ಮುದಗಲ್ಲ: ವಿಜಯಪುರ ಆದಿಲ್ ಶಾಹಿ ಯುದ್ಧದಲ್ಲಿ ಮುದಗಲ್ಲ ಕೋಟೆ ವಶಪಡಿಸಿಕೊಂಡ ನಂತರ ತನ್ನೊಂದಿಗೆ ತಂದಿದ್ದ ಆಲಂ (ದೇವರು)ಗಳನ್ನು ಸ್ಥಾಪಿಸಿ ಪೂಜಿಸುತ್ತಾನೆ. ಅಂದಿನಿಂದ ಪಟ್ಟಣದಲ್ಲಿ ಮೊಹರಂ ಹಬ್ಬವನ್ನು ಶ್ರೀಮಂತ-ಬಡವ, ಮೇಲು-ಕೀಳು ಎಂಬ ಭೇದವಿಲ್ಲದೆ ವೈಭವದಿಂದ ಆಚರಿಸಲಾಗುತ್ತಿದೆ. ಹೀಗಾಗಿ ಪಟ್ಟಣದಲ್ಲಿ ನಡೆಯುತ್ತಿರುವ ಐತಿಹಾಸಿಕ ಮೊಹರಂ ಹಬ್ಬ ಭಾವೈಕ್ಯತೆಯ ಸಂಕೇತವಾಗಿದೆ.
ಕೊರೊನಾದಿಂದ ಕಳೆದ ಎರಡು ವರ್ಷಗಳಿಂದ ರದ್ದಾಗಿದ್ದ ಮೊಹರಂ ಆಚರಣೆ ಪ್ರಸಕ್ತ ವರ್ಷ ನಡೆಯುತ್ತಿದ್ದು, ಪಟ್ಟಣದ ಎಲ್ಲೆಡೆ ಹಬ್ಬದ ವಾತಾವರಣ ಕಳೆಕಟ್ಟಿದೆ. ಸತತ 10 ದಿನಗಳ ಕಾಲ ಆಚರಿಸಲ್ಪಡುವ ಮೊಹರಂ ಹಬ್ಬ ದಕ್ಷಿಣ ಭಾರತದಲ್ಲಿಯೇ ಹೆಸರುವಾಸಿಯಾಗಿದೆ. ವಕ್ಫ್ ಬೋರ್ಡ್, ಕಂದಾಯ ಇಲಾಖೆ ಮತ್ತು ಪುರಸಭೆಯಿಂದ ಸೌಕರ್ಯ ನೀಡಲಾಗುತ್ತಿದೆ.
ಜು.31ರಂದು ರಾತ್ರಿ ಝಂಡಾ ಹಾರಿಸಿ ಆಲಾಯಿ ಕುಣಿ ಹಾಕುವ ಮೂಲಕ ಮೊಹರಂ ಆಚರಣೆಗೆ ಚಾಲನೆ ನೀಡಲಾಗಿದೆ. ವಿವಿಧ ಬಗೆಯ ಧಾರ್ಮಿಕ ಕಾರ್ಯಕ್ರಮ ಜರುಗುತ್ತವೆ. ಹಿಂದು-ಮುಸ್ಲಿಮರು ಒಗ್ಗಟ್ಟಿನಿಂದ ಆಚರಿಸುವ ಮೊಹರಂದಲ್ಲಿ 5ನೇ ದಿನ ಹಜರತ್ ಹುಸೇನ್ ಆಲಂ ದರ್ಗಾದ ಮುಂದಿನ ದ್ವಾರ ಬಾಗಿಲು ಮೇಲೆ ಬೆಳ್ಳಿಯ ತೂಗು ಸರಪಳಿ (ಝೂಲಾ) ಕಟ್ಟುವರು. ಆ.8ರಂದು ಕಿಲ್ಲಾದಲ್ಲಿನ ಹಜರತ್ ಹುಸೇನ್ ಮತ್ತು ಮೆಗಳಪೇಟೆಯ ಹಜರತ್ ಹಸನ್ ಪೀರರ ಸವಾರಿ ನಡೆಯಲಿದೆ.
ಆ.9ರಂದು ಮೊಹರಂ ಕೊನೆಯ ದಿನವಾಗಿದ್ದು, ಸುತ್ತಲಿನ ಹಳ್ಳಿಗಳಿಂದ ಬಂದ ಲಕ್ಷಾಂತರ ಭಕ್ತರು ಹಸೇನ್, ಹುಸೇನ್ ದೇವರುಗಳಿಗೆ ಭಕ್ತಿಯಿಂದ ಮುಡಿಪು, ಕೆಂಪು ಸಕ್ಕರೆ, ಹೂ, ಕಾಯಿಗಳ ಹರಕೆ ಅರ್ಪಿಸುತ್ತಾರೆ. ಆಲಂ(ದೇವರು) ಗಳ ಕೊನೆಯ ಭೇಟಿ ಮಂಗಳವಾರ ಸಂಜೆ ನಡೆಯಲಿದೆ. ಭಕ್ತರು ಐತಿಹಾಸಿಕ ಕೋಟೆ ಗೋಡೆ, ಚಾವಡಿ, ಮನೆ ಮಾಳಗಿಗಳ ಮೇಲೆ ನಿಂತು ವೀಕ್ಷಿಸುತ್ತಾರೆ. ಈ ದೃಶ್ಯ ನೋಡಲು ದುಬಾಯಿ, ಅರಬ್ ದೇಶಗಳಿಂದ ಮತ್ತು ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಆಂಧ್ರ ಸೇರಿದಂತೆ ರಾಜ್ಯದ ಭಕ್ತರು ಮುದಗಲ್ಲ ಮೊಹರಂಗೆ ಬರುತ್ತಾರೆ. ಪಟ್ಟಣದಲ್ಲಿನ ಹತ್ತಾರು ದರ್ಗಾಗಳಿಗೆ ಸುಣ್ಣ-ಬಣ್ಣ ಹಚ್ಚಲಾಗಿದೆ.
ದರ್ಗಾಗಳಿಗೆ ಅಲಂಕಾರಿಕ ವಿದ್ಯುತ್ ದೀಪಗಳನ್ನು ಹಾಕಲಾಗಿದೆ. ನಿತ್ಯ ಸಾವಿರಾರು ಭಕ್ತರು ಹರಕೆ ತೀರಿಸುತ್ತಿರುವುದು ಕಂಡು ಬರುತ್ತಿದೆ.