು ತುಂಬಿದೆ. ಆದರೆ ಒಳಗಿನ ಮರ ಸತ್ತಿದೆ. ಅರಣ್ಯ ಇಲಾಖೆಯವರು ನೆಟ್ಟ ಗಿಡಗಳಿಗೆ ಶಾಲೆಯವರಾಗಲೀ ಇತರರೇ ಆಗಲೀ ನೀರೇ ಹಾಕಿಲ್ಲ ಎಂದ ಮೇಲೆ ಗಿಡಗಳು ಬದುಕುವುದಾದರೂ ಹೇಗೆ ಎಂದು ಪರಿಸರಪ್ರೇಮಿಗಳು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next