Advertisement

ಅನ್ನದಾತರಿಗೆ ಶಾಪವಾದ ಉಳಿಮೇಶ್ವರ ಕೆರೆ

01:13 PM Aug 05, 2019 | Naveen |

ಮುದಗಲ್ಲ: ಈ ಭಾಗದ ವಿವಿಧ ಗ್ರಾಮಗಳ ಸುಮಾರು 607 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸಬೇಕಿದ್ದ ಉಳಿಮೇಶ್ವರ ಕೆÃ,ೆ ನಿರ್ವಹಣೆ ಕೊರತೆ ಮತ್ತು ಮಳೆ ಅಭಾವದಿಂದಾಗಿ ಕಾಲುವೆಯಲ್ಲಿ ಹನಿ ನೀರು ಹರಿಯುತ್ತಿಲ್ಲ. ಪರಿಣಾಮ ರೈತರ ಪಾಲಿಗೆ ವರವಾಗಬೇಕಿದ್ದ ಉಳುಮೇಶ್ವರ ಕೆರೆ ಕಾಲುವೆ ರೈತರಿಗೆ ಶಾಪವಾಗಿ ಪರಿಣಮಿಸಿದೆ.

Advertisement

ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ, ಎಚ್.ಡಿ. ದೇವಗೌಡರು ನೀರಾವರಿ ಸಚಿವರಿದ್ದಾಗ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಸಮೀಪದ ಉಳಿಮೇಶ್ವರ ಗ್ರಾಮದಲ್ಲಿ ನಿರ್ಮಿಸಿದ ದೊಡ್ಡ ಕೆರೆ 82.55 ಹೆಕ್ಟೇರ್‌ ಪ್ರದೇಶ ವಿಸ್ತಿರ್ಣ ಹೊಂದಿದೆ. 92.87 ಎಂಟಿಎಫ್‌ಟಿ, ನೀರು ಸಂಗ್ರಹ ಸಾಮರ್ಥಯ ಹೊಂದಿದೆ. 39.16 ಹೆಕ್ಟೇರ್‌ ಕ್ಯಾಚ್ಪ್‌ ಏರಿಯಾದಿಂದ ಕೆರೆಗೆ ನೀರು ಹರಿದು ಬರುತ್ತದೆ. ಉಳಿಮೇಶ್ವರ, ಪಿಕಳಿಹಾಳ, ಕನ್ನಾಳ, ವ್ಯಾಸನಂದಿಹಾಳ, ನಾಗಲಾಪುರ ಸೇರಿದಂತೆ ಇತರ ಗ್ರಾಮಗಳ ಸುಮಾರು 607 ಹೆಕ್ಟೇರ್‌ ಪ್ರದೇಶದ ರೈತರ ಜಮೀನಿಗೆ ನೀರುಣಿಸುವ ಯೋಜನೆ ರೂಪಿಸಲಾಗಿತ್ತು. ಯೋಜನೆ ಜಾರಿಗೆ ಕೋಟ್ಯಂತರ ರೂ. ವ್ಯಯಿಸಿದ್ದರೂ ಈಗ ಕಾಲುವೆಯಲ್ಲಿ ನೀರು ಹರಿಯುತ್ತಿಲ್ಲ.

ಆದರೆ ಕೆರೆ ನಿರ್ವಹಣೆ ಹಾಗೂ ಮಳೆ ಕೊರತೆಯಿಂದ 200 ಎಕರೆ ಪ್ರದೇಶಕ್ಕೂ ನೀರು ತಲಪುತ್ತಿಲ್ಲ, ಕಾಲುವೆ ಮೂಲಕ ನೀರು ಹರಿಯುವುದಕ್ಕಿಂತ ಹಳ್ಳ, ನಾಲೆಗಳಲ್ಲಿ ನೀರು ವ್ಯರ್ಥವಾಗಿ ಹರಿಯುವುದೇ ಹೆಚ್ಚು ಎನ್ನುತ್ತಾರೆ ಪಿಕಳಿಹಾಳ ಗ್ರಾಮದ ರೈತ ಶರಣಪ್ಪ ಮಂಕಣಿ, ರಾಮಣ್ಣ ಮತ್ತು ಶೇಖರಪ್ಪ.

ಕೆರೆ-ಕಾಲುವೆ ದುರಸ್ತಿಗೆ ನಿರ್ಲಕ್ಷ್ಯ: ಕೆರೆ ಎಡ ಭಾಗಕ್ಕೆ ಕಾಲುವೆ ನಿರ್ಮಾಣ ಮಾಡಲಾಗಿದೆ. ಕಾಲುವೆ ನಿರ್ಮಾಣವಾದಾಗಿನಿಂದ ಇಲ್ಲಿಯವರೆಗೂ ಕಾಲುವೆಯಲ್ಲಿನ ಹೂಳು ತೆಗೆಯುವ, ಕಾಲುವೆ ದುರಸ್ತಿ ಮಾಡುವ ಕೆಲಸವಾಗಿಲ್ಲ. ಕೆರೆಯಲ್ಲಿನ ಹೂಳು ತೆಗೆಯಲು ಬಿಜೆಎಸ್‌ ಸಂಸ್ಥೆ ಹಾಗೂ ರಾಜ್ಯ ಸರಕಾರದ ಆಶ್ರಯದಲ್ಲಿ ಶಾಸಕರು ಚಾಲನೆ ನೀಡಿದ್ದರು. ಅದರೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕೆರೆ ಹೂಳನ್ನು ಹೊಲಕ್ಕೆ ತೆಗೆದುಕೊಂಡು ಹೋಗದ್ದಕ್ಕೆ ಹೂಳು ತೆರವು ಕಾರ್ಯ ಸ್ಥಗಿತಗೊಂಡಿದೆ. ಆದರೆ 2006-07ರಿಂದಲೂ ನಾಗಲಾಪುರ, ಬನ್ನಿಗೋಳ ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳೆತ್ತುವ ಕಾರ್ಯ ನಡೆಯುತ್ತಿರುವುದು ಮಾತ್ರ ಅಷ್ಟಕಷ್ಟೆ. 2010-11ರಲ್ಲಿ ಸಣ್ಣ ನಿರಾವರಿ ಇಲಾಖೆಯಿಂದ ಜಲ ಸಂವರ್ಧನ ಯೋಜನೆ ಸಂಘ(ಜೆಎಸ್‌ವೈಎಸ್‌) ಯೋಜನೆಯಡಿ ಉಳಿಮೇಶ್ವರ ಗ್ರಾಮದ ಶ್ರೀ ಗಂಗಾದೇವಿ ಕೆರೆ ನೀರು ಬಳಕೆದಾರರ ಸಂಘದ ವತಿಯಿಂದ ಸಮಗ್ರ ಕೆರೆ ಅಭಿವೃದ್ದಿ ಯೋಜನೆಗೆ 45.82 ಲಕ್ಷ ರೂ. ಹಾಗೂ ಸಿಎಲ್ ಕಾಮಗಾರಿಗೆ 43.08 ಲಕ್ಷ ರೂ.ಗಳಲ್ಲಿ ಕೆರೆ ಹೂಳು ತೆಗೆಸುವುದು, ಕಾಲುವೆ ರಿಪೇರಿ ಕಾಮಗಾರಿ ನಡೆಸಲಾಗಿದೆ. ಹೆಸರಿಗೆ ದೊಡ್ಡ ಕೆರೆಯಾದರೂ ನೀರು ಸಂಗ್ರಹ ಮಾತ್ರ ಅತೀ ಕಡಿಮೆ ಎನ್ನುತ್ತಾರೆ ಉಳಿಮೇಶ್ವರ ಗ್ರಾಮದ ರೈತ ಮುಖಂಡ ಯಂಕಣ್ಣ.

2014-15ರಲ್ಲಿ ಕೆರೆ ಅಭಿವೃದ್ದಿ ಕಾಯಕಕ್ಕೆ ಕೈ ಹಾಕಿದ ಆಗಿನ ಜೆಡಿಎಸ್‌ ಮುಖಂಡರೊಬ್ಬರು ಬಲ ಭಾಗದಲ್ಲಿ ಕೆರೆ ಒಡ್ಡಿಗೆ ತಡೆಗೋಡೆ ನಿರ್ಮಿಸಿ ಒಡ್ಡಿಗೆ ಹೊಸ ಮಣ್ಣಿನ ಲೇಪನ ಮಾಡಲಾಗಿದೆ. ಆದರೆ ಈ ಕಾಮಗಾರಿಯೂ ಅಷ್ಟಕ್ಕಷ್ಟೆ ಆಗಿದೆ ಎನ್ನುತ್ತಾರೆ ರೈತರು. ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ಬೇಕಾಬಿಟ್ಟಿ ಕೆಲಸ ಮಾಡಿದ್ದು, ರೈತರ ಹಿತರಕ್ಷಣೆ ಕಾಪಾಡಿಲ್ಲ ಎಂದು ಉಳಿಮೇಶ್ವರ ಗ್ರಾಮದ ರೈತರು ದೂರಿದ್ದಾರೆ.

Advertisement

ಕೆರೆಗೆ ಬೋಂಗಾ: ಕೆರೆ ದಂಡೆಗೆ ಹುತ್ತ ಬೆಳೆದಿದ್ದಲ್ಲದೇ, ಇಲಿ, ಹೆಗ್ಗಣಗಳು, ಹುಳ-ಹುಪ್ಪಡಿಗಳು ರಂಧ್ರ ಹಾಕಿರುವುರಿಂದ ಕೆರೆ ದಡಗಳಿಗೆ ದೊಡ್ಡ ಗಾತ್ರದ ಬೋಂಗಾಗಳು ಬಿದ್ದಿವೆ. ಕೆರೆಯ ನೀರು ಹರಿಸುವ ಕಾಲುವೆ ಗೇಟ್ ಮುರಿದಿದೆ. ಮಳೆಗಾಲದಲ್ಲಿ ಕೆರೆಯ ನೀರು ನಿಲ್ಲದೆ ಜಿನುಗಿ ಅಕ್ಕಪಕ್ಕದ ಹೊಲಗಳಿಗೆ ಹರಿದು ಬೆಳೆಗಳು ಜಲಾವೃತವಾಗುತ್ತವೆ ಎಂದು ಕೆರೆ ಪಕ್ಕದ ಜಮೀನಿನ ರೈತರು ಅಳಲು ತೋಡಿಕೊಂಡಿದ್ದಾರೆ.

ಶಾಸಕರು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆ ಅಭಿವೃದ್ಧಿ ಜತೆಗೆ ಕಾಲುವೆಯಲ್ಲಿನ ಹೂಳು ತೆರವು ಮತ್ತು ದುರಸ್ತಿಗೆ ಕ್ರಮ ವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next