Advertisement

ಡಾಂಬರ್‌ ರಸ್ತೆ ಗುಂಡಿಗೆ ಮರಂ

10:37 AM Jul 21, 2019 | Naveen |

ಮುದಗಲ್ಲ: ಪಟ್ಟಣದಲ್ಲಿ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಪುರಸಭೆ ಡಾಂಬರ್‌-ಕಂಕರ್‌ ಹಾಕಿ ಮುಚ್ಚದೇ ಮರಂ ಹಾಕಿ ಮುಚ್ಚಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಪಟ್ಟಣ್ಣದ ಮೂಲಕ ಹಾದುಹೋಗಿರುವ ರಾಯಚೂರ-ಬೆಳಗಾವಿ ರಾಜ್ಯ ಹೆದ್ದಾರಿ, ಮಸ್ಕಿ ರಸ್ತೆ, ಹಳೆಪೇಟೆ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಪುರಸಭೆ ಮರಂ ಹಾಕಿ ಮುಚ್ಚುತ್ತಿದೆ. ಈ ರಸ್ತೆಗಳಲ್ಲಿ ಎಡಬಿಡದೇ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಡಾಂಬರ್‌-ಕಂಕರ್‌ ಹಾಕಿ ಗುಂಡಿಗಳನ್ನು ಮುಚ್ಚಿದ್ದರೆ ವಾಹನ ಚಾಲಕರು, ಸವಾರರಿಗೆ ಅನುಕೂಲವಾಗುತ್ತಿತ್ತು. ಆದರೆ ಮರಂ ಹಾಕಿ ಮುಚ್ಚಲಾಗುತ್ತಿದ್ದು, ಮಳೆ ಬಂದರೆ ಮತ್ತೆ ಕಿತ್ತಿಕೊಂಡು ಹೋಗುತ್ತದೆ. ಅಲ್ಲದೇ ಮರಂನಿಂದ ರಸ್ತೆಯಲ್ಲೆಲ್ಲ ಧೂಳು ಏಳುತ್ತದೆ. ರಸ್ತೆ ಬದಿಯಲ್ಲಿ ಮಾರುವ ತಿಂಡಿತಿನಿಸುಗಳ ಮೇಲೆ, ಹಣ್ಣು-ತರಕಾರಿಗಳ ಮೇಲೆ ಧೂಳು ಮೆತ್ತುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ಸರಕಾರಿ ಆಸ್ಪತ್ರೆಯಿಂದ ಕಿಲ್ಲಾದ ಕಂದಗದವರೆಗೆ, ಪೊಲೀಸ್‌ ಠಾಣೆ ಮುಂಭಾಗದಿಂದ ವೆಂಕಟರಾಯನ ಪೇಟೆ ಸರಕಾರಿ ಶಾಲೆವರೆಗೆ, ಚಾವಡಿ ಕಟ್ಟೆಯಿಂದ ಗೋಪಾಲಕೃಷ್ಣ ಪ್ರೌಢ ಶಾಲೆವರೆಗೆ ವಿಪರೀತ ಧೂಳು ಏಳುತ್ತದೆ. ರಸ್ತೆಗೆ ವಾಹನ ಬಂದರೆ ಹಿಂಬದಿಯಲ್ಲಿ ಬರುವ ವಾಹನಗಳು ಕಾಣದಂತಾಗುತ್ತದೆ. ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳ ಮಾಲೀಕರಿಗೂ ಧೂಳಿನ ಕಿರಿಕಿರಿ ತಪ್ಪಿಲ್ಲ,

ಪುರಸಭೆಗೆ ಬಂದ ನೂತನ ಮುಖ್ಯಾಧಿಕಾರಿ ನರಸಿಂಹಮೂರ್ತಿ ಸಾರ್ವಜನಿಕರು ಕಸ-ಕಡ್ಡಿ ಬಿಸಾಡುವ ಸ್ಥಳದಲ್ಲಿ ರಂಗೋಲಿಗಳನ್ನು ಬಿಡಿಸುವ ಮೂಲಕ ಸ್ವಚ್ಛತೆಗೆ ಮುಂದಾಗಿದ್ದರು. ಆದರೆ ಈಗ ತಾವೇ ಮುಂದೆ ನಿಂತು ಡಾಂಬರ್‌ ರಸ್ತೆಗಳಲ್ಲಿ ಬಿದ್ದ ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಕರವೇ ಘಟಕ ಅಧ್ಯಕ್ಷ ಎಸ್‌.ಎ. ನಯಿಮ್‌ ದೂರಿದ್ದಾರೆ. ಮರಂ ಹಾಕಿದ ಎರಡೇ ದಿನಕ್ಕೆ ಸುರಿದ ಅಲ್ಪಮಳೆಗೆ ರಸ್ತೆಗಳು ಕೆಸರು ಮಯವಾಗಿವೆ. ಕೆಸರಿನಲ್ಲಿ ತೇವಾಂಶ ಕಡಿಮೆಯಾದ ತಕ್ಷಣಕ್ಕೆ ರಭಸದಿಂದ ಬರುವ ವಾಹನಗಳಿಂದ ಧೂಳು ಏಳುತ್ತಿದೆ.

ನಿಯಮ ರೂಪಿಸಿಲ್ಲ: ಪಟ್ಟಣದಲ್ಲಿ ಯಾವುದೇ ಮನೆ, ಅಂಗಡಿಗಳನ್ನು ದುರಸ್ತಿಗೊಳಿಸಿದರೆ, ಅಥವಾ ಹಳೆ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಬೇಕಾಗುವ ಮಣ್ಣು, ಉಸುಕು, ಕಲ್ಲು, ಕಂಕರುಗಳನ್ನು ರಸ್ತೆಯಲ್ಲಿಯೇ ಸಂಗ್ರಹಿಸಿ ಉಪಯೋಗಿಸುವುದರಿಂದ ಪಟ್ಟಣದ ಬಹುತೇಕ ಡಾಂಬರ್‌ ಮತ್ತು ಸಿಸಿ ರಸ್ತೆಗಳು ಹಾಳಾಗಿವೆ. ಪಟ್ಟಣದಲ್ಲಿ ಧೂಳು ಮತ್ತು ಕೊಳಚೆ ಸಂಗ್ರಹವಾಗುತ್ತಿದೆ. ಹೊಸ‌ ಕಟ್ಟಡಕ್ಕೆ ಪರವಾನಗಿ ನೀಡುವ ಪುರಸಭೆ ಅಧಿಕಾರಿಗಳು ಸ್ವಚ್ಛತೆಗೆ ಯಾವುದೇ ನಿಯಮವಳಿ ರೂಪಿಸದೇ ಇರುವುದು ಇದಕ್ಕೆ ಕಾರಣವಾಗಿದೆ. ಪಟ್ಟಣದಲ್ಲಿ ಹದೆಗೆಟ್ಟಿರುವ ರಸ್ತೆ, ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ ಧೂಳು ಮುಕ್ತ ಪಟ್ಟಣ್ಣವನ್ನಾಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next