ಮುದಗಲ್ಲ: ವಾರ್ಷಿಕ ಪರೀಕ್ಷೆಯಲ್ಲಿ ಅಂಕ ನೀಡಿಕೆಯಲ್ಲಿ ಉಪನ್ಯಾಸಕರು, ಪ್ರಾಂಶುಪಾಲರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ ಪದ್ಮಾವತಿ ದೇಶಪಾಂಡೆ ಪಿಕಳಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಗುರುವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ತಮಗೆ ಇಷ್ಟ ಬಂದಂತೆ ಅಧಿಕಾರ ಚಲಾಯಿಸುತ್ತಾರೆ. ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿನ 52 ವಿದ್ಯಾರ್ಥಿಗಳಿಗೆ ಹಾಜರಾತಿ ಕಡಿಮೆ ಇದೆ ಎಂಬ ಕಾರಣಕ್ಕೆ ಅವರ ಹೆಸರನ್ನು ಸೂಚನಾ ಫಲಕದಲ್ಲಿ ಪ್ರಕಟಿಸಿ ಅವರಿಗೆ ಪರೀಕ್ಷೆ ಪ್ರವೇಶ ಪತ್ರ ಕೊಡಲಿಲ್ಲ. ಆದರೆ ಈ ಪೈಕಿ ತಮಗೆ ಆಪ್ತರಾದ 6 ಜನ ವಿದ್ಯಾರ್ಥಿಗಳಿಂದ ಹಣ ಪಡೆದು ಪರೀಕ್ಷಾ ಪ್ರವೇಶ ಪತ್ರ ನೀಡಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದರು.
ನಿತ್ಯ ಕಾಲೇಜಿಗೆ ಹಾಜರಾಗಿ ಓದುವ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ನೀಡಿದ್ದಾರೆ. ಕಾಲೇಜಿಗೆ ಹಾಜರಾಗದೇ ಪರೀಕ್ಷೆಗೆ ಹಾಜರಾದವರಿಗೆ ಹೆಚ್ಚು ಅಂಕ ನೀಡಿದ್ದಾರೆ. ಇದರ ಹಿಂದೆ ಉಪನ್ಯಾಸಕರು, ಪ್ರಾಚಾರ್ಯರ ಕೈವಾಡವಿದೆ. ಕಾಲೇಜಿನ ಉಪನ್ಯಾಸಕಿಯೊಬ್ಬರ ಮಗಳು ತರಗತಿಗೆ ಹಾಜರಾಗದಿದ್ದರೂ ಅವಳೇ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸುವಂತೆ ಅಂಕ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಂದ 100ರಿಂದ 500 ರೂ.ವರೆಗೆ ದಂಡ ವಸೂಲಿ ಮಾಡುತ್ತಿದ್ದು, ಈ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅನುಮಾನವಿದೆ. ಇದನ್ನು ಪ್ರಶ್ನಿಸಿದರೆ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಬೆದರಿಕೆ ಹಾಕುತ್ತಾರೆ ಎಂದು ವಿದ್ಯಾರ್ಥಿಗಳಾದ ಅಲ್ತಾಫ್, ಮೌಲಾಸಾಬ್, ಸಮೀರ್, ಅಲ್ಲಾವಲಿ, ಶರಣಬಸವ, ಶಿವಕುಮಾರ, ಸಲ್ಮಾನ್ ಖಾನ್, ಕೃಷ್ಣ, ಬಂದೇನವಾಜ್, ವಿಜಯ, ಅಲ್ಲಾವಲಿ, ಗೌಡಪ್ಪ, ಗಿರಿಯಪ್ಪ ಇತರರು ದೂರಿದರು.
ಸೌಲಭ್ಯ ಕೊರತೆ: ಪಧವಿ ಕಾಲೇಜಿನ ಗ್ರಂಥಾಲಯದಲ್ಲಿ ಪುಸ್ತಕಗಳು, ಪತ್ರಿಕೆಗಳು ಇರುವುದಿಲ್ಲ, ವಿದ್ಯಾರ್ಥಿಗಳು ಕೇಳಲು ಹೋದರೇ ಸರಕಾರ, ಇಲಾಖೆಯಿಂದ ಬಂದಿಲ್ಲ ಎನ್ನತ್ತಾರೆಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಈಗಿರುವ ಟ್ಯಾಂಕ್ ಸ್ವಚ್ಛ ಮಾಡುತ್ತಿಲ್ಲ. ಶೌಚಾಲಯ ಸೇರಿ ಮೂಲ ಸೌಕರ್ಯ ಕೊರತೆ ಇದೆ ಎಂದು ವಿದ್ಯಾರ್ಥಿಗಳು ದೂರಿದರು.