Advertisement

ಹಳ್ಳಿಗಳಲ್ಲಿ ನೈರ್ಮಲ್ಯ ಮರೀಚಿಕೆ

10:49 AM Jul 14, 2019 | Naveen |

ಮುದಗಲ್ಲ: ಸಮೀಪದ ತಲೇಖಾನ ಗ್ರಾಪಂ ವ್ಯಾಪ್ತಿ ಹಳ್ಳಿಗಳಲ್ಲಿ ನೈರ್ಮಲ್ಯ ಎಂಬುದು ಮರೀಚಿಕೆಯಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ತಲೇಖಾನ ಸೇರಿ ಗ್ರಾಪಂ ವ್ಯಾಪ್ತಿಯ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದ್ದಾರೆ.

Advertisement

ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿ, ನೀರು ಸಂಗ್ರಹ ಗುಮ್ಮಿಗಳ ಸ್ವಚ್ಛತೆ, ಪ್ಲಾಟ್ಫಾರಂ ಸ್ವಚ್ಛತೆ ಹಾಗೂ ವಿವಿಧ ಗ್ರಾಮ ಮತ್ತು ತಾಂಡಾಗಳಲ್ಲಿ ಎಲ್ಲೆಂದರಲ್ಲಿ ಕೊಳಚೆ ನೀರು ನಿಂತು, ಹಸಿರುಪಾಚಿ ಕಟ್ಟಿ ದುರ್ವಾಸನೆ ಹರಡಿದೆ. ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿವೆ. ಕುಡಿಯುವ ನೀರಿನ ಸರಬರಾಜು ಪೈಪ್‌ಲೈನ್‌ಗಳು ದುರಸ್ತಿಗೀಡಾಗಿದ್ದು, ಎಲ್ಲೆಂದರಲ್ಲಿ ಸೋರುತ್ತಿವೆ. ಹೀಗಾಗಿ ನಲ್ಲಿಗಳಲ್ಲಿ ಕಲುಷಿತ ನೀರು ಪೂರೈಕೆ ಆಗುತ್ತಿದೆ. ಈ ನೀರು ಸೇವಿಸಿದ ಜನ ವಿವಿಧ ಕಾಯಿಲೆಗಳಿಂದ ಬಳಲುವಂತಾಗಿದೆ ಎಂದು ದೇಸಾಯಿ ಭೋಗಾಪುರ ತಾಂಡಾ ನಿವಾಸಿಗಳು ಆರೋಪಿಸಿದ್ದಾರೆ.

ಪಾಪಣ್ಣನ ತಾಂಡಾದಲ್ಲಿ ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿ ಸ್ವಚ್ಛತೆಗೊಳಿಸಿ ವರ್ಷ ಗತಿಸಿದೆ. ಗ್ರಾಪಂ ಆಡಳಿತ ಇತ್ತ ಹೊರಳಿ ನೋಡಿಲ್ಲ. ನೀರಿನಲ್ಲಿ ಹುಳುಗಳು ಉತ್ಪತಿಯಾಗಿವೆ. ಧೂಳು, ಕಸ-ಕಡ್ಡಿಗಳು ಬಿದ್ದು ನೀರು ಕಲುಷಿತವಾಗಿದೆ. ದುರ್ವಾಸನೆ ಬೀರಿದೆ. ಜಾನುವಾರುಗಳು ನೀರು ಕೂಡಿಯಲು ಹಿಂಜರಿಯುತ್ತಿವೆ. ಕಸ್ತೂರಿ ತಾಂಡಾದ ಬಾಪಣ್ಣನ ಮನೆ ಹತ್ತಿರ ನೀರು ಸಂಗ್ರಹವಾಗಿ ಹಸಿರು ಬಣ್ಣಕ್ಕೆ ತಿರುಗಿದ್ದು ತಾಂಡಾದ ತುಂಬ ವಾಸನೆ ಹರಡಿದೆ. ಗ್ರಾಪಂ ವತಿಯಿಂದ ಮರಂ ಹಾಕಿ ನೀರು ಮುಂದೆ ಹೋಗುವಂತೆ ಮಾಡಬೇಕೆಂದು ಮನವಿ ಮಾಡಿ ಸಾಕಾಗಿದೆ ಎಂದು ಬಾಪಣ್ಣ ಮತ್ತು ತಿಪ್ಪಣ್ಣ ಆರೋಪಿಸಿದ್ದಾರೆ.

ದೇಸಾಯಿ ಭೋಗಾಪುರ ಗ್ರಾಮದ ಸ.ಕಿ.ಪ್ರಾ. ಶಾಲೆ ಮುಂದಿನ ರಸ್ತೆಯಲ್ಲಿ ನೀರು ಹರಿದು ಪಾಚಿಗಟ್ಟಿದೆ. ಶಾಲೆಯ ಮಕ್ಕಳು ಅದೇ ನೀರಿನಲ್ಲಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಾನಪ್ಪ ಕಬಾಡರ್‌ ಮನೆಯ ಹಿಂದೆ ಚರಂಡಿ ತುಂಬಿ ಓಣಿಯ ಜನರಿಗೆ ತೊಂದರೆಯಾಗಿದೆ. ಹಡಗಲಿಯಲ್ಲಿ ಬಟ್ಟೆ, ಪಾತ್ರೆ ತೊಳೆಯುವ, ಬಚ್ಚಲ ನೀರು ರಸ್ತೆಗೆ ಹರಿಯುತ್ತಿದೆ. ಇದರಿಂದ ಗ್ರಾಮದಲ್ಲಿ ನೈರ್ಮಲ್ಯಹಾಳಾಗಿದೆ. ಹಡಗಲಿಯಿಂದ ಛತ್ತರ ರಾಮಜಿ ನಾಯಕ ತಾಂಡಾದವರೆಗೆ ಪಿಎಂಜಿಎಸ್‌ವೈ ಇಲಾಖೆ ಅಧಿಕಾರಿಗಳು ನಿರ್ಮಿಸುತ್ತಿರುವ ರಸ್ತೆ ಮಧ್ಯ ಕುಡಿಯುವ ನೀರಿನ ಪೈಪ್‌ಲೈನ್‌ ಸಿಕ್ಕಿಕೊಂಡಿದ್ದು, ರಸ್ತೆಯುದ್ದಕ್ಕೂ ಪೈಪ್‌ಲೈನ್‌ ಸೋರಿಕೆ ಆಗುತ್ತಿದ್ದು, ಈ ನೀರನ್ನೇ ಜನತೆ ಬಳಸುತ್ತಿದ್ದಾರೆ. ಸರಕಾರ ನೈರ್ಮಲ್ಯ ಕಾಪಾಡಲು 14ನೇ ಹಣಕಾಸು ಅನುದಾನ ಮತ್ತು ತೆರಿಗೆ ಸಂಗ್ರಹದಲ್ಲಿ ಅನುದಾನ ಮೀಸಲಿರಿಸಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಸಂಬಂದಿಸಿದವರಿಗೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಬೇಕು. ಗ್ರಾಮ ಮತ್ತು ತಾಂಡಾಗಳಲ್ಲಿ ಗಿಡಗಂಟಿಗಳು, ಪೊದೆಗಳು ಬೆಳೆದಿವೆ. ಎಲ್ಲೆಂದರಲ್ಲಿ ಕೊಳಚೆ ನೀರು ನೀರು ಸಂಗ್ರಹವಾಗಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಗ್ರಾಮ ಮತ್ತು ತಾಂಡಾಗಳ ಸ್ವಚ್ಛತೆಗೆ, ಚರಂಡಿ, ಸಿಸಿ ರಸ್ತೆಗಳ ನಿರ್ಮಾಣಕ್ಕೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು ಎಂದು ವೇಣ್ಯಪ್ಪನ ತಾಂಡಾದ ಗ್ರಾಪಂ ಸದಸ್ಯ ಗ್ಯಾನಪ್ಪ ಸಗರಪ್ಪ ಆಗ್ರಹಿಸಿದ್ದಾರೆ.

ಹಡಗಲಿ-ಛತ್ತರ ರಾಮಜಿ ನಾಯಕ ತಾಂಡಾ ಕುಡಿಯುವ ನೀರಿನ ಪೈಪ್‌ಲೈನ್‌ ರಸ್ತೆಯಲ್ಲಿ ಸಿಲುಕಿದೆ. ಸಂಬಂಧಿಸಿದ ಇಲಾಖೆಯವರು ಮರು ನಿರ್ಮಾಣ ಮಾಡಿಕೊಡುವುದಾಗಿ ಹೇಳಿದ್ದಾರೆ.
ಮಂಜುಳಾ ಪಂಚಾಳ, ಅಧ್ಯಕ್ಷರು,
ಪಿಡಿಒ ತಲೇಖಾನ ಗ್ರಾಪಂ

Advertisement
Advertisement

Udayavani is now on Telegram. Click here to join our channel and stay updated with the latest news.

Next