Advertisement
ಬುಧವಾರ ನಡೆಯುವ ಪಾಲಿಕೆ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಆಯುಕ್ತರ ವರ್ತನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರವೊಂದನ್ನು ಕೈಗೊಳ್ಳಲಾಗುತ್ತದೆ. ಕ್ರಮಕ್ಕೆ ಶಿಫಾರಸು ಮೂಲಕ ನಿರ್ಣಯ ಕೈಗೊಳ್ಳಲಾಗುತ್ತದೆಯೋ ಅಥವಾ ಇಂತಹ ವರ್ತನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವಂತೆ ತಿಳಿಸುವ ನಿರ್ಧಾರಕ್ಕೆ ಬರಲಾಗುತ್ತದೆಯೋ ಎಂಬ ಕುತೂಹಲ ಮೂಡಿಸಿದೆ.
Related Articles
Advertisement
ಆಯುಕ್ತರ ವಿರುದ್ಧ ಕ್ರಮಕ್ಕೆ ಶಿಫಾರಸಿನ ನಿರ್ಣಯವನ್ನು ಕೈಗೊಳ್ಳಬೇಕಾದರೆ ಪಾಲಿಕೆಯಲ್ಲಿ 2/3ರಷ್ಟು ಸದಸ್ಯರ ಬೆಂಬಲ ಅಗತ್ಯವಾಗಿದೆ. ಇಂತಹ ನಿರ್ಣಯ ಕೈಗೊಳ್ಳಬೇಕಾದರೆ ಆಡಳಿತ, ವಿಪಕ್ಷಗಳ ಸದಸ್ಯರು ಒಮ್ಮತಾಭಿಪ್ರಾಯಕ್ಕೆ ಬಂದರೆ ಮಾತ್ರ ಇದು ಸಾಧ್ಯವಾಗಲಿದೆ.
ಲಾಭ-ನಷ್ಟ, ಪರಿಣಾಮದ ಲೆಕ್ಕಾಚಾರ: ಆಯುಕ್ತರ ವಿರುದ್ಧ ಕ್ರಮದ ಶಿಫಾರಸ್ಸು ನಿರ್ಣಯ ಕೈಗೊಳ್ಳುವಂತೆ ಬಿಜೆಪಿಯವರನ್ನು ಕೆಲ ವಿಪಕ್ಷಗಳ ಸದಸ್ಯರು ಒತ್ತಾಯಿಸುತ್ತಿದ್ದಾರೆ. ಆದರೆ ಬಿಜೆಪಿ ಸದಸ್ಯರು ಏಕಾಏಕಿ ನಿರ್ಣಯ ಕೈಗೊಳ್ಳುವ ಬದಲು ಇದರಿಂದಾಗುವ ರಾಜಕೀಯ ಹಾಗೂ ಕಾನೂನಾತ್ಮಕ ಪರಿಣಾಮಗಳ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಆಯುಕ್ತರ ವಿರುದ್ಧ ಕ್ರಮದ ಶಿಫಾರಸು ನಿರ್ಣಯವನ್ನು ಕೈಗೊಂಡರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದು, ಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಮುಜುಗರ ತರುವಂತೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಈ ಶಿಫಾರಸಿಗೆ ಮನ್ನಣೆ ನೀಡದಿದ್ದರೆ ಹೇಗೆ ಎಂಬ ಚಿಂತೆ ಬಿಜೆಪಿಯವರನ್ನು ಕಾಡ ತೊಡಗಿದೆ.
ಅಲ್ಲದೆ ನಿರ್ಣಯದ ವಿರುದ್ಧ ಆಯುಕ್ತರು ಕಾನೂನು ಹೋರಾಟಕ್ಕೆ ಮುಂದಾದರೆ ಹೇಗೆ ಮತ್ತು ಏನಾಗಲಿದೆ ಎಂಬ ಲೆಕ್ಕಾಚಾರವೂ ನಡೆದಿದೆ. ಹಿರಿಯ ಸದಸ್ಯ ಡಾ| ಪಾಂಡುರಂಗ ಪಾಟೀಲ ಉದ್ದೇಶಿಸಿ ಆಯುಕ್ತರು ಏರುಧ್ವನಿಯಲ್ಲಿ ಮಾತನಾಡಿರುವುದು ಸಹಜವಾಗಿಯೇ ಬಿಜೆಪಿ ಸದಸ್ಯರಿಗೆ ಆಕ್ರೋಶ ತರಿಸಿದೆ.
ಈ ಹಿಂದೆ ಧಾರವಾಡದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಗಣೇಶ ಟಗರಗುಂಟಿ ವಿರುದ್ಧ, ಸುದ್ದಿಗೋಷ್ಠಿ ಕುರಿತಾಗಿ ಬಿಜೆಪಿ ಸದಸ್ಯ ವೀರಣ್ಣ ಸವಡಿ, ಸುಧೀರ ಸರಾಫ್ ವಿರುದ್ಧ ಆಯುಕ್ತರು ಹೇಳಿಕೆ ನೀಡಿದ್ದು ಅಸಮಾಧಾನದ ಹೊಗೆಯಾಡುವಂತೆ ಮಾಡಿತಲ್ಲದೆ ಇದೀಗ ಅದು ಸ್ಫೋಟಗೊಳ್ಳುವಂತೆ ಮಾಡಿದೆ.
ಆಯುಕ್ತರ ವಿರುದ್ಧ ಕ್ರಮದ ಶಿಫಾರಸು ಇನ್ನಿತರ ಯಾವುದೇ ನಿರ್ಣಯದ ಬಗ್ಗೆ ಮುಂದಡಿ ಇರಿಸುವ ಮೊದಲು ಬಿಜೆಪಿ ನಾಯಕರಾದ ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ ಅವರೊಂದಿಗೆ ಸಮಾಲೋಚಿಸಿ ಬಿಜೆಪಿ ಸದಸ್ಯರು ನಿರ್ಧಾರ ಕೈಗೊಳ್ಳಬೇಕಿದೆ.
ಬುಧವಾರ ನಡೆಯುವ ಪಾಲಿಕೆ ಸಾಮಾನ್ಯ ಸಭೆಯ ಅರ್ಧಗಂಟೆ ಮೊದಲು ಎಲ್ಲ ಪಕ್ಷಗಳ ಹಿರಿಯ ಸದಸ್ಯರು ಸಭೆ ಸೇರಲಿದ್ದು, ಆಯುಕ್ತರ ವರ್ತನೆ ಕುರಿತಾಗಿ ಯಾವ ಕ್ರಮ ಎಂಬುದರ ಬಗ್ಗೆ ಮತ್ತೂಮ್ಮೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಯಾವ ನಿರ್ಣಯ ಕೈಗೊಳ್ಳುತ್ತಾರೋ ಕಾದು ನೋಡಬೇಕು.
* ಅಮರೇಗೌಡ ಗೋನವಾರ