Advertisement

ಜನತೆಗೆ ಟ್ಯಾಂಕರ್‌ ನೀರೇ ಗತಿ

11:26 AM Aug 14, 2019 | Naveen |

ದೇವಪ್ಪ ರಾಠೋಡ
ಮುದಗಲ್ಲ:
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮತ್ತು ಪ್ರವಾಹಕ್ಕೆ ಜನಜೀವನ ಅಸ್ತವ್ಯಸ್ತವಾಗಿದ್ದರೆ, ಲಿಂಗಸುಗೂರ ತಾಲೂಕಿನಲ್ಲಿ ಮಾತ್ರ ವಾಡಿಕೆ ಮಳೆ ಇಲ್ಲದೇ ಮಳೆಗಾಲದಲ್ಲೂ ಜನರು ಟ್ಯಾಂಕರ್‌ ನೀರನ್ನು ಅವಲಂಬಿಸುವಂತಾಗಿದೆ.

Advertisement

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಆ ಭಾಗದ ಜಲಾಶಯಗಳು ತುಂಬಿ ನದಿಗಳು ಉಕ್ಕಿ ಹರಿಯುತ್ತಿವೆ. ರಾಯಚೂರು ಜಿಲ್ಲೆಯಲ್ಲೇ ತುಂಗಭದ್ರಾ ಮತ್ತು ಕೃಷ್ಣಾ ನದಿ ಉಕ್ಕಿ ಹರಿಯುತ್ತಿವೆ. ಲಿಂಗಸುಗೂರು ತಾಲೂಕಿನಲ್ಲೂ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಆದರೆಲಿಂಗಸುಗೂರು ತಾಲೂಕಿನ ಗ್ರಾಮೀಣ ಜನತೆ ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ.

ಕಂದಾಯ ಇಲಾಖೆ ಅಧಿಕಾರಿಗಳು ಈ ಭಾಗದ ಐದು ಗ್ರಾಮಗಳಿಗೆ ಟ್ಯಾಂಕರ್‌ ನೀರು ಸರಬರಾಜು ಮಾಡುತ್ತಿದ್ದಾರೆ. 67 ಗ್ರಾಮಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ ಕೊಳವೆಬಾವಿ ಬಾಡಿಗೆ ಪಡೆದು ನೀರು ಪೂರೈಸುತ್ತಿದೆ. ಮಳೆಗಾಲ ಆರಂಭವಾಗಿ ಮೂರು ತಿಂಗಳು ಕಳೆಯುತ್ತಿದ್ದರೂ ತಾಲೂಕಿನ ಜಲಮೂಲಗಳಿಗೆ ಹನಿ ನೀರು ಹರಿದು ಬಂದಿಲ್ಲ. ಯಾವುದೇ ಕೆರೆ, ತೆರೆದ ಬಾವಿ, ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಿಲ್ಲ. ಮಳೆಗಾಲದಲ್ಲೂ ಜನ ನೀರಿಗಾಗಿ ಪರದಾಡುವಂತಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುರಿದ ಅಲ್ಪಸ್ವಲ್ಪ ಮಳೆ ಬೆಳೆಗಳಿಗೆ ಸ್ವಲ್ಪ ಅನುಕೂಲವಾಗಿದೆಯೇ ಹೊರತು, ಜನ-ಜಾನುವಾರುಗಳ ದಾಹನ ತಣಿಸುವಷ್ಟಾಗಿಲ್ಲ.

ಟ್ಯಾಂಕರ್‌ ನೀರು ಪೂರೈಕೆ: ಲಿಂಗಸುಗೂರು ತಾಲೂಕಿನ ನಿಲೋಗಲ್ಲ, ಗೆಜ್ಜಲಗಟ್ಟಾ, ಕಡ್ಡೋಣ, ಜಕ್ಕೇರಮಡು ಹಾಗೂ ಸೋಂಪುರ, ಗೊಲರಹಟ್ಟಿಗೆ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಇನ್ನು ಕನ್ನಾಳ, ತಿಮ್ಮಾಪುರ, ಮೂಡಲದಿನ್ನಿ, ಸುಲ್ತಾನಪುರ, ರಾಮಪ್ಪನ ತಾಂಡಾ, ರೂಪಚೇಂದ್ರಪ್ಪನ ತೋಟ, ಹಡಗಲಿ, ಹಡಗಲಿ ತಾಂಡಾ, ಸೋಂಪುರ ತಾಂಡಾ ಸೇರಿದಂತೆ ತಾಲೂಕಿನ 67 ಗ್ರಾಮಗಳಿಗೆ ಕೊಳವೆಬಾವಿ ಬಾಡಿಗೆ ಪಡೆದು ನೀರು ಪೂರೈಸುತ್ತಿದೆ.

ಪ್ರವಾಹ: ಕೃಷ್ಣ ನದಿ ಪ್ರವಾಹಕ್ಕೆ ಸಿಲುಕಿರುವ ಲಿಂಗಸುಗೂರ ತಾಲೂಕಿನ ಗಡಿಭಾಗದ ಗ್ರಾಮಗಳಾದ ಶೀಲಹಳ್ಳಿ, ಯರಗೋಡಿ, ಹಂಚಿನಾಳ, ಯರಜಂತಿ, ಕಡದರಗಡ್ಡಿ, ಗದ್ಗಿತಾಂಡಾ, ಟಣಮಣಕಲ್ಲ, ಜಲದುರ್ಗಾ ಸೇರಿದಂತೆ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗಿ, ಬೆಳೆ ಹಾನಿಯಾಗಿ ಜನ ತತ್ತರಿಸಿದ್ದಾರೆ. ಈ ಭಾಗದ ಜನತೆಗೂ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ನದಿ ತುಂಬಿ ಹರಿದರೂ ಜನ ನೀರಿಗಾಗಿ ಅಲೆಯುವಂತಾಗಿದ್ದು ವಿಪರ್ಯಾಸ.

Advertisement

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗಿರುವ ಗ್ರಾಮಗಳನ್ನು ಗುರುತಿಸಿ ತಾಲೂಕು ಆಡಳಿತದಿಂದ ಟ್ಯಾಂಕರ ನೀರು ಮತ್ತು ಕೊಳವೆಬಾವಿ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಇಲ್ಲಿಯವರೆಗೆ ಸಮರ್ಪಕ ಮಳೆ ಆಗದ್ದರಿಂದ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಮತ್ತು ಬಾಡಿಗೆ ಪಡೆದ ಕೊಳವೆಬಾವಿಗಳ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಶ್ರೀಮಂತ ಮಿಣಜಗಿ,
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು
ಪಿಆರ್‌ಇಡಿ ಉಪವಿಭಾಗ ಲಿಂಗಸುಗೂರ.

Advertisement

Udayavani is now on Telegram. Click here to join our channel and stay updated with the latest news.

Next