ಮುದಗಲ್ಲ: ಪ್ರಸಕ್ತ ವರ್ಷವೂ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಕೃಷಿ ಚಟುವಟಿಕೆಯಿಂದ ದೂರ ಉಳಿದಿದ್ದಾರೆ. ರಾಯಚೂರು ಜಿಲ್ಲೆಯ ಅಲ್ಲಲ್ಲಿ ಬಿದ್ದ ಅಲ್ಪಸ್ವಲ್ಪ ಮಳೆಗೆ ರೈತರು ಭೂಮಿಯನ್ನು ಹದ ಮಾಡಿಕೊಂಡು ಬಿತ್ತನೆಯ ಸಿದ್ಧತೆಯಲ್ಲಿದ್ದಾರೆ. ಆದರೆ ಮುದಗಲ್ಲ ಭಾಗದಲ್ಲಿ ರೈತರು ಈವರೆಗೆ ಭೂಮಿ ಕೂಡ ಹಸನು ಮಾಡಿಕೊಂಡಿಲ್ಲ.
ಲಿಂಗಸುಗೂರು ತಾಲೂಕಿನ ಅನೇಕ ಹಳ್ಳಿ, ತಾಂಡಾಗಳ ರೈತರು, ಕೃಷಿ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಮಹಾನಗರಗಳಿಗೆ ಗುಳೆ ಹೋಗಿದ್ದಾರೆ. ಪ್ರತಿ ವರ್ಷ ಮಳೆ ಸುರಿದ ನಂತರ ಗ್ರಾಮಕ್ಕೆ ಮರಳುತ್ತಿದ್ದ ರೈತರು, ಕಾರ್ಮಿಕರು, ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಇನ್ನೂ ಗ್ರಾಮಗಳತ್ತ ಮುಖ ಮಾಡಿಲ್ಲ. ತಾಲೂಕಿನಲ್ಲಿ ಉಳಿಮೆ ಮಾಡಲಾದ ಭೂಮಿಗಿಂತ ಹಾಗೇ ಬಿಟ್ಟ ಭೂಮಿಯೇ ಹೆಚ್ಚಿದೆ. ಕಳೆದ ಬಾರಿ ಇಷ್ಟೊತ್ತಿಗೆಲ್ಲ ರೈತರು ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಮುಂದಾಗಿದ್ದರು. ಆದರೆ ಈ ವರ್ಷ ಮಾತ್ರ ವರುಣ ಕೃಪೆ ತೋರದ್ದರಿಂದ ಮತ್ತೇ ಬರ ಆವರಿಸುವ ಆತಂಕ ರೈತರನ್ನು ಕಾಡುತ್ತಿದೆ.
ವಾಡಿಕೆಯಂತೆ ಜೂನ್ ತಿಂಗಳಲ್ಲಿ ಮುಂಗಾರು ಮಳೆ ಸುರಿದಿದ್ದರೆ ಈ ವೇಳೆಗಾಗಲೇ ಬಿತ್ತನೆ ಕಾರ್ಯ ಆರಂಭವಾಗಿ ಮುಗಿಯಬೇಕಿತ್ತು. ಆದರೆ ಸಮರ್ಪಕ ಮಳೆ ಬಾರದ್ದರಿಂದ ಕೆಲ ರೈತರು ಭೂಮಿ ಕೂಡ ಹದ ಮಾಡಿಕೊಂಡಿಲ್ಲ.
ಮುಂಗಾರಿಗೆ ಸೂರ್ಯಪಾನ, ಸಜ್ಜೆ, ತೊಗರಿ, ಹತ್ತಿ, ಎಳ್ಳು, ಹೆಸರು ಸೇರಿದಂತೆ ಇತರ ಪ್ರಮುಖ ಬೆಳೆಗಳನ್ನು ಬೆಳೆಯುವ ಈ ಪ್ರದೇಶದಲ್ಲಿ ಇನ್ನು ಮುಂದೆ ಮಳೆ ಸುರಿದಲ್ಲಿ ಬಿತ್ತನೆ ಮಾಡಿದರೂ ಸರಿಯಾಗಿ ಬೆಳೆ ಬರುವುದಿಲ್ಲ ಎನ್ನುತ್ತಾರೆ ರೈತರು.
ಮುದಗಲ್ಲ ಭಾಗದಲ್ಲಿ ಖುಷ್ಕಿ 16,290 ಹೆಕ್ಟೇರ್ ಹಾಗೂ ನೀರಾವರಿ 1,650 ಹೆಕ್ಟೇರ್ ಸೇರಿ ಒಟ್ಟು 17,940 ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಇದೆ. ಮೇ ಮತ್ತು ಜೂನ್‌ನಲ್ಲಿ 111 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ 54 ಮಿ.ಮೀ. ಮಳೆಯಾಗಿದೆ. ಮಳೆಯ ಕೊರತೆಯಿಂದ ಬಿತ್ತನೆ ಕುಂಠಿತಗೊಂಡಿದೆ. ಬಿತ್ತನೆಗೆ ಬೇಕಾಗುವ ಅಗತ್ಯ ಬೀಜ, ರಸಗೊಬ್ಬರವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.