ಮುದಗಲ್ಲ: ಮೇವ್ ಸಿಗಾಂಗಿಲ್ರಿ. ನೀರು ಕುಡಿಸೋದ್ ಕಷ್ಟ ಆಗ್ಯಾದ್ರಿ. ದನಕರ ಸಾಕೂದ್ ಭಾಳ್ ಕಷ್ಟ ಐತ್ರಿ. ಆದಕ್ ಮಾರಾಕ್ ಹತ್ತಿವ್ರಿ. ವರ್ಷ ಗಟ್ಟಲೇ ಸಾಕಿದ ಹಸು, ಎತ್ತುಗಳನ್ನು ಇನ್ನು ಮುಂದೆ ಸಾಕುವುದು ಅಸಾಧ್ಯ ಎಂದು ನಿರ್ಧರಿಸಿ ಮಾರಾಟ ಮಾಡಲು ಸಂತೆಗಳತ್ತ ಹೆಜ್ಜೆ ಇಡುತ್ತಿರುವ ರೈತರ ನೊವಿನ ನುಡಿಗಳಿವು. ನಾಲ್ಕೈದು ತಿಂಗಳಿಂದ ಮಳೆ ಇಲ್ಲದೆ ಭೂಮಿಯಲ್ಲಿ ಮೇವು ಬೆಳೆದಿಲ್ಲ. ಕಳೆದ ವರ್ಷ ಬೆಳೆದಿದ್ದ ಮೇವು ಇಲ್ಲಿಯತನಕ ಸಾಕಾಯಿತು. ಆದರೆ ಈಗ ದನಕರಗಳಿಗೆ ಮೇವಿಲ್ಲ. ನೀರು ಇಲ್ಲ. ಹೀಗಾಗಿ ಎತ್ತುಗಳನ್ನು ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ರೈತ ಹುಲಗಪ್ಪ.
Advertisement
ಈಗ ಲಿಂಗಸುಗೂರು ತಾಲೂಕಿನ ವಿವಿಧೆಡೆ ಜಾನುವಾರುಗಳ ಮಾರಾಟ ಜೋರಾಗಿಯೇ ನಡೆದಿದೆ. ಭೀಕರ ಬರಗಾಲದಲ್ಲಿ ತಮ್ಮ ಜಾನುವಾರುಗಳನ್ನು ಸಾಕಲಾಗದೆ ರೈತರು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರ ಲಾಭ ಪಡೆಯುತ್ತಿರುವ ದಲ್ಲಾಳಿಗಳು ಅಗ್ಗದ ದರದಲ್ಲಿ ಜಾನುವಾರುಗಳನ್ನು ಖರೀದಿಸಿ ಬೇರೆ ಜಿಲ್ಲೆ, ಹೊರ ರಾಜ್ಯಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.