ಮುದಗಲ್ಲ: ಸಮೀಪದ ಹಡಗಲಿ ತಾಂಡಾದ ಹೊರವಲಯದಲ್ಲಿ ನಿರ್ಮಿಸ ಲಾಗುತ್ತಿರುವ ಶಾಲಾ ಕಟ್ಟಡ ಕಾಮಗಾರಿ ಕಳಪೆಯಾಗಿದ್ದರಿಂದ ಯುವಕರು ಕಾಮಗಾರಿಗೆ ತಡೆಯೊಡ್ಡಿದ ಘಟನೆ ನಡೆದಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆ ಯಡಿ 2018-19ನೇ ಸಾಲಿನಲ್ಲಿ ಸುಮಾರು 10.60 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕಟ್ಟಡ ಕಾಮಗಾರಿ ಕೈಗೊಳ್ಳಲಾಗಿದೆ. ರಾಯಚೂರಿನ ಶಕ್ತಿನಗರ ಮೂಲದ ಕ್ಯಾಶುಟೆಕ್ ಏಜೆನ್ಸಿ ಕಟ್ಟಡ ನಿರ್ಮಾಣ ಉಸ್ತುವಾರಿ ನೀಡಲಾಗಿದೆ.
ಕಾಮಗಾರಿ ಆರಂಭದಿಂದಲೂ ಕಳಪೆ ಗುಣಮಟ್ಟದ ಉಸಕು, ಕಬ್ಬಿಣ, ಸಿಮೆಂಟ್ ಬಳಸಲಾಗುತ್ತಿದೆ. ನಿರ್ಮಾಣ ಹಂತದಲ್ಲೇ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ ಎಂದು ಯುವಕರು ದೂರಿದ್ದಾರೆ. ಶಾಲಾ ಕಟ್ಟಡದ ಛತ್ತಿಗೆ ಕೇವಲ 8 ಎಂಎಂ ಕಂಬಿಗಳನ್ನು ಬಳಸಲಾಗಿದೆ. ಭೀಮ್‌ಗೆ 12 ಮತ್ತು10 ಎಂಎಂ ಕಂಬಿ ಬಳಸಬೇಕು. ಛತ್ತಿಗೆ ಛತ್ತಿಗೆ 8 ಮತ್ತು 10 ಎಂಎಂ ಕಂಬಿಗಳನ್ನು ಬಳಸಬೇಕು. ಆದರೆ ಕ್ಯಾಶುಟೆಕ್ ಅಭಿಯಂತರ ತಿಮ್ಮಣ್ಣ ಬೇರೆಡೆ ಕಾಮಗಾರಿ ಮುಗಿಸಿ ಉಳಿದ 8 ಎಂಎಂ ಕಂಬಿಗಳನ್ನು ತಾಂಡಾದ ಶಾಲಾ ಕಟ್ಟಡಕ್ಕೆ ಬಳಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಹಾಗೂ ಮೂರನೇ ವ್ಯಕ್ತಿ ಕಾಮಗಾರಿ ಪರಿಶೀಲಿಸುವವರೆಗೆ ಕಟ್ಟಡ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ತಾಂಡಾದ ಯುವಕರಾದ ಮೌನೇಶ ರಾಠೊಡ, ಸುರೇಶ, ತಿರುಪತಿ ರಾಮಣ್ಣ, ಸಂತೋಷ ಗಂಗಪ್ಪ, ಕುಮಾರ ಮಾನಪ್ಪ, ಮಂಗಮ್ಮ ರಾಮಣ್ಣ, ಶೆಟಪ್ಪ ಎಚ್ಚರಿಸಿದ್ದಾರೆ.
ನಿರ್ಮಿತಿ ಕೇಂದ್ರ: ಇದೇ ತಾಂಡಾದಲ್ಲಿ 2018-19ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ 12 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಿಸಲಾಗುತ್ತಿದೆ. ಲಿಂಗಸುಗೂರಿನ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಕಟ್ಟಡ ನಿರ್ಮಾಣ ಉಸ್ತುವಾರಿ ವಹಿಸಲಾಗಿದೆ. ಕಟ್ಟಡಕ್ಕೆ ಹಾಕಿದ ಛತ್ತು ಒಂದೆಡೆ ಬಾಗಿದೆ. ಗೋಡೆಗಳು ಬಿರುಕು ಕಟ್ಟಡಕ್ಕೆ ಹಾಕಲಾದ ಕಾಲಂನ ಕಂಬಿಗಳು ಹೊರಗಡೆ ಕಾಣುತ್ತಿವೆ. ಕಟ್ಟಡಕ್ಕೆ ಬಳಸಿದ ಇಟ್ಟಿಗೆ ಮತ್ತು ಸಿಮೆಂಟ್ ಉದುರಿ ಬೀಳುತ್ತಿದೆ. ಸರಿಯಾಗಿ ಕ್ಯೂರಿಂಗ್ ಆಗಿಲ್ಲ. ನಿರ್ಮಿತಿ ಕೇಂದ್ರದ ಕಿರಿಯ ಅಭಿಯಂತರ ರಾಹುಲ್ ಕುಲಕರ್ಣಿ ಕಟ್ಟಡ ಪರಿಶೀಲನೆಗೆ ಬಂದಾಗ ತಾಂಡಾ ನಿವಾಸಿಗಳು ಕಟ್ಟಡ ಕಾಮಗಾರಿ ಕಳಪೆ ಕುರಿತು ಗಮನಕ್ಕೆ ತಂದರೂ ಸ್ಪಂದಿಸಿಲ್ಲ ಎಂದು ತಾಂಡಾದ ಲಿಂಬೆಣ್ಣ, ಥಾವರೆಪ್ಪ, ಪೀಕೆಪ್ಪ, ಶಂಕ್ರಪ್ಪ, ಮೌನೇಶ ರಾಠೊಡ ಆರೋಪಿಸಿದ್ದು, ಕಾಮಗಾರಿ ತಡೆಹಿಡಿಯಬೇಕೆಂದು ಆಗ್ರಹಿಸಿದ್ದಾರೆ.
ಅಂದಾಜು ಪತ್ರಿಕೆಯಂತೆ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಕಬ್ಬಿಣದ ಕಂಬಿ ಬಳಕೆ ಬಗ್ಗೆ ನನಗೆ ಗೊತ್ತಿಲ್ಲ. ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವೆ.
ತಿಮ್ಮಣ್ಣ,
ಕ್ಯಾಶುಟೆಕ್ ಅಭಿಯಂತರ
ಸಂಬಂಧಿಸಿದ ಇಂಜಿನಿಯರ್‌ಗಳಿಗೆ ಕಟ್ಟಡ ಕಾಮಗಾರಿಯನ್ನು ಅಂದಾಜು ಪತ್ರಿಕೆಯಂತೆ ಗುಣಮಟ್ಟದಿಂದ ನಿರ್ವಹಿಸಿ ಎಂದು ಹೇಳಿದರೆ ಕಾಮಗಾರಿ ಬೇಡ ಎಂದು ಮನವಿ ಪತ್ರ ಬರೆದು ಕೊಡುವಂತೆ ಹೆದರಿಸುತ್ತಿದ್ದಾರೆ.
ಮೌನೇಶ ರಾಠೊಡ,
ಅಧ್ಯಕ್ಷರು ಬಿಜೆಪಿ ಭೂತಮಟ್ಟ
ಹಡಗಲಿ ತಾಂಡಾ